Advertisement

World cup 1987; ಕೇವಲ ‘ಎರಡು ಟಿಕೆಟ್‘ ಬದಲಾಯಿಸಿತ್ತು ಕ್ರಿಕೆಟ್ ಜಗತ್ತಿನ ಭವಿಷ್ಯ!

03:48 PM Oct 05, 2023 | ಕೀರ್ತನ್ ಶೆಟ್ಟಿ ಬೋಳ |

ವಿಶ್ವಕಪ್ ಮತ್ತೆ ಭಾರತಕ್ಕೆ ಬಂದಿದೆ. ಕ್ರಿಕೆಟ್ ಆಟವನ್ನು ಧರ್ಮದಂತೆ ಆರಾಧಿಸುವ ನಾಡಿನಲ್ಲಿ ಆಟದ ಮೆಗಾಕೂಟ ನಡೆಯಲಿದೆ. ಹಾಗಾದರೆ ಮೊದಲ ಬಾರಿಗೆ ಭಾರತದಲ್ಲಿ ಯಾವಾಗ ವಿಶ್ವಕಪ್ ಆಯೋಜಿಸಲಾಗಿತ್ತು? ಅದರ ಹಿಂದಿನ ಶಕ್ತಿ ಯಾರು? ಇದರ ಬಗ್ಗೆ ತಿಳಿದುಕೊಳ್ಳೋಣ.

Advertisement

ಒಬ್ಬ ಇಚ್ಛಾಶಕ್ತಿ ಇರುವ ಮನುಷ್ಯನ ಪ್ರತೀಕಾರದ ಹಠವು ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ 1987ರ ವಿಶ್ವಕಪ್ ಒಳ್ಳೆಯ ಉದಾಹರಣೆ. ಕೇವಲ ಎರಡು ಟಿಕೆಟ್, ಎನ್ ಕೆಪಿ ಸಾಳ್ವೆ ಎಂಬ ಹಠವಾದಿ, ಇಂದಿರಾ- ರಾಜೀವ್ ರಾಜಕೀಯ, ಧೀರೂಭಾಯಿ ಅಂಬಾನಿ ಎಂಬ ಪಕ್ಕಾ ಬ್ಯುಸಿನೆಸ್ ಮ್ಯಾನ್ ಈ ಮೆಗಾಕೂಟ ಆಯೋಜನೆ ಹಿಂದಿನ ಹೈಲೈಟ್ಸ್.

ಅದು 1983. ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತ ತಂಡ ಮೊತ್ತ ಮೊದಲ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶ ಪಡೆದಿತ್ತು. ಈ ವೇಳೆ ರಾಜಕೀಯ ಭೇಟಿಯ ಕಾರಣಕ್ಕೆ ಇಂಗ್ಲೆಂಡ್ ಗೆ ಬಂದಿದ್ದ ಕೇಂದ್ರ ಶಿಕ್ಷಣ ಸಚಿವ ಸಿದ್ದಾರ್ಥ್ ಶಂಕರ್ ರೇ ಅವರು ಈ ಅಪರೂಪದ ಸನ್ನಿವೇಶವನ್ನು ಕಾಣ ಬಯಸಿದ್ದರು. ಅದಕ್ಕಾಗಿ ಬಿಸಿಸಿಐ ಅಧ್ಯಕ್ಷ, ರಾಜಕಾರಣಿ ಎನ್ ಕೆಪಿ ಸಾಳ್ವೆ ಅವರ ಬಳಿ ಎರಡು ಟಿಕೆಟ್ ಕೇಳಿದ್ದರು. ಆದರೆ ಟಿಕೆಟ್ ಕೇಳಲು ಹೋದ ಸಾಳ್ವೆ ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಆಗ ಎಂಸಿಸಿ) ಅವಮಾನ ಮಾಡಿತ್ತು. ನಿಮಗೆ ಈಗಾಗಲೇ ಎರಡು ಟಿಕೆಟ್ ನೀಡಲಾಗಿದೆ, ಇನ್ನು ಹೆಚ್ಚು ಕೊಡಲು ಸಾಧ್ಯವಿಲ್ಲ ಎಂದಿತ್ತು. ಯಾವ ದೇಶದ ತಂಡದ ಫೈನಲ್ ಆಡುತ್ತಿದೆಯೋ ಆ ತಂಡಕ್ಕೆ ಎರಡು ಹೆಚ್ಚುವರಿ ಟಿಕೆಟ್ ಕೊಡಲು ಆಂಗ್ಲರ ಅಹಂ ಬಿಡಲಿಲ್ಲ. ಯಾಕೆಂದರೆ ಇಂಗ್ಲೆಂಡ್ ಸೆಮಿಫೈನಲ್ ನಲ್ಲಿ ಭಾರತ ವಿರುದ್ಧ ಸೋಲನುಭವಿಸಿತ್ತು. ಆಂಗ್ಲ ಪತ್ರಿಕೆಗಳು ದಪ್ಪ ಅಕ್ಷರಗಳಲ್ಲಿ Shame on England ಎಂದು ಬರೆದಿದ್ದವು.

