Advertisement
ನ್ಯೂಜಿಲ್ಯಾಂಡ್‌ಗೆ ಇದು ಮೊದಲ ಫೈನಲ್ ಆಗಿತ್ತು. ಆದರೆ ಮೆಲ್ಬರ್ನ್ ಮೇಲಾಟದಲ್ಲಿ ಅದು ಫೈನಲ್ ಜೋಶ್ ತೋರಲೇ ಇಲ್ಲ. ಮೊದಲು ಬ್ಯಾಟಿಂಗ್ ನಡೆಸಿ 183ಕ್ಕೆ ಕುಸಿಯಿತು. ಇದು 1983ರ ಫೈನಲ್‌ನಲ್ಲಿ ಭಾರತ ಗಳಿಸಿದ ಸ್ಕೋರ್ ಆಗಿತ್ತು ಎಂಬುದನ್ನು ನೆನಪಿಸಿಕೊಳ್ಳಬಹುದು. ಆದರೆ ಕಪಿಲ್ ಬಳಗದಂತೆ ಇದನ್ನು ಉಳಿಸಿಕೊಳ್ಳುವ ಲಕ್ ಕಿವೀಸ್‌ಗೆ ಇರಲಿಲ್ಲ. ಆಸ್ಟ್ರೇಲಿಯ 33.1 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 186 ರನ್ ಬಾರಿಸಿ ಜಯಭೇರಿ ಮೊಳಗಿಸಿತು. ಅತ್ಯಧಿಕ ವಿಶ್ವಕಪ್ ಗೆದ್ದ ತನ್ನ ದಾಖಲೆಯನ್ನು ಕಾಂಗರೂ ಪಡೆ 5ಕ್ಕೆ ವಿಸ್ತರಿಸಿತು. ಅಂದು ಆಸೀಸ್ ನಾಯಕರಾಗಿದ್ದವರು ಮೈಕಲ್ ಕ್ಲಾರ್ಕ್.
ಇಲ್ಲಿ 2011ರ ಮಾದರಿಯನ್ನೇ ಮುಂದುವರಿಸಲಾಯಿತು. 14 ತಂಡಗಳ ನಡುವಿನ ಸ್ಪರ್ಧೆ ಇದಾಗಿತ್ತು. ಒಂದೊಂದು ವಿಭಾಗದಲ್ಲಿ 7 ತಂಡಗಳಿದ್ದವು. ಪ್ರತೀ ಗುಂಪಿನಲ್ಲಿ ಅಗ್ರ 4 ಸ್ಥಾನ ಪಡೆದ ತಂಡಗಳು ಕ್ವಾರ್ಟರ್ ಫೈನಲ್‌ನಲ್ಲಿ ಆಡಿದವು. ಬಳಿಕ ಸೆಮಿಫೈನಲ್ ಹಾಗೂ ಫೈನಲ್. ಇನ್ನು ಮುಂದೆ ವಿಶ್ವಕಕಪ್ ಕ್ರಿಕೆಟ್ ಪಂದ್ಯಾವಳಿ ಹತ್ತೇ ತಂಡಗಳಿಗೆ ಸೀಮಿತಗೊಳ್ಳಲಿದೆ ಎಂದು ಐಸಿಸಿ ಅಂದೇ ಘೋಷಿಸಿತ್ತು.
Related Articles
Advertisement
ಲೀಗ್ ಹಂತದಲ್ಲಿ ಹಾಲಿ ಚಾಂಪಿಯನ್ ಭಾರತ ಮತ್ತು ನ್ಯೂಜಿಲ್ಯಾಂಡ್ ನಿರ್ವಹಣೆ ಅಮೋಘವಾಗಿತ್ತು. ಎರಡೂ ತಂಡಗಳು ತಮ್ಮ ತಮ್ಮ ವಿಭಾಗದಲ್ಲಿ ಆರೂ ಪಂದ್ಯಗಳನ್ನು ಗೆದ್ದು ಅಜೇಯ ಸಾಧನೆಗೈದವು. “ಎ’ ವಿಭಾಗದಿಂದ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಕ್ವಾರ್ಟರ್ ಫೈನಲ್ ತಲುಪಿದವು. ಲೀಗ್ ಹಂತದಲ್ಲಿ ಉದುರಿದ ದೊಡ್ಡ ತಂಡವೆಂದರೆ ಇಂಗ್ಲೆಂಡ್.
“ಬಿ’ ವಿಭಾಗದಿಂದ ಭಾರತ, ದಕ್ಷಿಣ ಆಫ್ರಿಕಾ, ಪಾಕಿಸ್ಥಾನ, ವೆಸ್ಟ್ ಇಂಡೀಸ್ ಮುನ್ನಡೆ ಸಾಧಿಸಿದವು. ಭಾರತ ತನ್ನ ಲೀಗ್ ಅಭಿಯಾನವನ್ನು ಪಾಕಿಸ್ಥಾನ ವಿರುದ್ಧ ಆರಂಭಿಸಿತ್ತು. ಧೋನಿ ಪಡೆ ಇದನ್ನು 76 ರನ್ನುಗಳಿಂದ ಗೆದ್ದು ಪಾಕ್ ವಿರುದ್ಧ ತಾನು ಅಜೇಯ ಎಂಬುದನ್ನು ಮತ್ತೂಮ್ಮೆ ನಿರೂಪಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಭಾರತ ಬಾಂಗ್ಲಾದೇಶವನ್ನು 109 ರನ್ನುಗಳಿಂದ ಕೆಡವಿತು. ಆದರೆ ಸೆಮಿಫೈನಲ್‌ನಲ್ಲಿ ಆತಿಥೇಯ ಆಸ್ಟ್ರೇಲಿಯದ ಸವಾಲನ್ನು ಎದುರಿಸಿ ನಿಲ್ಲಲಾಗಲಿಲ್ಲ. ಇಲ್ಲಿ 95 ರನ್ನುಗಳ ಸೋಲುಂಡ ಭಾರತ ಕೂಟದಿಂದ ಹೊರಬಿದ್ದು ಮಾಜಿ ಆಯಿತು.
ಸಿಡ್ನಿ ಸೆಣಸಾಟದಲ್ಲಿ ಆಸ್ಟ್ರೇಲಿಯ 7ಕ್ಕೆ 328 ರನ್ ಪೇರಿಸಿದರೆ, ಭಾರತ 233ಕ್ಕೆ ಕುಸಿಯಿತು. ಇನ್ನೊಂದು ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ 4 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿತು. ಇದು ಡಿ-ಎಲ್ ನಿಯಮದಂತೆ ದಾಖಲಾದ ಫಲಿತಾಂಶವಾಗಿತ್ತು.