ಚೆನ್ನೈ: 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನ ಮೊದಲ ಬಹುನಿರೀಕ್ಷಿತ ಪಂದ್ಯಾವಳಿಗೆ ಚೆನ್ನೈ ಸಾಕ್ಷಿಯಾಗುತ್ತಿದೆ. ಇಲ್ಲಿನ ಚಿದಂಬರಂ ಸ್ಟೇಡಿಯಂನಲ್ಲಿ ಏಕದಿನ ನಂಬರ್ 1 ತಂಡ ಭಾರತ ಮತ್ತು ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಮುಖಾಮುಖಿಯಾಗುತ್ತಿದೆ.
ಟಾಸ್ ಗೆದ್ದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
ಮೊನ್ನೆಯಷ್ಟೇ ಏಷ್ಯಾ ಕಪ್ ಗೆದ್ದು ಟ್ರೋಫಿ ಬರಗಾಲವನ್ನು ನೀಗಿಸಿಕೊಂಡಿದ್ದ ಭಾರತ, ಪ್ರವಾಸಿ ಆಸ್ಟ್ರೇಲಿಯ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನೂ ವಶಪಡಿಸಿಕೊಂಡಿರುವುದು ಖಂಡಿತವಾಗಿಯೂ ಶುಭ ಸೂಚನೆ. ಆದರೆ ವಿಶ್ವಕಪ್ ಎಂಬುದು “ಡಿಫರೆಂಟ್ ಬಾಲ್ ಗೇಮ್’. ಇದು ಕ್ರಿಕೆಟ್ ಸಾಮ್ರಾಜ್ಯವನ್ನು ಆಳಲು ನಡೆಯುವ ಮಹಾಸಮರ. ಸಾಲದ್ದಕ್ಕೆ ಭಾರತ ಆತಿಥೇಯ ದೇಶ. ತವರಿನ ಅಭಿಮಾನಿಗಳ ಅಪಾರ ಬೆಂಬಲ ಲಭಿಸವುದಾದರೂ ಅಷ್ಟೇ ಒತ್ತಡ ಕೂಡ ಇರುತ್ತದೆ.
ಭಾರತಕ್ಕೆ ಮೊದಲ ಪಂದ್ಯದಲ್ಲೇ ಎದುರಾಗಿರುವ ಹಿನ್ನಡೆಯೆಂದರೆ ಇನ್‌ಫಾರ್ಮ್ ಆರಂಭಕಾರ ಶುಭಮನ್ ಗಿಲ್ ಅವರಿಗೆ ಕಾಡಿದ ಅನಾರೋಗ್ಯ. ಹೀಗಾಗಿ ರೋಹಿತ್ ಶರ್ಮ ಜತೆಗೆ ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಇದುವರೆಗೆ ವಿಶ್ವಕಪ್ ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 12 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ ಆಸ್ಟ್ರೇಲಿಯಾ ಎಂಟು ಬಾರಿ ಮತ್ತು ಭಾರತ ನಾಲ್ಕು ಬಾರಿ ಗೆಲುವು ಸಾಧಿಸಿದೆ.
ತಂಡಗಳು:
ಭಾರತ: ರೋಹಿತ್ ಶರ್ಮ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ (ವಿ.ಕೀ.), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಆರ್. ಅಶ್ವಿನ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್.
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಶ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸವೆಲ್, ಪ್ಯಾಟ್ ಕಮಿನ್ಸ್, ಆ್ಯಡಂ ಜಂಪಾ, ಜೋಶ್ ಹೇಜಲ್ ವುಡ್, ಮಿಚೆಲ್ ಸ್ಟಾರ್ಕ್