Advertisement

World Cup:13ನೇ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಕ್ಕೆ ಮೊದಲ ಗೆಲುವು

11:43 PM Oct 16, 2023 | Team Udayavani |

ಲಕ್ನೋ: ಐದು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯ ಕೊನೆಗೂ 13ನೇ ವಿಶ್ವಕಪ್‌ನಲ್ಲಿ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ಸು ಕಂಡಿದೆ. ಸೋಮವಾರ ಲಕ್ನೋದಲ್ಲಿ ನಡೆದ ಮುಖಾಮುಖೀ ಯಲ್ಲಿ ಆಸೀಸ್‌ 5 ವಿಕೆಟ್‌ಗಳಿಂದ ಶ್ರೀಲಂಕಾವನ್ನು ಕೆಡವಿತು.

Advertisement

ಇದು ಎರಡೂ ತಂಡಗಳ 3ನೇ ಮುಖಾಮುಖಿಯಾಗಿತ್ತು. ಮೊದಲೆರಡೂ ಪಂದ್ಯಗಳಲ್ಲಿ ಸೋಲನ್ನೇ ಕಂಡಿದ್ದವು. ಇಲ್ಲಿ ಆಸ್ಟ್ರೇಲಿಯದ ಸೋಲಿನ ಸರಪಳಿ ಮುರಿಯಿತು. ಲಂಕಾ ಹ್ಯಾಟ್ರಿಕ್‌ ಸೋಲಿಗೆ ಸಿಲುಕಿತು.

ಇದು ಲಂಕೆಯ ನಾಟಕೀಯ ಕುಸಿತಕ್ಕೆ ಸಾಕ್ಷಿಯಾದ ಪಂದ್ಯ. ಅದು ಅಮೋಘ ಆರಂಭದ ಹೊರತಾಗಿಯೂ 43.3 ಓವರ್‌ಗಳಲ್ಲಿ 209ಕ್ಕೆ ಸರ್ವಪತನ ಕಂಡಿತು. ಆಸ್ಟ್ರೇಲಿಯ 35.2 ಓವರ್‌ಗಳಲ್ಲಿ 5 ವಿಕೆಟಿಗೆ 215 ರನ್‌ ಬಾರಿಸಿತು.

ಎದುರಿಗೆ ಸಣ್ಣ ಮೊತ್ತವಿದ್ದಿತಾದರೂ ಆಸ್ಟ್ರೇಲಿಯದ ಚೇಸಿಂಗ್‌ ಆಕ್ರಮಣಕಾರಿ ಜತೆಗೆ ಆಘಾತಕಾರಿಯಾಗಿತ್ತು. ಲಹಿರು ಕುಮಾರ ಅವರ ಪ್ರಥಮ ಓವರ್‌ನಲ್ಲೇ ಮಾರ್ಷ್‌-ವಾರ್ನರ್‌ ಸೇರಿ 15 ರನ್‌ ಸೂರೆಗೈ ದರು. ಮೊದಲ ಎಸೆತವೇ ಬೌಂಡರಿಗೆ ಮುನ್ನುಗ್ಗಿತು. ಅಂತಿಮ ಎಸೆತದಲ್ಲಿ ಸಿಕ್ಸರ್‌ ಸಿಡಿಯಿತು.

ಆದರೆ ಎಡಗೈ ಮಧ್ಯಮ ವೇಗಿ ದಿಲ್ಶನ್‌ ಮದುಶಂಕ ತಿರುಗಿ ಬಿದ್ದರು. ತಮ್ಮ ಮೊದಲ ಸ್ಪೆಲ್‌ನಲ್ಲಿ ಅತ್ಯಂತ ಅಪಾಯಕಾರಿಯಾಗಿ ಗೋಚರಿಸಿದರು. ಒಂದೇ ಓವರ್‌ನಲ್ಲಿ ಡೇವಿಡ್‌ ವಾರ್ನರ್‌ ಮತ್ತು ಸ್ಟೀವನ್‌ ಸ್ಮಿತ್‌ ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿ ತಿರುಗೇಟು ನೀಡುವ ಸೂಚನೆಯೊಂದನ್ನು ರವಾನಿಸಿದರು. ಇವರಲ್ಲಿ ವಾರ್ನರ್‌ 11 ರನ್‌ ಮಾಡಿದರೆ, ಸ್ಮಿತ್‌ ಖಾತೆಯನ್ನೇ ತೆರೆಯಲಿಲ್ಲ.

