ಕೋಲ್ಕತ್ತಾ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023 ನ ಸೆಮಿ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿದ ದಕ್ಷಿಣ ಆಫ್ರಿಕಾ ಕೂಟದಿಂದ ಹೊರಬಿದ್ದಿದೆ. ಕೂಟದ ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಾ ಬಂದ ಹರಿಣಗಳು ಮತ್ತೆ ಸೆಮಿ ಫೈನಲ್ ನಲ್ಲಿ ಆಟ ಮುಗಿಸಿದರು. ಗುರುವಾರ ಕೋಲ್ಕತ್ತಾದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮೂರು ವಿಕೆಟ್ ಅಂತರದ ಸೋಲು ಕಂಡಿದೆ.
ಕೂಟದ ಆರಂಭಕ್ಕೆ ಮೊದಲು ದಕ್ಷಿಣ ಆಫ್ರಿಕಾ ತಂಡವು ಸೆಮಿ ಫೈನಲ್ ಗೆ ಅರ್ಹತೆ ಪಡೆಯಬಹುದು ಎಂದು ಭಾವಿಸಿಯೂ ಇರಲಿಲ್ಲ ಎಂದು ಹರಿಣಗಳ ನಾಡಿನ ಮಾಜಿ ವೇಗಿ ಡೇಲ್ ಸ್ಟೈನ್ ಹೇಳಿದ್ದಾರೆ.
“ಆನ್ರಿಚ್ ನಾರ್ಟ್ಜೆ ಇಲ್ಲದೆ, ದಕ್ಷಿಣ ಆಫ್ರಿಕಾವು ಈ ವಿಶ್ವಕಪ್ ಸೆಮಿ-ಫೈನಲ್ ಪ್ರವೇಶಿಸಲಿದೆ ಎಂದು ನಾನು ಭಾವಿಸಿರಲಿಲ್ಲ, ಕೂಟದ ಮೊದಲ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಅವರು ಕೂಡ ಉತ್ತಮವಾಗಿ ಕಾಣಲಿಲ್ಲ. ಆದರೆ ಅವರು ಅಂತಿಮ ಮೂರರಲ್ಲಿ ಗೆದ್ದರು, ಆ ಉತ್ಸಾಹದಲ್ಲಿ ಪಂದ್ಯಾವಳಿಗೆ ಬಂದರು. ಒಟ್ಟಾರೆಯಾಗಿ, ಅವರು ನಿರೀಕ್ಷಿಸಿದ ಸ್ಥಾನದಲ್ಲಿಯೇ ಅಂದರೆ ಸೆಮಿ ಫೈನಲ್ ನಲ್ಲಿ ಅವರು ಕೂಟ ಮುಗಿಸಿದರು” ಎಂದು ಸ್ಟೈನ್ ಹೇಳಿದರು.
“ಟೂರ್ನಮೆಂಟ್ ನಲ್ಲಿ ಒಬ್ಬರು ಮಾತ್ರ ವಿಜೇತರಾಗುತ್ತಾರೆ. ಕೂಟ ಗೆಲ್ಲದ ಉಳಿದ ತಂಡಗಳು ಯಶಸ್ವಿ ಅಭಿಯಾನ ನಡೆಸಿಲ್ಲ ಎಂದೇ ಭಾವಿಸುತ್ತಾರೆ. ದ.ಆಫ್ರಿಕಾವೂ ಅದೇ ರೀತಿ ಯೋಚಿಸಲಿದೆ. ಆದರೆ ನೀವು ಅಂಕಿ ಅಂಶಗಳನ್ನು ಗಮನಿಸಿದರೆ ಟಾಪ್ 6 ಬ್ಯಾಟರ್ ಗಳು ವಿಶ್ವಕಪ್ ನಲ್ಲಿ ಶತಕ ಬಾರಿಸಿದರು. ಯಾವಾಗೆಲ್ಲಾ ದ.ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡುತ್ತದೋ ಆವಾಗೆಲ್ಲಾ ದೊಡ್ಡ ಮೊತ್ತ ಕಲೆ ಹಾಕಿದ್ದಾರೆ. ಅಲ್ಲದೆ ಹಾಲಿ ಚಾಂಪಿಯನ್ ತಂಡವನ್ನು 300 ರನ್ ಅಂತರದಿಂದ ಸೋಲಿಸಿದ್ದರು, ಇದು ಸುಮ್ಮನೆ ಆಗಿದ್ದಲ್ಲ” ಎಂದು ಸ್ಟೈನ್ ಹೇಳಿದರು.
“ಬೌಲರ್ ಗಳನ್ನು ನೋಡಿ, ಗೆರಾಲ್ಡ್ ಕೋಟ್ಜಿ 20 ವಿಕೆಟ್ ಪಡೆದಿದ್ದಾರೆ. ಕಗಿಸೋ ರಬಾಡಾ ಕೂಟದುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದಾರೆ. ಒಟ್ಟಾರೆಯಾಗಿ ನೋಡುವಾಗ ದ.ಆಫ್ರಿಕಾ ಎಲ್ಲಾ ಬಾಕ್ಸ್ ಗಳನ್ನು ಟಿಕ್ ಮಾಡಿದೆ, ಆದರೆ ಸೆಮಿ ಫೈನಲ್ ಗೆರೆಯನ್ನು ಪಾರು ಮಾಡಲು ಆಗಲಿಲ್ಲ ಅಷ್ಟೇ” ಎಂದು ಸ್ಟೈನ್ ಹೇಳಿದರು.