ಮುಂಬಯಿ: ನ್ಯೂಜಿಲ್ಯಾಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮ ಅವರು ‘ಟಾಸ್ ಫಿಕ್ಸಿಂಗ್’ ಮಾಡಿದ್ದಾರೆ ಎಂದು ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ಸಿಕಂದರ್ ಭಕ್ತ್ ಆರೋಪವನ್ನು ವಾಸಿಂ ಅಕ್ರಮ್ ಅವರು ಆಕ್ರೋಶ ಭರಿತರಾಗಿ ಖಂಡಿಸಿದ್ದಾರೆ.
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ವಿರುದ್ಧದ ಆರೋಪ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು. ಟಾಸ್ ವೇಳೆ ಶರ್ಮ ಅವರು ನಾಣ್ಯವನ್ನು ಎದುರಾಳಿ ನಾಯಕನಿಂದ ದೂರ ಎಸೆದು ಅನುಮಾನಾಸ್ಪದ ವರ್ತನೆ ತೋರಿದ್ದು, ಈ ಕ್ರಮವು ಟಾಸ್‌ನ ಫಲಿತಾಂಶವನ್ನು ಪರಿಶೀಲಿಸುವುದರಿಂದ ಎದುರಾಳಿ ನಾಯಕನನ್ನು ತಡೆಯುತ್ತದೆ, ಇದು ಭಾರತದ ಪರವಾಗಿ ಫಲಿತಾಂಶದ ಮೇಲೆ ಪ್ರಭಾವ ಬೀರಲು ಉದ್ದೇಶಪೂರ್ವಕ ತಂತ್ರವಾಗಿದೆ” ಎಂದು ಹೇಳಿಕೆ ನೀಡಿದ್ದರು.
ಮುಂಬೈನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ನ್ಯೂಜಿ ಲ್ಯಾಂಡ್ ವಿರುದ್ಧ ಭಾರತ 70 ರನ್‌ಗಳಿಂದ ಜಯಗಳಿಸಿದ ಬಳಿಕ ಮಾಧ್ಯಮವೊಂದರ ಸಂದರ್ಶನದಲ್ಲಿ ಭಕ್ತ್ ಪಿತೂರಿ ಸಿದ್ಧಾಂತ ಎಂಬ ಹೇಳಿಕೆ ನೀಡಿದ್ದರು.
ಪಾಕ್ ತಂಡದ ಮಾಜಿ ವೇಗಿ, ಈಗ 66 ರ ಹರೆಯದ, 50 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 100 ವಿಕೆಟ್‌ಗಳನ್ನು ಪಡೆದಿರುವ ಭಕ್ತ್ ಮಾಡಿದ ಆಧಾರ ರಹಿತ ಆರೋಪಕ್ಕೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ.
ಭಕ್ತ್ ನೀಡಿದ ಹೇಳಿಕೆಗಳನ್ನು ದಿಗ್ಗಜ ವೇಗಿ ವಾಸಿಂ ಅಕ್ರಮ್ ಟೀಕಿಸಿ, ಕೇವಲ ಪ್ರಾಯೋಜಕತ್ವದ ಕಾರಣಕ್ಕಾಗಿ ನಾಣ್ಯ ಎಲ್ಲಿ ಬೀಳಬೇಕು ಎಂಬ ಬಗ್ಗೆ ಯಾವುದೇ ನಿಯಮವಿಲ್ಲ. ಇಂತಹ ಹೇಳಿಕೆಗಳಿಂದ ನಮಗೆ ಮುಜುಗರವಾಗುತ್ತಿದೆ ಎಂದು ಹೇಳಿಕೆ ಖಂಡಿಸಿದರು.