Advertisement

Worldcup; 20 ತಂಡಗಳ ಮಹಾ ಟಿ20 ವಿಶ್ವಕಪ್‌ : ಪ್ರಮುಖ ವಿವರಗಳು ಇಲ್ಲಿವೆ

01:05 AM Jun 01, 2024 | Team Udayavani |

ಕ್ರಿಕೆಟ್‌ ಇತಿಹಾಸದ ಮಹಾ ವಿಶ್ವಕಪ್‌ ಪಂದ್ಯಾವಳಿಗೆ ಜಗತ್ತು ಸಾಕ್ಷಿಯಾಗಲಿದೆ. ಜೂ.2ರಿಂದ ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕ ಜಂಟಿ ಆತಿಥ್ಯದಲ್ಲಿ ಪ್ರತಿಷ್ಠಿತ ಟೂರ್ನಿ ಚಾಲನೆಗೊಳ್ಳಲಿದೆ. ಈ ಬಾರಿ ಭಾಗವಹಿಸಲಿರುವ ತಂಡಗಳ ಸಂಖ್ಯೆ ಬರೋಬ್ಬರಿ 20. ಇದೊಂದು ದಾಖಲೆ ಎನಿಸಿದೆ. ಬಹುನಿರೀಕ್ಷಿತ ಟಿ20 ವಿಶ್ವಕಪ್‌ಗೆ ಸಂಬಂಧಿಸಿ; ವೇಳಾಪಟ್ಟಿ, ಕೂಟದ ಮಾದರಿ, ತಾಣಗಳು ಇತ್ಯಾದಿ ಪ್ರಮುಖ ಸಂಕ್ಷಿಪ್ತ ವಿವರಗಳು ಇಲ್ಲಿವೆ.

Advertisement

ಅಮೆರಿಕಕ್ಕೆ ಮೊದಲ ಆತಿಥ್ಯ
ಬೇಸ್‌ಬಾಲ್‌ ನಾಡಾದ ಅಮೆರಿಕದಲ್ಲಿ ಕ್ರಿಕೆಟ್‌ ಗಾಳಿಯೂ ಬೀಸಬೇಕು ಎಂದು ನಿರ್ಧರಿಸಿದವರು ಐಸಿಸಿ ಗ್ಲೋಬಲ್‌ ಡೆವಲಪ್‌ಮೆಂಟ್‌ನ ಅಧ್ಯಕ್ಷ ಟಿಮ್‌ ಆ್ಯಂಡರ್ಸನ್‌. ಅದೂ 2015ರಷ್ಟು ಹಿಂದೆ. ಇದಕ್ಕೆ 9 ವರ್ಷಗಳ ಬಳಿಕ ಕಾಲ ಕೂಡಿಬಂದಿದೆ. ಪಕ್ಕದಲ್ಲೇ ಕೆರಿಬಿಯನ್‌ ದ್ವೀಪ ಸಮೂಹ ಇದ್ದುದರಿಂದ ಅಮೆರಿಕಕ್ಕೆ ಕ್ರಿಕೆಟ್‌ ವಿಶ್ವಕಪ್‌ ಸೌಭಾಗ್ಯ ಪ್ರಾಪ್ತಿಯಾಗಿದೆ ಎನ್ನಲಡ್ಡಿಯಿಲ್ಲ. ಹೀಗಾಗಿ 2020ರಲ್ಲಿ 2024ರ ಟಿ20 ವಿಶ್ವಕಪ್‌ಗೆ ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕ ಜಂಟಿಯಾಗಿ ಬಿಡ್‌ ಸಲ್ಲಿಸಿದವು. ಆಗ ಮಲೇಷ್ಯಾ ಕೂಡ ಉಮೇದುವಾರಿಕೆ ತೋರಿತ್ತು. ಆದರೆ ಅದಕ್ಕೆ ಯಾವುದೇ ದೊಡ್ಡ ಕ್ರಿಕೆಟ್‌ ರಾಷ್ಟ್ರದ ಬೆಂಬಲವಿರಲಿಲ್ಲ. ಐಸಿಸಿ 2021ರ ನವಂಬರ್‌ನಲ್ಲಿ 2024ರಿಂದ 2030ರ ವರೆಗಿನ ಟಿ20 ವಿಶ್ವಕಪ್‌ ಆತಿಥ್ಯವನ್ನು ಪ್ರಕಟಿಸಿದಾಗ ಮೊದಲ ಅವಕಾಶ ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕಕ್ಕೆ ಒಲಿಯಿತು.

