Advertisement

World cup Cricket ಜಗತ್ತನ್ನು ಬೆರಗುಗೊಳಿಸಿದ ಭಾರತ !

11:11 PM Sep 24, 2023 | Team Udayavani |

ವಿಶ್ವ ಕ್ರಿಕೆಟಿನ ಮತ್ತು ಭಾರತೀಯ ಕ್ರಿಕೆಟಿನ ನಕ್ಷೆಯನ್ನೇ ಬದಲಿಸಿದ್ದು 1983ರ ವಿಶ್ವಕಪ್‌! ಹಿಂದಿನೆರಡು ಬಾರಿಯ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ನ ಸೊಕ್ಕಡಗಿಸಿದ ಭಾರತ ಅಂದು ಕ್ರಿಕೆಟ್‌ ಸಿಂಹಾಸನವನ್ನೇರಿದ ಸುವರ್ಣ ಸಮಯವದು. ವಿಂಡೀಸ್‌ ಹ್ಯಾಟ್ರಿಕ್‌ ಸಾಧಿಸುವುದು ಪಕ್ಕಾ ಎಂದೇ ಭಾವಿಸಿದವರನ್ನೆಲ್ಲ ಕಪಿಲ್‌ ಡೆವಿಲ್ಸ್‌ ಹೆಡೆಮುರಿ ಕಟ್ಟಿ ಕೆಡವಿತ್ತು. ಸ್ವತಃ ಭಾರತೀಯರೂ ಕಲ್ಪಿಸದ, ನಿರೀಕ್ಷಿಸಿಯೇ ಇರದ ಅಮೃತ ಘಳಿಗೆ ಅದಾಗಿತ್ತು!

Advertisement

ಭಾರತದ ಹಿಂದಿನೆರಡು ವಿಶ್ವಕಪ್‌ ಹಣೆಬರಹ ತಿಳಿದಿದ್ದವರಿಗೆ ಹೆಚ್ಚಿನ ನಂಬಿಕೆಯೇನೂ ಇರಲಿಲ್ಲ. ಆದರೆ ಕಪಿಲ್‌ ಸಾರಥ್ಯದ ಹೊಸ ಹುರುಪಿನ, ಬಿಸಿರಕ್ತದ, ಅಪ್ಪಟ ಸವ್ಯಸಾಚಿಗ ಳನ್ನೇ ಹೊಂದಿದ್ದ ತಂಡವೊಂದು ಅಂದು ಲಂಡನ್‌ ವಿಮಾನವೇರಿತ್ತು. ಇದೊಂದು ಅಪಾಯಕಾರಿ ತಂಡ ಎಂದು ಎಚ್ಚರಿಸಿದವರು ಆಸ್ಟ್ರೇಲಿಯದ ನಾಯಕ ಕಿಂ ಹ್ಯೂಸ್‌ ಮಾತ್ರ. ಇನ್ನೊಂದೆಡೆ “ವಿಸ್ಡನ್‌’ ಸಂಪಾದಕ ಡೇವಿಡ್‌ ಫ್ರೀತ್‌, ಭಾರತದಂಥ ಕಳಪೆ ತಂಡವನ್ನು ವಿಶ್ವಕಪ್‌ನಲ್ಲಿ ಆಡಿಸುವುದರಲ್ಲಿ ಅರ್ಥವೇ ಇಲ್ಲ, ಒಂದು ವೇಳೆ ಭಾರತ ಚಾಂಪಿಯನ್‌ ಆದರೆ ನಾನಿಲ್ಲಿ ಬರೆದುದನ್ನು ಹರಿದು ತಿನ್ನುತ್ತೇನೆ ಎಂದು ಖಾರವಾಗಿ ಬರೆದಿ ದ್ದರು. ಕಪಿಲ್‌ ಪಡೆ ವಿಸ್ಡನ್‌ ಸಂಪಾದಕ ರಿಗೆ ಕಾಗದವನ್ನು ತಿನ್ನಿಸಿಯೇ ಬಿಟ್ಟಿತು!

ವಿಂಡೀಸ್‌ಗೆ ಮೊದಲ ಆಘಾತ
ಎಂದಿನಂತೆ ಇದನ್ನೂ ಪ್ರುಡೆನ್ಶಿಯಲ್‌ ಕಂಪೆನಿಯೇ ಪ್ರಾಯೋಜಿ ಸಿತ್ತು. ಆತಿಥ್ಯ ಇಂಗ್ಲೆಂಡ್‌ನ‌ದೇ ಆಗಿತ್ತು. ಎಂಟೇ ತಂಡಗಳಿದ್ದವು. 1982ರ ಐಸಿಸಿ ಟ್ರೋಫಿ ಗೆದ್ದ ಜಿಂಬಾಬ್ವೆ ನೂತನ ತಂಡವಾಗಿತ್ತು.
“ಬಿ’ ವಿಭಾಗದಲ್ಲಿದ್ದ ಭಾರತಕ್ಕೆ ಬಲಿಷ್ಠ ವೆಸ್ಟ್‌ ಇಂಡೀಸ್‌ ಪಡೆಯೇ ಮೊದಲ ಎದುರಾಳಿ. ಮ್ಯಾಂಚೆಸ್ಟರ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮ್ಯಾಜಿಕ್‌ ಒಂದು ನಡೆದೇ ಬಿಟ್ಟಿತು. ವಿಶ್ವಕಪ್‌ನಲ್ಲಿ ಸೋಲನ್ನೇ ಕಾಣದೆ ಮೆರೆದಾಡುತ್ತಿದ್ದ ದೈತ್ಯ ವಿಂಡೀಸ್‌ ತಂಡವನ್ನು ಕಪಿಲ್‌ ಪಡೆ 34 ರನ್ನುಗಳಿಂದ ಉರುಳಿಸಿತ್ತು. ಕ್ರಿಕೆಟ್‌ ಜಗತ್ತು ಬೆರಗುಗೊಂಡಿತು. ಭಾರತ ಈ ಕೂಟದಲ್ಲಿ ಮಹತ್ವದ್ದೇನೋ ಸಾಧಿಸಲಿದೆ ಎಂಬುದರ ಮೊದಲ ಸುಳಿವು ಸಿಕ್ಕಿತು!
ಬಳಿಕ ಜಿಂಬಾಬ್ವೆಯನ್ನು 5 ವಿಕೆಟ್‌ಗಳಿಂದ ಮಣಿಸಿದ ಭಾರತ, ಆಸ್ಟ್ರೇಲಿಯ ಕೈಯಲ್ಲಿ 162 ರನ್ನುಗಳ ದೊಡ್ಡ ಸೋಲಿಗೆ ತುತ್ತಾಯಿತು.