Advertisement

3ನೇ ವಿಕೆಟಿಗೆ ಜತೆಗೂಡಿದ ಮಿಚೆಲ್‌ ಮಾರ್ಷ್‌ ಮತ್ತು ಮಾರ್ನಸ್‌ ಲಬುಶೇನ್‌ ಪರಿಸ್ಥಿತಿಯನ್ನು ಸುಧಾರಿಸಿದರು. ಲಂಕಾ ಬೌಲಿಂಗ್‌ ದಾಳಿಯನ್ನು ಎಚ್ಚರಿಕೆಯಿಂದ ನಿಭಾಯಿಸಿ 57 ರನ್‌ ಪೇರಿಸಿದರು. ಮಾರ್ಷ್‌ ಅವರಿಂದ ಅರ್ಧ ಶತಕವೂ ಪೂರ್ತಿಗೊಂಡಿತು. ಅಷ್ಟರಲ್ಲಿ 2ನೇ ರನ್‌ ಗಳಿಸುವ ಯತ್ನದಲ್ಲಿ ರನೌಟ್‌ ಆಗಿ ನಿರ್ಗಮಿಸಿದರು. ಮಾರ್ಷ್‌ ಕೊಡುಗೆ 51 ಎಸೆತಗಳಿಂದ 52 ರನ್‌ (9 ಬೌಂಡರಿ).

ಬಳಿಕ ಜೋಶ್‌ ಇಂಗ್ಲಿಸ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿಡಿದು ನಿಂತರು. 4ನೇ ವಿಕೆಟಿಗೆ 77 ರನ್‌, 5ನೇ ವಿಕೆಟಿಗೆ 34 ರನ್‌ ಒಟ್ಟುಗೂಡಿತು. 58 ರನ್‌ ಬಾರಿಸಿದ ಇಂಗ್ಲಿಸ್‌ ಆಸೀಸ್‌ ಸರದಿಯ ಟಾಪ್‌ ಸ್ಕೋರರ್‌ (59 ಎಸೆತ, 5 ಬೌಂಡರಿ, 1 ಸಿಕ್ಸರ್‌). ಅಬ್ಬರಿಸಿದ ಮ್ಯಾಕ್ಸ್‌ವೆಲ್‌ 21 ಎಸೆತಗಳಿಂದ ಅಜೇಯ 31 ರನ್‌ ಬಾರಿಸಿದರು (4 ಫೋರ್‌, 2 ಸಿಕ್ಸರ್‌). ವೆಲ್ಲಲಗೆ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿದ ಸ್ಟೋಯಿನಿಸ್‌ ಆಸ್ಟ್ರೇಲಿಯದ ಗೆಲುವನ್ನು ಸಾರಿದರು.

84ಕ್ಕೆ ಬಿತ್ತು 10 ವಿಕೆಟ್‌!
ಶ್ರೀಲಂಕಾದ ಇನ್ನಿಂಗ್ಸ್‌ ವಿಶ್ವಕಪ್‌ ಇತಿಹಾಸದ ನಾಟಕೀಯ ಕುಸಿತವೊಂದಕ್ಕೆ ಸಾಕ್ಷಿಯಾಯಿತು. ಒಂದು ಹಂತದಲ್ಲಿ ನೋಲಾಸ್‌ 125 ರನ್‌, ಬಳಿಕ ಒಂದು ವಿಕೆಟಿಗೆ 157 ರನ್‌, ಅಂತಿಮವಾಗಿ 209ಕ್ಕೆ ಆಲೌಟ್‌!

ಅರ್ಥಾತ್‌, ಕೇವಲ 84 ರನ್‌ ಅಂತರದಲ್ಲಿ ಶ್ರೀಲಂಕಾದ ಎಲ್ಲ 10 ವಿಕೆಟ್‌ ಉರುಳಿತು. ಬರೀ 52 ರನ್‌ ಅಂತರದಲ್ಲಿ 9 ವಿಕೆಟ್‌ ಢಮಾರ್‌ ಆಯಿತು. 300ರ ಗಡಿ ತನಕ ತಲುಪಬಹುದಿದ್ದ ಲಂಕಗೆ ಇನ್ನೂರರ ಸೀಮೆ ಮುಟ್ಟುವಾಗಲೇ ಏದುಸಿರು ಬಂದಿತ್ತು. ಸ್ಪಿನ್ನರ್‌ ಆ್ಯಡಂ ಝಂಪ ಲಂಕಾ ಪಾಲಿಗೆ ಘಾತಕವಾಗಿ ಕಾಡಿದರು. ಅವರು 47 ರನ್ನಿಗೆ 4 ವಿಕೆಟ್‌ ಕೆಡವಿದರು. ಝಂಪ ಏಕದಿನ ಪಂದ್ಯವೊಂದರಲ್ಲಿ 4 ವಿಕೆಟ್‌ ಉರುಳಿಸಿದ 10ನೇ ನಿದರ್ಶನ ಇದಾಗಿದೆ. ಆಸೀಸ್‌ ಬೌಲರ್‌ಗಳ ಈ ಸಾಧನೆಯಲ್ಲಿ ಝಂಪ ಅವರಿಗೆ ದ್ವಿತೀಯ ಸ್ಥಾನ. ಶೇನ್‌ ವಾರ್ನ್ ಅಗ್ರಸ್ಥಾನಿಯಾಗಿದ್ದಾರೆ (13).
ನಾಯಕ ದಸುನ್‌ ಶಣಕ ಕೂಟದಿಂದ ಹೊರಬಿದ್ದ ಕಾರಣ ಕೀಪರ್‌ ಕುಸಲ್‌ ಮೆಂಡಿಸ್‌ ಅವರಿಗೆ ಲಂಕಾ ಸಾರಥ್ಯ ವಹಿಸಲಾಗಿತ್ತು. ಟಾಸ್‌ ಗೆದ್ದ ಮೆಂಡಿಸ್‌ ಮೊದಲು ಬ್ಯಾಟಿಂಗ್‌ ಆಯ್ದುಕೊಂಡರು.