ಅಮೆರಿಕದಲ್ಲಿ ಕ್ರಿಕೆಟ್‌ ಚುರುಕು
ಅಮೆರಿಕ 1965ರಲ್ಲಿ ಐಸಿಸಿಯ ಅಸೋಸಿಯೇಟ್‌ ಸದಸ್ಯತ್ವ ಪಡೆದರೂ ಇಲ್ಲಿನ ಕ್ರಿಕೆಟ್‌ ಇತಿಹಾಸ 18ನೇ ಶತಮಾನದಷ್ಟು ಪುರಾತನ. 1739ರಲ್ಲೇ “ಕ್ರಿಕೆಟಿಗರು ಬೇಕಾಗಿದ್ದಾರೆ’ ಎಂಬ ಜಾಹೀರಾತು ನ್ಯೂಯಾರ್ಕ್‌ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. 1844ರಲ್ಲಿ ಅಮೆರಿಕ- ಕೆನಡಾ ನಡುವೆ ನ್ಯೂಯಾರ್ಕ್‌ನಲ್ಲಿ ಮೊದಲ ಕ್ರಿಕೆಟ್‌ ಪಂದ್ಯ ನಡೆದಿತ್ತು ಎಂಬುದಕ್ಕೆ ದಾಖಲೆಗಳಿವೆ. ಸುಮಾರು 5000 ವೀಕ್ಷಕರು ಇದಕ್ಕೆ ಸಾಕ್ಷಿಯಾಗಿದ್ದರು. 20ನೇ ಶತಮಾನದಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ದಕ್ಷಿಣ ಏಷ್ಯಾ ದ ಪ್ರಭಾವದಿಂದ ಅಮೆರಿಕದ ಕ್ರಿಕೆಟ್‌ ತಕ್ಕಮಟ್ಟಿಗೆ ಜನಪ್ರಿಯಗೊಂಡಿತು. ಆಡಳಿತ್ಮಾಕ ಸಮಸ್ಯೆಯಿಂದ 2007ರಲ್ಲಿ ಯುಎಸ್‌ಎ ಕ್ರಿಕೆಟ್‌ ಮಂಡಳಿಯನ್ನು ಐಸಿಸಿ ಅಮಾನತುಗೊಳಿಸಿದ ವಿದ್ಯಮಾನವೂ ಸಂಭವಿಸಿತ್ತು. ಮರು ವರ್ಷವೇ ಇದು ಮತ್ತೆ ಚಾಲನೆ ಪಡೆಯಿತು. ಆದರೂ ಅಮೆರಿಕದಲ್ಲಿ ತಂಡದಲ್ಲಿರುವ ಬಹುತೇಕ ಕ್ರಿಕೆಟಿಗರೆಲ್ಲ ವಿದೇಶಿಗರೇ. ಇದರಲ್ಲಿ ಭಾರತೀಯರ ಸಂಖ್ಯೆಯೇ ಅಧಿಕ. ಮೂಲ ಅಮೆರಿಕನ್ನರು ಲೆಕ್ಕದ ಭರ್ತಿಗೆ ಮಾತ್ರ. ಹೀಗಾಗಿ ಅಮೆರಿಕ ತಂಡ ಅತ್ಯಂತ ಬಲಾಡ್ಯವಾಗಿ ಕಾಣುತ್ತಿದೆ. ಮೊನ್ನೆ ಮೊನ್ನೆ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿ ಗೆದ್ದ ಹಿರಿಮೆ ಈ ತಂಡದ್ದು. ಆದರೆ ಐಸಿಸಿಯ ಉದ್ದೇಶವೇ ಬೇರೆ ಇದೆ. ಅದೆಂದರೆ, ಅಮೆರಿಕನ್ನರೇ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್‌ನಲ್ಲಿ ತೊಡಗಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಬೇಕು ಎಂಬುದು. ಇದಕ್ಕೊಂದು ವೇದಿಕೆಯೇ ಈ ಟಿ20 ವಿಶ್ವಕಪ್‌ ಆತಿಥ್ಯ.

