ಚೆನ್ನೈ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ಕೂಟದಲ್ಲಿ ಭಾರತ ತಂಡವು ರವಿವಾರ ತನ್ನ ಮೊದಲ ಪಂದ್ಯವನ್ನಾಡುತ್ತಿದೆ. ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಆದರೆ ಭಾರತದ ಯುವ ಬ್ಯಾಟರ್ ಶುಭಮನ್ ಗಿಲ್ ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು ಅಸೀಸ್ ವಿರುದ್ಧ ಆಡುವ ಎನ್ನಲಾಗಿದೆ. ಇದೀಗ ನಾಯಕ ರೋಹಿತ್ ಶರ್ಮಾ ಅವರು ಗಿಲ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
“ಎಲ್ಲರೂ ಫಿಟ್ ಆಗಿದ್ದಾರೆ, ಆದರೆ ಗಿಲ್ ನೂರಕ್ಕೆ ನೂರು ಅಲ್ಲ. ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಆದರೆ ಯಾವುದೇ ಗಾಯದ ಸಮಸ್ಯೆಯಿಲ್ಲ. ಅವನಿಗೆ ಹುಷಾರಿಲ್ಲ, ನಾವು ಅವನ ಮೇಲೆ ಪ್ರತಿದಿನವೂ ನಿಗಾ ಇಡುತ್ತಿದ್ದೇವೆ. ನಾವು ಅವರಿಗೆ ಚೇತರಿಸಿಕೊಳ್ಳಲು ಎಲ್ಲ ಅವಕಾಶಗಳನ್ನು ನೀಡಲಿದ್ದೇವೆ ಎಂದು ರೋಹಿತ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ನನಗೆ ಅವನ ಬಗ್ಗೆ ಬೇಸರವಿದೆ, ಅವನು ಗುಣಮುಖನಾಗಬೇಕೆಂದು ನಾನು ಬಯಸುತ್ತೇನೆ. ನಾನು ಗಿಲ್ ಆಡಬೇಕೆಂದು ನಾಯಕನಾಗಿ ಯೋಚಿಸುತ್ತಿಲ್ಲ; ಯಾರೂ ಅನಾರೋಗ್ಯಕ್ಕೆ ಒಳಗಾಗಲು ಇಷ್ಟಪಡದ ಕಾರಣ ಅವನು ಗುಣಮುಖನಾಗಬೇಕೆಂದು ನಾನು ಬಯಸುತ್ತೇನೆ. ಅವರು ಯುವಕ, ಫಿಟ್ ದೇಹವನ್ನು ಹೊಂದಿದ್ದಾರೆ ಮತ್ತು ಅವರು ಶೀಘ್ರವಾಗಿ ಚೇತರಿಸಿಕೊಳ್ಳುತ್ತಾರೆ” ಎಂದು ರೋಹಿತ್ ಹೇಳಿದರು.
“ದೊಡ್ಡ ಪಂದ್ಯಾವಳಿಯ ಆರಂಭದ ಮೊದಲು ಮನಸ್ಥಿತಿಯು ತುಂಬಾ ಚೆನ್ನಾಗಿದೆ. ನಾವು ಈ ಟೂರ್ನಮೆಂಟ್‌ಗೆ ಉತ್ತಮ ತಯಾರಿ ನಡೆಸಿದ್ದೇವೆ. ಆದ್ದರಿಂದ, ಕೌಶಲ್ಯದ ಬಗ್ಗೆ ನಮ್ಮ ಬಗ್ಗೆ ಸಾಕಷ್ಟು ವಿಶ್ವಾಸವಿದೆ. ಆಟವನ್ನು ಎದುರು ನೋಡುತ್ತಿದ್ದೇವೆ ಎಂದು ರೋಹಿತ್ ಹೇಳಿದರು.