ಆರಂಭಿಕರಾದ ಪಥುಮ್‌ ನಿಸ್ಸಂಕ-ಕುಸಲ್‌ ಪೆರೆರ ಈ ಆಯ್ಕೆಯನ್ನು ಅಮೋಘ ರೀತಿಯಲ್ಲಿ ಸಮರ್ಥಿಸಿದರು. ಆಸ್ಟ್ರೇಲಿಯದ ಬೌಲಿಂಗ್‌ ದಾಳಿಯನ್ನು ಪುಟಿಗಟ್ಟುತ್ತ, ಒತ್ತಡ ಹೇರುತ್ತ ಹೋದರು. ರನ್‌ ಪ್ರವಾಹ ಏರುತ್ತ ಹೋಯಿತು. 21.4 ಓವರ್‌ ನಿಭಾಯಿಸಿ ನಿಂತ ಈ ಜೋಡಿ ಮೊದಲ ವಿಕೆಟಿಗೆ ಬರೋಬ್ಬರಿ 125 ರನ್‌ ಒಟ್ಟುಗೂಡಿಸಿತು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು.

ಅಷ್ಟೇನೂ ಫಾರ್ಮ್ನಲ್ಲಿಲ್ಲದ ಕುಸಲ್‌ ಪೆರೆರ ಇಲ್ಲಿ ಅತ್ಯಧಿಕ 78 ರನ್‌ ಮಾಡಿದರು. 82 ಎಸೆತಗಳ ಈ ಆಟದಲ್ಲಿ ಭರ್ತಿ ಒಂದು ಡಜನ್‌ ಬೌಂಡರಿ ಸೇರಿತ್ತು. ಪಥುಮ್‌ ನಿಸ್ಸಂಕ 67 ಎಸೆತಗಳಿಂದ 61 ರನ್‌ ಕೊಡುಗೆ ಸಲ್ಲಿಸಿದರು. ಹೊಡೆದದ್ದು 8 ಬೌಂಡರಿ. ಲಂಕಾ ಆರಂಭಿಕರ ಈ ಆಟ ಕಂಡಾಗ ಆಸ್ಟ್ರೇಲಿಯದ ಬೌಲಿಂಗ್‌ ಮತ್ತೆ ಧೂಳೀಪಟಗೊಳ್ಳುವ ಸಾಧ್ಯತೆ ದಟ್ಟವಾಗಿತ್ತು. ಆದರೆ ಮುಂದೆ ಸಂಭವಿಸಿದ್ದೇ ಬೇರೆ.

ಆರಂಭಿಕರಿಬ್ಬರನ್ನೂ ಆಸೀಸ್‌ ನಾಯಕ ಪ್ಯಾಟ್‌ ಕಮಿನ್ಸ್‌ ಪೆವಿಲಿಯನ್‌ಗೆ ರವಾನಿಸಿದ ಬಳಿಕ ಲಕ್ನೋ ಅಂಗಳದಲ್ಲಿ ಲಂಕಾ ಕ್ರಿಕೆಟಿ ಗರ ಪರೇಡ್‌ ಒಂದು ಕಂಡುಬಂತು. ದ್ವೀಪರಾಷ್ಟ್ರದ ಆಟಗಾರರು ಹೀಗೆ ಬಂದು ಹಾಗೆ ವಾಪಸಾಗತೊಡಗಿದರು. ಆ್ಯಡಂ ಝಂಪ, ಮಿಚೆಲ್‌ ಸ್ಟಾರ್ಕ್‌, ಮ್ಯಾಕ್ಸ್‌ವೆಲ್‌ ಸೇರಿಕೊಂಡು ಲಂಕಾ ಕತೆಯನ್ನು ಮುಗಿಸಿ ಬಿಟ್ಟರು!

ಈ ನಡುವೆ ಬ್ಯಾಟಿಂಗ್‌ ವೇಳೆ ಕುಸಲ್‌ ಪೆರೆರ ನಾನ್‌ ಸ್ಟ್ರೈಕಿಂಗ್‌ ತುದಿಯಲ್ಲಿ ಆಗಾಗ ಕ್ರೀಸ್‌ ಬಿಟ್ಟು ಮುಂದೆ ಓಡುವ ಧಾವಂತ ತೋರಿದರು. ಮಿಚೆಲ್‌ ಸ್ಟಾರ್ಕ್‌ ಲಂಕಾ ಬ್ಯಾಟರ್‌ಗೆ 3 ಸಲ ಎಚ್ಚರಿಕೆ ನೀಡಿದರು. ಇಲ್ಲವಾದರೆ ಪೆರೆರ ರನೌಟ್‌ ಆಗಿ ಬಹಳ ಬೇಗನೇ ಪೆವಿಲಿಯನ್‌ ಸೇರಿಕೊಳ್ಳುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next