ವಿಂಡೀಸ್‌ಗೆ ಎರಡನೇ ಆತಿಥ್ಯ
ವೆಸ್ಟ್‌ ಇಂಡೀಸ್‌ಗೆ ಇದು 2ನೇ ಟಿ20 ವಿಶ್ವಕಪ್‌ ಆತಿಥ್ಯ. 2010ರಲ್ಲಿ ಮೊದಲ ಬಾರಿಗೆ ಇಲ್ಲಿ ವಿಶ್ವಕಪ್‌ ಆಡಲಾಗಿತ್ತು. ಇದಕ್ಕೂ ಮೊದಲು 2007ರಲ್ಲಿ ಏಕದಿನ ವಿಶ್ವಕಪ್‌ ಕೂಡ ಜರಗಿತ್ತು. ಆದರೆ ಇದು ವಿವಾದಗಳಿಂದಲೇ ಸುದ್ದಿಯಾಗಿತ್ತು. ಏಕದಿನ ಇತಿಹಾಸದ ಮೊದಲೆರಡು ವಿಶ್ವಕಪ್‌ ಗೆದ್ದಿರುವ ವೆಸ್ಟ್‌ ಇಂಡೀಸ್‌, ಟಿ20 ವಿಶ್ವಕಪ್‌ ಕ್ರಿಕೆಟ್‌ನಲ್ಲೂ 2 ಸಲ ಚಾಂಪಿಯನ್‌ ಆದ ಮೊದಲ ತಂಡವೆಂಬ ಹೆಗ್ಗಳಿಕೆ ಹೊಂದಿದೆ. 2 ಸಲ ಟಿ20 ವಿಶ್ವಕಪ್‌ ಗೆದ್ದ ಮತ್ತೂಂದು ತಂಡ ಇಂಗ್ಲೆಂಡ್‌.

ಟೂರ್ನಿ ರೀತಿ-ನೀತಿ

Advertisement

ವಿಶ್ವಕಪ್‌ ಮಾದರಿ
ವಿಶ್ವಕಪ್‌ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ 20 ತಂಡಗಳನ್ನು 5 ತಂಡಗಳ 4 ಗ್ರೂಪ್‌ಗ್ಳಾಗಿ ವಿಂಗಡಿಸಲಾಗಿದೆ. ಇಲ್ಲಿ ಪ್ರತಿಯೊಂದು ತಂಡ ಎದುರಾಳಿ ವಿರುದ್ಧ ಒಂದು ಪಂದ್ಯವಾಡಲಿದೆ. ಅಂದರೆ, ಗ್ರೂಪ್‌ ವಿಭಾಗದಲ್ಲಿ ತಂಡವೊಂದಕ್ಕೆ 4 ಪಂದ್ಯಗಳ ಅವಕಾಶ ಲಭಿಸಲಿದೆ. ಪ್ರತೀ ವಿಭಾಗದ 2 ಅಗ್ರ ತಂಡಗಳು “ಸೂಪರ್‌ 8′ ಹಂತಕ್ಕೆ ಪ್ರವೇಶಿಸುತ್ತವೆ. ಇಲ್ಲಿ ಮತ್ತೆ 4 ತಂಡಗಳ 2 ಗ್ರೂಪ್‌ ಇರುತ್ತದೆ. ಪ್ರತಿಯೊಂದು ತಂಡ 3 ಪಂದ್ಯಗಳನ್ನು ಆಡಬೇಕು. ಪ್ರತೀ ಗ್ರೂಪ್‌ನಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳಿಗೆ ಸೆಮಿಫೈನಲ್‌ ಅರ್ಹತೆ ಲಭಿಸಲಿದೆ.

ಟೈ ಆದರೆ ಸೂಪರ್‌ ಓವರ್‌
ಪಂದ್ಯ ಟೈ ಆದರೆ ಸೂಪರ್‌ ಓವರ್‌ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಸೂಪರ್‌ ಓವರ್‌ ಕೂಡ ಟೈ ಆದರೆ ಇನ್ನೊಂದು ಸೂಪರ್‌ ಓವರ್‌ ಇರಲಿದೆ. ಹೀಗೆ ಸ್ಪಷ್ಟ ಫಲಿತಾಂಶ ಲಭಿಸುವ ತನಕ ಸೂಪರ್‌ ಓವರ್‌ ಜಾರಿಯಲ್ಲಿರುತ್ತದೆ.

