ಅಲ್ ರಯಾನ್: ಅರ್ಜೆಂಟೀನ-ಫ್ರಾನ್ಸ್ ನಡುವೆ ಭಾನುವಾರ ನಡೆಯಲಿರುವ ಫೈನಲ್‌ಗೆ ಕ್ಷಣಗಣನೆ ಆರಂಭಗೊಂಡಿರುವಂತೆಯೇ; ಇತ್ತ ಕ್ರೊವೇಷ್ಯಾ-ಮೊರಾಕ್ಕೊ ನಡುವಿನ ತೃತೀಯಸ್ಥಾನಕ್ಕಾಗಿನ ಕದನಕ್ಕೆ ರಂಗ ಸಜ್ಜಾಗಿದೆ. ಶನಿವಾರ ರಾತ್ರಿ ಅಲ್ ರಯಾನ್ ಅಂತಾರಾಷ್ಟ್ರೀಯ ಮೈದಾನದಲ್ಲಿ ಇತ್ತಂಡಗಳ ನಡುವೆ ಸ್ಪರ್ಧೆ ಏರ್ಪಡಲಿದೆ.
ಒಂದೇ ಗುಂಪಿನ ತಂಡಗಳು: ಸೆಮಿಫೈನಲ್‌ನಲ್ಲಿ ಒಂದೂ ಗೋಲು ಬಾರಿಸಲಾಗದೆ ಸೋತ ಈ ಎರಡು ತಂಡಗಳು, ಕಂಚು ಗೆದ್ದು ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ಹವಣಿಸುತ್ತಿವೆ. ವಿಶೇಷವೆಂದರೆ, ಇವೆರಡೂ ಲೀಗ್ ಹಂತದಲ್ಲಿ ಒಂದೇ ಗ್ರೂಪ್‌ನಲ್ಲಿ ಆಡಿದ ತಂಡಗಳು. ಅಜೇಯ ಮೊರಾಕ್ಕೊ ಎಫ್ ವಿಭಾಗದ ಅಗ್ರಸ್ಥಾನಿಯಾಗಿದ್ದರೆ, ಕ್ರೊವೇಷ್ಯಾ ದ್ವಿತೀಯ ಸ್ಥಾನದೊಂದಿಗೆ ನಾಕೌಟ್ ಪ್ರವೇಶಿಸಿತ್ತು.
ಸ್ವಾರಸ್ಯವೆಂದರೆ, ಇತ್ತಂಡಗಳು ವಿಶ್ವಕಪ್‌ನಲ್ಲಿ ಮುಖಾಮುಖಿಯಾದದ್ದು ಇದೇ ಮೊದಲು. ಲೀಗ್ ಹಂತದಲ್ಲಿ ಮೊರಾಕ್ಕೊ-ಕ್ರೊವೇಷ್ಯಾ ನಡುವಿನ ಪಂದ್ಯ ಗೋಲ್‌ಲೆಸ್ ಡ್ರಾ ಆಗಿತ್ತು. ಹೀಗೆ ಒಂದೇ ವಿಶ್ವಕಪ್‌ನಲ್ಲಿ ಈ ತಂಡಗಳು 2ನೇ ಸಲ ಎದುರಾಗಲಿವೆ. ಸಮಬಲದ ಹೋರಾಟ ನಡೆದೀತು ಎಂಬುದು ಫುಟ್‌ಬಾಲ್ ಪಂಡಿತರ ಅನಿಸಿಕೆ.
ಕಳೆದ ಸಲ ಫೈನಲ್ ತನಕ ಸಾಗಿ ಫ್ರಾನ್ಸ್‌ಗೆ ಶರಣಾಗಿದ್ದ ಕ್ರೊವೇಷ್ಯಾಕ್ಕೆ ಈ ಬಾರಿ ಇನ್ನಷ್ಟು ಹಿಂಬಡ್ತಿ ಪಡೆಯಬೇಕಾದ ಸ್ಥಿತಿ ಎದುರಾಗಿದೆ. ಆದರೆ ಮೊರಾಕ್ಕೊ ಪಾಲಿಗೆ ಇದೊಂದು ಬಂಪರ್ ಹಾಗೂ ಬೋನಸ್. ಏಕೆಂದರೆ ಅದು ವಿಶ್ವಕಪ್ ಇತಿಹಾಸದಲ್ಲಿ ಸೆಮಿಫೈನಲ್ ತನಕ ಬಂದದ್ದು ಇದೇ ಮೊದಲು. ಹೀಗಾಗಿ ಕಳೆದುಕೊಳ್ಳುವಂಥದ್ದೇನಿಲ್ಲ. ಸದ್ಯದ ಸಮಸ್ಯೆಯೆಂದರೆ, ಗಾಯಾಳುಗಳದ್ದು.
ಸೆಮಿಫೈನಲ್‌ನಲ್ಲಿ ರಕ್ಷಣಾ ಆಟಗಾರ ವಾಲಿದ್ ರೆಗ್ರಾಗುಯಿ ಅತ್ಯುತ್ತಮ ಪ್ರದರ್ಶನ ನೀಡಿದರೂ ನಡುವಲ್ಲೇ ಹೊರನಡೆದರು. ನಯೆಫ್ ಪಂದ್ಯಕ್ಕೂ ಮೊದಲೇ ಹೊರಬಿದ್ದರು. ನಾಯಕ ರೊಮೇನ್ ಸೈಸ್ 20 ನಿಮಿಷ ಆಡಿ ಮೈದಾನ ತೊರೆದರು. ಈ ಮೂವರೂ ಶನಿವಾರದ ಪಂದ್ಯದಿಂದ ಹೊರಗುಳಿದರೆ ಮೊರಾಕ್ಕೊ ನಿಜಕ್ಕೂ ಸಂಕಟಕ್ಕೆ ಸಿಲುಕಲಿದೆ.
ಇನ್ನೊಂದೆಡೆ ಕ್ರೊವೇಷ್ಯಾದ ಕೋಚ್ ಡಾಲಿಕ್ ಮುಂದೆ ಬಲಿಷ್ಠ ತಂಡವನ್ನು ಕಣಕ್ಕಿಳಿಸುವ ಅವಕಾಶವಿದೆ. ಮಿಡ್‌ಫಿàಲ್ಡರ್ ಮಾರ್ಸೆಲೊ ಗಾಯಾಳಾಗಿರುವುದು ಕ್ರೊವೇಷ್ಯಾಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡಲಿಕ್ಕಿಲ್ಲ.
ಕತಾರ್ ರೆಫ್ರೀ: ಪ್ಲೇ ಆಫ್ ಪಂದ್ಯಕ್ಕೆ ಆತಿಥೇಯ ಕತಾರ್‌ನ ಅಬ್ದುಲ್ ಹಾಮ್ ಅಲ್ ಜಾಸಿಮ್ ಅವರನ್ನು ಮ್ಯಾಚ್ ರೆಫ್ರಿಯನ್ನಾಗಿ ನೇಮಿಸಲಾಗಿದೆ. ಅವರಿಗೆ ಈ ಕೂಟದಲ್ಲಿ ಲಭಿಸಿದ ಕೇವಲ 2ನೇ ಅವಕಾಶ ಇದಾಗಿದೆ. ಯುಎಸ್‌ಎ-ವೇಲ್ಸ್ ನಡುವಿನ ಗ್ರೂಪ್ ಎ ಪಂದ್ಯದಲ್ಲಿ ಮೊದಲ ಸಲ ಕಣಕ್ಕಿಳಿದಿದ್ದರು.