ಲಕ್ನೋ: ಐಸಿಸಿ ಏಕದಿನ ವಿಶ್ವಕಪ್ ಕೂಟದ ತನ್ನ ಆರನೇ ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ತಂಡವು ನೂರು ರನ್ ಅಂತರದ ಭರ್ಜರಿ ಗೆಲುವು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತವು ನಾಯಕ ರೋಹಿತ್ ಶರ್ಮಾ ಅವರ 87 ರನ್ ಸಹಾಯದಿಂದ 229 ರನ್ ಗಳಿಸಿತು. ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಕೇವಲ 129 ರನ್ ಗಳಿಗೆ ಆಲೌಟಾಯಿತು. ಶಮಿ, ಬುಮ್ರಾ ಮತ್ತು ಕುಲದೀಪ್ ಯಾದವ್ ಆಂಗ್ಲರ ಬ್ಯಾಟರ್ ಗಳನ್ನು ಕಾಡಿದರು.
ಈ ವಿಶ್ವಕಪ್ ನಲ್ಲಿ ಭಾರತದ ಪಂದ್ಯದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಉತ್ತಮ ಫೀಲ್ಡರ್ ಪ್ರಶಸ್ತಿ ನೀಡಲಾಗುತ್ತಿದೆ. ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್ ಮತ್ತು ಶ್ರೇಯಸ್ ಅಯ್ಯರ್ ಈ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದ ಬಳಿಕವೂ ಈ ಪ್ರಶಸ್ತಿ ನೀಡಲಾಗಿದೆ.
ಈ ಬಾರಿ ಕೆಎಲ್ ರಾಹುಲ್ ಅವರಿಗೆ ಬೆಸ್ಟ್ ಫೀಲ್ಡರ್ ಪ್ರಶಸ್ತಿ ನೀಡಲಾಯಿತು. ಸ್ಟಂಪ್ ಹಿಂದುಗಡೆ ಅದ್ಭುತ ಪ್ರದರ್ಶನ ನೀಡಿದ ರಾಹುಲ್ ಲೆಗ್ ಸೈಡ್ ನಲ್ಲಿ ಕೆಲವು ಬೌಂಡಿ ತಡೆದರಲ್ಲದೆ, ವೇಗಿಗಳ ಕೆಲವು ಬೌನ್ಸರ್ ಗಳನ್ನು ಯಶಸ್ವಿಯಾಗಿ ಹಿಡಿದರು. ಒಟ್ಟಾರೆಯಾಗಿ ಉತ್ತಮ ಫೀಲ್ಡಿಂಗ್ ಮಾಡಿ ಇತರರಿಗೆ ಸ್ಪೂರ್ತಿ ನೀಡಿದ ರಾಹುಲ್ ಗೆ ಈ ಪ್ರಶಸ್ತಿ ಎಂದು ಫೀಲ್ಡಿಂಗ್ ಕೋಚ್ ಹೇಳಿದರು.
ಸ್ಟೇಡಿಯಂನಲ್ಲಿ ಲೈಟಿಂಗ್ ಮೂಲಕ ಕೆಎಲ್ ರಾಹುಲ್ ಅವರ ಜೆರ್ಸಿ ಪ್ರದರ್ಶಿಸಿ ವಿನ್ನರ್ ಘೋಷಿಸಲಾಯಿತು. ಕಿವೀಸ್ ವಿರುದ್ಧದ ಪಂದ್ಯದಲ್ಲಿ ಪ್ರಶಸ್ತಿ ಗೆದ್ದಿದ್ದ ಶ್ರೇಯಸ್ ಅಯ್ಯರ್ ಅವರು ರಾಹುಲ್ ಗೆ ಪ್ರಶಸ್ತಿ ಪ್ರದಾನ ಮಾಡಿದರು.