ಮಳೆ ಬಂದರೆ ಓವರ್‌ ಕಡಿತ
ಮಳೆ ಹಾಗೂ ಇನ್ನಿತರ ಪ್ರತಿಕೂಲ ಹವಾಮಾನದಿಂದ ಪಂದ್ಯಕ್ಕೆ ಅಡಚಣೆಯಾದರೆ ಗ್ರೂಪ್‌ ಹಾಗೂ ಸೂಪರ್‌-8 ಹಂತದಲ್ಲಿ ಕನಿಷ್ಠ 5 ಓವರ್‌ಗಳ ಪಂದ್ಯದ ಮೂಲಕ ಫಲಿತಾಂಶ ನಿರ್ಧರಿಸಲಾಗುವುದು. ಸೆಮಿಫೈನಲ್ಸ್‌ ಮತ್ತು ಫೈನಲ್‌ನಲ್ಲಿ ಸ್ಪಷ್ಟ ಫಲಿತಾಂಶಕ್ಕೆ ಕನಿಷ್ಠ 10 ಓವರ್‌ನ ಪಂದ್ಯ ಆಡಿಸಲಾಗುವುದು.

ಹೆಚ್ಚುವರಿ ಅವಧಿ, ಮೀಸಲು ದಿನ
ಮೊದಲ ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯಕ್ಕೆ ಮೀಸಲು ದಿನ ಇರಲಿದೆ. ಎರಡೂ ಸೆಮಿಫೈನಲ್‌ ಪಂದ್ಯಗಳಿಗೆ 250 ನಿಮಿಷಗಳ ಹೆಚ್ಚುವರಿ ಅವಧಿಯನ್ನು ನೀಡಲಾಗುವುದು. ಜೂ. 26ರ ಸೆಮಿಫೈನಲ್‌ ಪಂದ್ಯಕ್ಕೆ ಅದೇ ದಿನ 60 ನಿಮಿಷಗಳ ಹೆಚ್ಚುವರಿ ಅವಧಿ ಹಾಗೂ ಜೂ. 27ರಂದು ಉಳಿದ 190 ನಿಮಿಷಗಳ ಅವಧಿಯನ್ನು ನೀಡಲಾಗುವುದು. ಆದರೆ ಜೂ. 27ರ 2ನೇ ಸೆಮಿಫೈನಲ್‌ ಪಂದ್ಯಕ್ಕೆ ಮೀಸಲು ದಿನ ಇಲ್ಲ. ಇದರ ಬದಲು 2ನೇ ಸೆಮಿಫೈನಲ್‌ ಪಂದ್ಯಕ್ಕೆ ಅಂದೇ 250 ನಿಮಿಷಗಳ ಹೆಚ್ಚುವರಿ ಅವಧಿಯನ್ನು ಇರಿಸಲಾಗಿದೆ. ಜೂ. 29ರ ಫೈನಲ್‌ ಪಂದ್ಯಕ್ಕೆ ಜೂ. 30 ಮೀಸಲು ದಿನವಾಗಿದೆ.

ತಂಡಗಳು ಮತ್ತು ವಿಭಾಗ
ಗ್ರೂಪ್‌ “ಎ’: ಭಾರತ, ಪಾಕಿಸ್ಥಾನ, ಅಮೆರಿಕ,ಐರ್ಲೆಂಡ್‌, ಕೆನಡಾ.
ಗ್ರೂಪ್‌ “ಬಿ’: ಇಂಗ್ಲೆಂಡ್‌, ಆಸ್ಟ್ರೇಲಿಯ,ನಮೀಬಿಯಾ, ಸ್ಲಾಟ್ಲೆಂಡ್‌, ಒಮಾನ್‌.
ಗ್ರೂಪ್‌ “ಸಿ’: ವೆಸ್ಟ್‌ ಇಂಡೀಸ್‌, ನ್ಯೂಜಿಲೆಂಡ್‌, ಅಫ್ಘಾನಿಸ್ಥಾನ, ಉಗಾಂಡ, ಪಪುವಾ ನ್ಯೂ ಗಿನಿ.
ಗ್ರೂಪ್‌ “ಡಿ’: ದಕ್ಷಿಣ ಆಫ್ರಿಕಾ, ಶ್ರೀಲಂಕಾ,ಬಾಂಗ್ಲಾದೇಶ, ನೆದರ್ಲೆಂಡ್ಸ್‌, ನೇಪಾಲ.

