ಚೆನ್ನೈ: ಟೀಂ ಇಂಡಿಯಾದ ಯುವ ಭರವಸೆಯ ಆಟಗಾರ ಶುಬಮನ್ ಗಿಲ್ ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಇದೀಗ ಅನಾರೋಗ್ಯ ಹೆಚ್ಚಿದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶುಬಮನ್ ಗಿಲ್ ಅವರ ಪ್ಲೇಟ್ ಲೆಟ್ ಕುಸಿತವಾದ ಕಾರಣ ಚೆನ್ನೈನಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿದೆ. “ಶುಬಮನ್ ಗಿಲ್ ಅವರ ಪ್ಲೇಟ್ ಲೆಟ್ ಕುಸಿತವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಸಿಸಿಐ ವೈದ್ಯಕೀಯ ತಂಡವೂ ಅವರ ಮೇಲ್ವಿಚಾರಣೆ ನಡೆಸುತ್ತಿದೆ” ಎಂದು ವರದಿ ತಿಳಿಸಿದೆ.
ಗಿಲ್ ಅವರು ಇನ್ನೂ ಚೇತರಿಸಿಕೊಳ್ಳದ ಕಾರಣ ಅವರು ತಂಡದೊಂದಿಗೆ ದೆಹಲಿಗೆ ಪ್ರಯಾಣಿಸಿಲ್ಲ ಎಂದು ಸೋಮವಾರ ಬಿಸಿಸಿಐ ತಿಳಿಸಿತ್ತು. ಅವರು ವಿಶ್ರಾಂತಿ ಪಡೆದು ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ಲಭ್ಯವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಗಿಲ್ ಆಸ್ಪತ್ರೆಗೆ ದಾಖಲಾಗಿರುವ ಕಾರಣ ಅಹಮದಾಬಾದ್ ಪಂದ್ಯಕ್ಕೂ ಅವರು ಲಭ್ಯವಾಗುವುದು ಕಷ್ಟ ಎನ್ನಲಾಗಿದೆ.
ಟೀಂ ಇಂಡಿಯಾದ ಹೊರ ಭರವಸೆಯಾಗಿರುವ ಬಲಗೈ ಆರಂಭಿಕ ಆಟಗಾರ ಗಿಲ್, ಕಳೆದೊಂದು ವರ್ಷದಿಂದ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಏಷ್ಯಾ ಕಪ್ ಮತ್ತು ಆಸೀಸ್ ಸರಣಿಯಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ್ದ ಗಿಲ್ ಮೊದಲ ವಿಶ್ವಕಪ್ ನಲ್ಲಿ ಬ್ಯಾಟಿಂಗ್ ಪರಾಕ್ರಮ ಮುಂದುವರಿಸುವ ಇರಾದೆ ಹೊಂದಿದ್ದರು. ಆದರೆ ಡೆಂಗ್ಯೂ ಜ್ವರ ಅವರಿಗೆ ಅಡ್ಡಿಯಾಗಿದೆ.
ಗಿಲ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ಅವರು ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಬುಧವಾರ ಟೀಂ ಇಂಡಿಯಾ ಅಫ್ಘಾನಿಸ್ಥಾನ ವಿರುದ್ಧ ಹೊಸದಿಲ್ಲಿಯಲ್ಲಿ ತನ್ನ ಎರಡನೇ ವಿಶ್ವಕಪ್ ಪಂದ್ಯವಾಡುತ್ತಿದೆ.