ದ್ವಿತೀಯ ಸುತ್ತಿನ ಹಣಾಹಣಿಯಲ್ಲಿ ವಿಂಡೀಸ್‌ 66 ರನ್ನುಗಳಿಂದ ಗೆದ್ದು ಸೇಡು ತೀರಿಸಿಕೊಂತು. ಭಾರತ ಸೆಮಿ ಫೈನಲ್‌ ಪ್ರವೇಶಿಸಬೇಕಾದರೆ ಉಳಿದೆ ರಡೂ ಪಂದ್ಯಗಳನ್ನು ಗೆಲ್ಲಲೇಬೇಕಿತ್ತು.

ಕಪಿಲ್‌ ಸುಂಟರಗಾಳಿ
ಭಾರತ-ಜಿಂಬಾಬ್ವೆ ಪಂದ್ಯದ ಸ್ಟೋರಿ ಈಗಾಗಲೇ ಜಗದ್ವಿಖ್ಯಾತ. ತಾನಾಡಿದ ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯವನ್ನು 13 ರನ್ನುಗಳಿಂದ ಮಣಿಸಿದ ತಂಡವದು. ಇಲ್ಲಿ ಭಾರತದ 5 ವಿಕೆಟ್‌ಗಳನ್ನು 17 ರನ್ನಿಗೆ ಉರುಳಿಸಿ ಮತ್ತೂಂದು ಏರುಪೇರಿಗೆ ಸ್ಕೆಚ್‌ ಹಾಕಿತ್ತು. ಆದರೆ ಕಪಿಲ್‌ ಸುಂಟರಗಾಳಿಗೆ ಸಿಲುಕಿದ ಜಿಂಬಾಬ್ವೆ 31 ರನ್ನುಗಳ ಸೋಲನುಭವಿಸಿತು. ಭಾರತದ ಈ ಗೆಲುವು ಆಸ್ಟ್ರೇಲಿ ಯವನ್ನು 118 ರನ್ನುಗಳ ಭಾರೀ ಅಂತರದಿಂದ ಸೋಲಿಸಲು ಸ್ಫೂರ್ತಿ ಆಯಿತು. ಭಾರತ ಮೊದಲ ಬಾರಿಗೆ ಸೆಮಿಫೈನಲ್‌ಗೆ ಲಗ್ಗೆ ಹಾಕಿತ್ತು!

Advertisement

ಆಂಗ್ಲರ ಆಟವೂ ನಡೆಯಲಿಲ್ಲ
ಆತಿಥೇಯ ಇಂಗ್ಲೆಂಡ್‌ ಸೆಮಿ ಎದುರಾಳಿ. ಅದು ಮೊದಲ ಟ್ರೋಫಿಯ ಹುಡುಕಾಟದಲ್ಲಿತ್ತು. ಆದರೆ ಭಾರತ ಆಂಗ್ಲರಿಗೂ ನೀರು ಕುಡಿಸಿತು. ಅಂತರ 6 ವಿಕೆಟ್‌. ಪಾಕಿಸ್ಥಾನನ್ನು 8 ವಿಕೆಟ್‌ಗಳಿಂದ ಮಣಿಸಿದ ವೆಸ್ಟ್‌ ಇಂಡೀಸ್‌ ಮತ್ತೆ ಫೈನಲ್‌ಗೆ ನುಗ್ಗಿ ಬಂತು. ಕಪಿಲ್‌ ಪಡೆಯನ್ನು 183ಕ್ಕೆ ಹಿಡಿದು ನಿಲ್ಲಿಸಿದ ವಿಂಡೀಸ್‌ ಆಗಲೇ ಹ್ಯಾಟ್ರಿಕ್‌ ಸಾಧಿಸಿದ ಉತ್ಸಾಹದಲ್ಲಿತ್ತು. ಆದರೆ ಲಾರ್ಡ್ಸ್‌ನಲ್ಲಿ ಸಂಭವಿಸಿದ್ದೇ ಬೇರೆ.ಭಾರತ 43 ರನ್‌ ಜಯಭೇರಿ ಮೊಳಗಿಸಿತ್ತು. ಜಾಗತಿಕ ಕ್ರಿಕೆಟ್‌ ಭೂಪಟದಲ್ಲಿ ಭಾರತದ ಹೆಸರು ಸುವರ್ಣಾಕ್ಷರದಲ್ಲಿ ಹೊಳೆಯತೊಡಗಿತು!

Advertisement

Udayavani is now on Telegram. Click here to join our channel and stay updated with the latest news.

Next