20 ತಂಡಗಳ ಮಹಾಸಂಗಮ!
ಇದು 20 ತಂಡಗಳ ಮಹಾಸಂಗಮ. ಟಿ20 ವಿಶ್ವಕಪ್‌ ಇತಿಹಾಸದಲ್ಲೇ ಅತ್ಯಧಿಕ ತಂಡಗಳು ಪಾಲ್ಗೊಳ್ಳುತ್ತಿರುವುದು ಈ ಕೂಟದ ವಿಶೇಷ. ಆತಿಥೇಯ ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕ್ಕೆ ನೇರ ಪ್ರವೇಶ ಲಭಿಸಿದೆ. ಉಳಿದಂತೆ 2022ರ 8 ಅಗ್ರ ತಂಡಗಳು ನೇರವಾಗಿ ಆಯ್ಕೆಯಾಗಿವೆ. ಇವುಗಳೆಂದರೆ ಇಂಗ್ಲೆಂಡ್‌, ಪಾಕಿಸ್ಥಾನ, ಭಾರತ, ನ್ಯೂಜಿಲ್ಯಾಂಡ್‌, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಆಸ್ಟ್ರೇಲಿಯ ಮತ್ತು ನೆದರ್ಲೆಂಡ್ಸ್‌. ಉಳಿದವು ವಿವಿಧ ಅರ್ಹತಾ ಸುತ್ತುಗಳಿಂದ ಬಂದಿವೆ.

ಯುರೋಪಿಯನ್‌ ಕ್ವಾಲಿಫೈಯರ್: ಐರ್ಲೆಂಡ್‌, ಸ್ಕಾಟ್ಲೆಂಡ್‌.
ಅಮೆರಿಕ ಕ್ವಾಲಿಫೈಯರ್‌: ಕೆನಡಾ.
ಏಷ್ಯಾ ಕ್ವಾಲಿಪೈಯರ್‌: ನೇಪಾಲ, ಒಮಾನ್‌.
ಆಫ್ರಿಕಾ ಕ್ವಾಲಿಫೈಯರ್‌: ನಮೀಬಿಯಾ, ಉಗಾಂಡ.
ಪೂರ್ವ ಏಷ್ಯಾ-ಪೆಸಿಫಿಕ್‌ ಕ್ವಾಲಿಫೈಯರ್‌: ಪಪುವಾ ನ್ಯೂಗಿನಿಯ.

ಕ್ರೀಡಾಂಗಣಗಳತ್ತ ಒಂದು ಸುತ್ತು

ವೆಸ್ಟ್‌ ಇಂಡೀಸ್‌ ಮೈದಾನಗಳು

ಗಯಾನ, ನ್ಯಾಶನಲ್‌ ಸ್ಟೇಡಿಯಂ ಪ್ರಾವಿಡೆನ್ಸ್‌
ಡಿಮೆರಾರ ನದಿ ಕಿನಾರೆಯಲ್ಲಿರುವ ಈ ಕ್ರೀಡಾಂಗಣವನ್ನು 2007ರ ವಿಶ್ವಕಪ್‌ಗಾಗಿ ನಿರ್ಮಿಸಲಾಗಿತ್ತು. ಗಯಾನಾ ರಾಜಧಾನಿ ಜಾರ್ಜ್‌ಟೌನ್‌ನಿಂದ ಸ್ವಲ್ಪವೇ ದೂರದಲ್ಲಿದ್ದು, 15 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿದೆ.
ಆತಿಥ್ಯ: “ಸಿ’ ವಿಭಾಗದ 5 ಪಂದ್ಯ, ಸೆಮಿಫೈನಲ್‌-2

ಕೆನ್ಸಿಂಗ್ಟನ್‌ ಓವಲ್‌, ಬ್ರಿಜ್‌ಟೌನ್‌, ಬಾರ್ಬಡಾಸ್‌
120 ವರ್ಷಗಳ ಸುದೀರ್ಘ‌ ಇತಿಹಾಸವುಳ್ಳ ಇದು ವೆಸ್ಟ್‌ ಇಂಡೀಸ್‌ನ ಅತೀ ದೊಡ್ಡ ಕ್ರೀಡಾಂಗಣ. ಅತೀ ಹೆಚ್ಚಿನ ಬೌನ್ಸ್‌ ಹೊಂದಿರುವ ಅಂಗಳವೂ ಹೌದು. 28 ಸಾವಿರ ವೀಕ್ಷಕರು ಇಲ್ಲಿ ಪಂದ್ಯವನ್ನು ನೋಡಬಹುದು.
1871ರಲ್ಲಿ ಇದನ್ನು ನಿರ್ಮಿಸಲಾಗಿತ್ತು. ಅಂದು ಕೇವಲ 12,500 ಸಾಮರ್ಥ್ಯ ಹೊಂದಿತ್ತು. 2007ರ ಏಕದಿನ ವಿಶ್ವಕಪ್‌ಗಾಗಿ ಇದನ್ನು ನವೀಕರಿಸಲಾಯಿತು.
ಆತಿಥ್ಯ: “ಬಿ’ ವಿಭಾಗದ 5, ಸೂಪರ್‌-8ರ 3, ಫೈನಲ್‌

