Advertisement
ಹರಾರೆಯಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನೆದರ್ಲೆಂಡ್ಸ್ 6 ವಿಕೆಟ್ ನಷ್ಟಕ್ಕೆ 315 ರನ್ ಪೇರಿಸಿತು. ಜಿಂಬಾಬ್ವೆ ಕೇವಲ 40.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 319 ರನ್ ಬಾರಿಸಿ ಜಯಭೇರಿ ಮೊಳಗಿಸಿತು. ಇದು ಜಿಂಬಾಬ್ವೆಗೆ ಒಲಿದ ಸತತ 2ನೇ ಗೆಲುವು. “ಎ’ ವಿಭಾಗದ ಮೊದಲ ಪಂದ್ಯದಲ್ಲಿ ಅದು ನೇಪಾಲವನ್ನು 8 ವಿಕೆಟ್‌ಗಳಿಂದ ಮಣಿಸಿತ್ತು.
ಮಧ್ಯಮ ಕ್ರಮಾಂಕದ ಬ್ಯಾಟರ್ ಸಿಕಂದರ್ ರಝ ಅವರ ಆಲ್‌ರೌಂಡ್ ಸಾಹಸ ಜಿಂಬಾಬ್ವೆ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿತು. 4 ವಿಕೆಟ್ ಉರುಳಿಸುವ ಜತೆಗೆ ಅಜೇಯ ಶತಕ ಬಾರಿಸಿ “ಹರಾರೆ ಹೀರೋ” ಎನಿಸಿದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರಝ ಕೇವಲ 54 ಎಸೆತಗಳಿಂದ 102 ರನ್ ಬಾರಿಸಿದರು. ಸಿಡಿಸಿದ್ದು 8 ಸಿಕ್ಸರ್ ಹಾಗೂ 6 ಬೌಂಡರಿ. ಸಿಕ್ಸರ್ ಮೂಲಕ ಅವರು ತಮ್ಮ ಶತಕ ಹಾಗೂ ತಂಡದ ಗೆಲುವನ್ನು ಒಟ್ಟಿಗೇ ಸಾರಿದರು. ಇದು ಜಿಂಬಾಬ್ವೆ ಕ್ರಿಕೆಟ್ ಇತಿಹಾಸದ ಅತೀ ವೇಗದ ಶತಕವಾಗಿದೆ.
ವನ್‌ಡೌನ್ ಬ್ಯಾಟರ್ ಸೀನ್ ವಿಲಿಯಮ್ಸ್ 91 ರನ್ ಕೊಡುಗೆ ಸಲ್ಲಿಸಿದರು. ಎದುರಿಸಿದ್ದು 58 ಎಸೆತ, ಸಿಡಿಸಿದ್ದು 10 ಬೌಂಡರಿ ಹಾಗೂ 2 ಸಿಕ್ಸರ್. ಆರಂಭಿಕರಾದ ಜಾಯ್‌ಲಾರ್ಡ್ ಗುಂಬಿ (40) ಮತ್ತು ಕ್ರೆಗ್ ಇರ್ವಿನ್ (50) 13.3 ಓವರ್‌ಗಳಿಂದ 80 ರನ್ ಒಟ್ಟುಗೂಡಿಸಿ ಉತ್ತಮ ಬುನಾದಿ ನಿರ್ಮಿಸಿದರು. ನೆದರ್ಲೆಂಡ್ಸ್‌ನ ಬೃಹತ್ ಮೊತ್ತದಲ್ಲಿ ಮೂವರ ಅರ್ಧ ಶತಕದ ಕಾಣಿಕೆ ಇತ್ತು. ಓಪನರ್‌ಗಳಾದ ವಿಕ್ರಮ್‌ಜಿತ್ ಸಿಂಗ್ 88, ಮ್ಯಾಕ್ಸ್ ಓಡೌಡ್ 59 ರನ್ ಬಾರಿಸಿದರು. ಮೊದಲ ವಿಕೆಟಿಗೆ 20.2 ಓವರ್‌ಗಳಿಂದ 120 ರನ್ ಒಟ್ಟುಗೂಡಿತು. ಮಧ್ಯಮ ಕ್ರಮಾಂಕದ ಆಟಗಾರ, ನಾಯಕ ಸ್ಕಾಟ್ ಎಡ್ವರ್ಡ್ಸ್ 83 ರನ್ ಮಾಡಿದರು.
Related Articles
Advertisement
ನೇಪಾಲ ವಿಕ್ರಮಹರಾರೆಯಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ನೇಪಾಲ 6 ವಿಕೆಟ್‌ಗಳಿಂದ ಯುಎಸ್‌ಎ ತಂಡವನ್ನು ಮಣಿಸಿತು. ಯುಎಸ್‌ಎ 49 ಓವರ್‌ಗಳಲ್ಲಿ 209 ರನ್ ಮಾಡಿತು. ನೇಪಾಲ 43 ಓವರ್‌ಗಳಲ್ಲಿ 4 ವಿಕೆಟಿಗೆ 211 ರನ್ ಮಾಡಿ ಅಂಕದ ಖಾತೆ ತೆರೆಯಿತು. ಯುಎಸ್‌ಎ ಸರದಿಯಲ್ಲಿ ವಿಕೆಟ್ ಕೀಪರ್ ಶಯಾನ್ ಜಹಾಂಗೀರ್ ಅವರ ಕೊಡುಗೆಯೇ ಅಜೇಯ 100 ರನ್ ಆಗಿತ್ತು (79 ಎಸೆತ, 10 ಬೌಂಡರಿ, 3 ಸಿಕ್ಸರ್). ಚೇಸಿಂಗ್ ವೇಳೆ ನೇಪಾಲದ ವನ್‌ಡೌನ್ ಬ್ಯಾಟರ್ ಭೀಮ್ ಶಾರ್ಕಿ ಅಜೇಯ 77 ರನ್ ಹೊಡೆದರು. ಇದು ಯುಎಸ್‌ಎಗೆ ಎದುರಾದ ಸತತ 2ನೇ ಸೋಲು. ಮೊದಲ ಪಂದ್ಯದಲ್ಲಿ ಅದು ವೆಸ್ಟ್ ಇಂಡೀಸ್‌ಗೆ 39 ರನ್ನುಗಳಿಂದ ಶರಣಾಗಿತ್ತು. ಸಂಕ್ಷಿಪ್ತ ಸ್ಕೋರ್: ಯುಎಸ್‌ಎ-49 ಓವರ್‌ಗಳಲ್ಲಿ 207 (ಜಹಾಂಗೀರ್ ಔಟಾಗದೆ 100, ಸುಶಾನ್ ಮೊದಾನಿ 42, ಕರಣ್ ಕೆ.ಸಿ. 33ಕ್ಕೆ 4, ಗುಲ್ಶನ್ ಝಾ 52ಕ್ಕೆ 3, ದೀಪೇಂದ್ರ ಸಿಂಗ್ 15ಕ್ಕೆ 2). ನೇಪಾಲ-43 ಓವರ್‌ಗಳಲ್ಲಿ 4 ವಿಕೆಟಿಗೆ 211 (ಭೀಮ್ ಶಾರ್ಕಿ ಔಟಾಗದೆ 77, ಕುಶಲ್ ಭುರ್ಟೆಲ್ 39, ದೀಪೇಂದ್ರ ಸಿಂಗ್ ಔಟಾಗದೆ 39). ಪಂದ್ಯಶ್ರೇಷ್ಠ: ಕರಣ್ ಕೆ.ಸಿ.