ಸರ್‌ ವಿವಿಯನ್‌ ರಿಚರ್ಡ್ಸ್‌ ಸ್ಟೇಡಿಯಂ,ನಾರ್ತ್‌ ಸೌಂಡ್‌, ಆಂಟಿಗುವಾ
ಆಂಟಿಗುವ ರಜಧಾನಿ ಸೇಂಟ್‌ ಜಾನ್ಸನಿಂದ 15 ನಿಮಿಷಗಳ ಹಾದಿಯಲ್ಲಿದೆ ಈ ಕ್ರೀಡಾಂಗಣ. 2007ರ ಏಕದಿನ ವಿಶ್ವಕಪ್‌ ಪಂದ್ಯಾವಳಿಗಾಗಿ ಇದನ್ನು ನಿರ್ಮಿಸಲಾಗಿತ್ತು. ವೀಕ್ಷಕರ ಸಾಮರ್ಥ್ಯ ಕೇವಲ 10 ಸಾವಿರ. ಇಲ್ಲಿನ ಎರಡು ಸ್ಟಾÂಂಡ್‌ಗಳಿಗೆ ಲೆಜೆಂಡ್ರಿ ಕ್ರಿಕೆಟಿಗರಾದ ಆ್ಯಂಡಿ ರಾಬರ್ಟ್ಸ್ ಮತ್ತು ಕರ್ಟ್ಲಿ ಆ್ಯಂಬ್ರೋಸ್‌ ಅವರ ಹೆಸರನ್ನು ಇಡಲಾಗಿದೆ. ವಿಪರ್ಯಾಸವೆಂದರೆ, ಇದು ಸಾಕಷ್ಟು ಕಳಂಕವನ್ನು ಹೊತ್ತುಕೊಂಡಿರುವ ಮೈದಾನ. ಇಲ್ಲಿನ ರನ್‌ಅಪ್‌ ಬೌಲರ್‌ಗಳಿಗೆ ಅಪಾಯಕಾರಿ ಎಂಬ ಕಾರಣಕ್ಕಾಗಿ 2009ರ ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಪಂದ್ಯವನ್ನು ಹತ್ತೇ ಎಸೆತಗಳ ಬಳಿಕ ರದ್ದುಗೊಳಿಸಲಾಗಿತ್ತು!
ಆತಿಥ್ಯ: “ಬಿ’ ವಿಭಾಗದ 4, ಸೂಪರ್‌-8ರ 4 ಪಂದ್ಯ

ಬ್ರಿಯಾನ್‌ ಲಾರಾ ಕ್ರಿಕೆಟ್‌ ಅಕಾಡೆಮಿ, ಟರೂಬ, ಟ್ರಿನಿಡಾಡ್‌ ಆ್ಯಂಡ್‌ ಟೊಬಾಗೊ
2007ರ ವಿಶ್ವಕಪ್‌ಗಾಗಿ ನಿರ್ಮಾಣಗೊಂಡ ಕ್ರೀಡಾಂಗಣ ಇದಾಗಿದೆ. ಆದರೆ ಇದರ ನಿರ್ಮಾಣ ಕಾರ್ಯ ವಿಳಂಬಗೊಂಡ ಪರಿಣಾಮ ಅಂದಿನ ಪಂದ್ಯಗಳನ್ನು ಬೇರೆಡೆ ಆಯೋಜಿಸಬೇಕಾಯಿತು. 15 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯ ಹೊಂದಿದೆ.
ಆತಿಥ್ಯ: “ಸಿ’ ವಿಭಾಗದ 4 ಪಂದ್ಯ, ಸೆಮಿಫೈನಲ್‌-1

ಅರ್ನಾಸ್‌ ವೇಲ್‌ ಗ್ರೌಂಡ್‌,ಅರ್ನಾಸ್‌ ವೇಲ್‌, ಸೇಂಟ್‌ ವಿನ್ಸೆಂಟ್‌
ಇದು 1981ರಲ್ಲಿ ನಿರ್ಮಾಣಗೊಂಡ ಸ್ಟೇಡಿಯಂ. ಕ್ರಿಕೆಟ್‌ ಜತೆಗೆ ಫುಟ್‌ಬಾಲ್‌ ಕೂಡ ಆಡಲಾಗುತ್ತದೆ. ಕಿಂಗ್ಸ್‌ಟೌನ್‌ನಿಂದ ಕೆಲವೇ ಕಿ.ಮೀ. ದೂರದಲ್ಲಿದೆ. 18 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿದೆ.
ಆತಿಥ್ಯ: “ಡಿ’ ವಿಭಾಗದ 3 ಪಂದ್ಯ, 2 ಸೂಪರ್‌-8 ಪಂದ್ಯ

ಡ್ಯಾರನ್‌ ಸ್ಯಾಮಿ ನ್ಯಾಶನಲ್‌ ಕ್ರಿಕೆಟ್‌ ಸ್ಟೇಡಿಯಂ, ಗ್ರಾಸ್‌ ಐಲೆಟ್‌, ಸೇಂಟ್‌ ಲೂಸಿಯ
ಮೂಲ ಹೆಸರು ಬ್ಯೂಸೆಜರ್‌ ಸ್ಟೇಡಿಯಂ. 2020ರಲ್ಲಿ ನಿರ್ಮಾಣ. ಸಾಮರ್ಥ್ಯ ಹನ್ನೆರಡೂವರೆ ಸಾವಿರ. ಓವಲ್‌ ಆಕಾರ, ಕ್ರೀಡಾಂಗಣದ ಬೌಂಡರಿ ತುಸು ದೀರ್ಘ‌. 2016ರಲ್ಲಿ ವೆಸ್ಟ್‌ ಇಂಡೀಸ್‌ಗೆ ಟಿ20 ವಿಶ್ವಕಪ್‌ ಗೆದ್ದು ಕೊಟ್ಟ ನಾಯಕ ಡ್ಯಾರನ್‌ ಸಮ್ಮಿ ಅವರ ಗೌರವಾರ್ಥ ಈ ಸ್ಟೇಡಿಯಂ ಹೆಸರನ್ನು ಬದಲಾಯಿಸಲಾಯಿತು. ಮತ್ತೋರ್ವ ಗೆಲುವಿನ ರೂವಾರಿ ಜಾನ್ಸನ್‌ ಚಾರ್ಲ್ಸ್‌ ಹೆಸರನ್ನು ಸ್ಟ್ಯಾಂಡ್ ಒಂದಕ್ಕೆ ಇರಿಸಲಾಗಿದೆ.
ಆತಿಥ್ಯ: 3 ಗ್ರೂಪ್‌ , ಸೂಪರ್‌-8 ಹಂತದ 3 ಪಂದ್ಯ

ಅಮೆರಿಕ ಕ್ರೀಡಾಂಗಣಗಳು
ನಾಸಾವ್‌ ಕೌಂಟಿ ಇಂಟರ್‌ನ್ಯಾಶನಲ್‌ ಕ್ರಿಕೆಟ್‌ ಸ್ಟೇಡಿಯಂ, ನ್ಯೂಯಾರ್ಕ್‌
ವೆಸ್ಟ್‌ ಇಂಡೀಸ್‌ ಕ್ರೀಡಾಂಗಣಗಳಿಗೆ ಹೋಲಿಸಿದರೆ ನ್ಯೂಯಾರ್ಕ್‌ನ ಈ ಸ್ಟೇಡಿಯಂ ಸಾಮರ್ಥ್ಯ ಎರಡರಷ್ಟು ಹೆಚ್ಚಿದೆ. ಆದರೆ ಫ್ಲಡ್‌ಲೈಟ್‌ ಇಲ್ಲ. ಹೀಗಾಗಿ ಡೇ ಮ್ಯಾಚ್‌ಗಳನ್ನಷ್ಟೇ ಆಡಲು ಸಾಧ್ಯ. ಈವರೆಗೆ ಇಲ್ಲಿ ಯಾವುದೇ ದೇಶಿ ಅಥವಾ ಅಂತಾರಾಷ್ಟ್ರೀಯ ಪಂದ್ಯ ನಡೆದಿಲ್ಲ. ಇವುಗಳನ್ನು ಆಡಿಸದೆಯೇ ನೇರವಾಗಿ ವಿಶ್ವಕಪ್‌ಗೆ ತೆರೆಯಲ್ಪಡುವ ಸ್ಟೇಡಿಯಂ ಎಂಬುದು ಇದರ ಹೆಗ್ಗಳಿಕೆ.
ಜೂ. 9ರ ಭಾರತ-ಪಾಕಿಸ್ಥಾನ ನಡುವಿನ ಹೈ ವೋಲ್ಟೆàಜ್‌ ಪಂದ್ಯ ಈ ಕ್ರೀಡಾಂಗಣದಲ್ಲೇ ನಡೆಯಲಿದೆ.
ಆತಿಥ್ಯ: ಎ ಮತ್ತು ಡಿ ಗ್ರೂಪ್‌ಗ್ಳ 8 ಪಂದ್ಯ.

ಗ್ರ್ಯಾಂಡ್ ಪ್ರೈರಿ ಸ್ಟೇಡಿಯಂ, ಡಲ್ಲಾಸ್‌
ಇದಕ್ಕೆ ಏರ್‌ಹಾಗ್ಸ್‌ ಸ್ಟೇಡಿಯಂ, ಕ್ವಿಕ್‌ ಟ್ರಿಪ್‌ ಸ್ಟೇಡಿಯಂ ಎಂಬ ಹೆಸರೂ ಇದೆ. ಮೂಲತಃ ಇದು ಬೇಸ್‌ಬಾಲ್‌ ಕ್ರೀಡಾಂಗಣ. 2008ರಲ್ಲಿ ಇದು ಬೇಸ್‌ಬಾಲ್‌ಗೆ ತೆರೆಯಲ್ಪಟಾಗ 7 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿತ್ತು. 2017-2019ರ ಅವಧಿಯಲ್ಲಿ ಫುಟ್‌ಬಾಲ್‌ ಪಂದ್ಯಗಳನ್ನೂ ಇಲ್ಲಿ ಆಡಲಾಯಿತು. ಅನಂತರ ಯುಎಸ್‌ಎ ಕ್ರಿಕೆಟ್‌ನ ಆರ್ಥಿಕ ಪಾಲುದಾರ ಸಂಸ್ಥೆ “ಅಮೆರಿಕನ್‌ ಕ್ರಿಕೆಟ್‌ ಎಂಟರ್‌ಪ್ರೈಸಸ್‌’ ಇದನ್ನು ಲೀಸ್‌ಗೆ ಪಡೆದು ಅಭಿವೃದ್ಧಿಪಡಿಸಿತು. ಆದರೆ ವೀಕ್ಷಕರ ಸಾಮರ್ಥ್ಯ ಮಾತ್ರ 7 ಸಾವಿರಕ್ಕೇ ಸೀಮಿತಗೊಂಡಿದೆ.
ಆತಿಥ್ಯ: ಎ ಮತ್ತು ಡಿ ಗ್ರೂಪ್‌ಗಳ 4 ಪಂದ್ಯ.

ಸೆಂಟ್ರಲ್‌ ಬ್ರೊವಾರ್ಡ್‌ ಪಾರ್ಕ್‌ ಆ್ಯಂಡ್‌ ಬ್ರೊವಾರ್ಡ್‌ ಕೌಂಟಿ ಸ್ಟೇಡಿಯಂ, ಫ್ಲೋರಿಡಾ
ಅಮೆರಿಕದ ಅತ್ಯಂತ ಪುರಾತನ ಹಾಗೂ ಕ್ರಿಕೆಟಿಗೆಂದೇ ನಿರ್ಮಾಣಗೊಂಡ ಕ್ರೀಡಾಂಗಣ ಇದಾಗಿದೆ. ಕೆರಿಬಿಯನ್‌ ಕ್ರಿಕೆಟ್‌ ಲೀಗ್‌ ಪಂದ್ಯಗಳ ಆತಿಥ್ಯವನ್ನೂ ಇದು ವಹಿಸಿದೆ. ವೆಸ್ಟ್‌ ಇಂಡೀಸ್‌ನ ಎರಡನೇ ತವರು ಎನ್ನಲಡ್ಡಿಯಿಲ್ಲ. ವಿಂಡೀಸ್‌ ತಂಡ ಇಲ್ಲಿ ಭಾರತ, ನ್ಯೂಜಿಲ್ಯಾಂಡ್‌ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯಗಳನ್ನೂ ಆಡಿದೆ. ಟಿ20 ವಿಶ್ವಕಪ್‌ ಪಂದ್ಯಾವಳಿಗಾಗಿ ಇದನ್ನು ಮೇಲ್ದರ್ಜೆಗೆ ಏರಿಸಲಾಯಿತು. 6 ಪಿಚ್‌ಗಳನ್ನು ಇದು ಹೊಂದಿದೆ. 20 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿದೆ.
ಆತಿಥ್ಯ: ಎ ಮತ್ತು ಡಿ ಗ್ರೂಪ್‌ಗಳ 4 ಪಂದ್ಯ

Advertisement

Udayavani is now on Telegram. Click here to join our channel and stay updated with the latest news.

Next