ಫೈನಲ್ ಪಂದ್ಯದಲ್ಲಿ ಹಲವು ಕುರ್ಚಿಗಳು ಖಾಲಿಯಿದ್ದರೂ ಭಾರತಕ್ಕೆ ಟಿಕೆಟ್ ನೀಡದ ಇಂಗ್ಲೆಂಡ್ ದರ್ಪದಿಂದ ಸಾಳ್ವೆ ಕುಪಿತಗೊಂಡಿದ್ದರು. ಇಂಗ್ಲೆಂಡ್ ಕೈಯಿಂದ ವಿಶ್ವಕಪ್ ಹಿಡಿತವನ್ನು ತಪ್ಪಿಸಬೇಕು ಎಂದು ಅಂದೇ ಮನಸ್ಸಿನಲ್ಲಿ ಅಂದುಕೊಂಡಿದ್ದರು. ಭಾರತ ವಿಶ್ವಕಪ್ ಗೆದ್ದು ಇತಿಹಾಸ ಬರೆಯಿತು. ಮರುದಿನ ಸಂತೋಷ ಕೂಟದಲ್ಲಿ ಸಾಳ್ವೆಗೆ ಎದುರಾದವರು ಪಾಕಿಸ್ತಾನದ ಏರ್ ಚೀಫ್ ಮಾರ್ಶಲ್ ನೂರ್ ಖಾನ್ ಮತ್ತು ಶ್ರೀಲಂಕಾದ ಕ್ರಿಕೆಟ್ ಅಧಿಕಾರಿ. “ನಮ್ಮ ದೇಶದಲ್ಲೂ ಇಂತಹ ಕೂಟಗಳು ನಡೆಯಬೇಕು” ಎಂದು ಮೊದಲ ಬಾರಿ ಸಾಳ್ವೆ ಹೇಳಿದ್ದರು. “ನಮ್ಮಲ್ಲಿಯೇ ವಿಶ್ವಕಪ್  ನಡೆದರೆ ಹೇಗೆ” ಎಂದು ನೂರ್ ಖಾನ್ ಕೂಡಾ ದನಿಗೂಡಿಸಿದರು. “1987ರ ವಿಶ್ವಕಪ್ ಭಾರತ ಮತ್ತು ಪಾಕ್ ಒಟ್ಟಾಗಿ ಯಾಕೆ ಆಯೋಜನೆ ಮಾಡಬಾರದು” ಎಂದು ಬಿಟ್ಟರು ಸಾಳ್ವೆ. ಹೀಗೆ ಇಂಗ್ಲೆಂಡ್ ಕೈಯಿಂದ ವಿಶ್ವಕಪ್ ಆಯೋಜನೆ ಹಕ್ಕು ಕಸಿದುಕೊಳ್ಳುವ ಯೋಜನೆಯೊಂದು ಅದರದೇ ನೆಲದಲ್ಲಿ ಮೊಳಕೆಯೊಡೆದಿತ್ತು.

Advertisement

ಭಾರತಕ್ಕೆ ಬಂದ ಸಾಳ್ವೆ ಮೊದಲು ಭೇಟಿ ಮಾಡಿದ್ದು ಪ್ರಧಾನಿ ಇಂದಿರಾ ಗಾಂಧಿ ಅವರನ್ನು. ಭಾರತದಲ್ಲೇ ಕ್ರಿಕೆಟ್ ವಿಶ್ವಕಪ್ ಮಾಡೋಣ ಎಂದು ಹೇಳಿಬಿಟ್ಟರು. ಒಂದು ಕ್ಷಣ ಯೋಚಿಸಿದ ಇಂದಿರಾ ಮೊದಲು ಕರೆ ಮಾಡಿದ್ದು ರಿಲಯನ್ಸ್ ಉದ್ಯಮದ ಮಾಲಕ ಧೀರೂಭಾಯಿ ಅಂಬಾನಿ ಅವರಿಗೆ. ಮರುದಿನ ಕಚೇರಿಗೆ ಬಂದ ಅಂಬಾನಿಗೆ ಇಂದಿರಾ ಎದುರಿಟ್ಟಿದ್ದು ಕೇವಲ ಒಂದು ಪ್ರಶ್ನೆ. “ಒಂದು ವೇಳೆ ನಾವು ಭಾರತಕ್ಕೆ ವಿಶ್ವಕಪ್ ಕೂಟ ತಂದರೆ ನೀವು ಖರ್ಚು ಭರಿಸುತ್ತೀರಾ?” ಅದಕ್ಕೆ ಧೀರೂಭಾಯಿ ಅಂಬಾನಿ, “ನೀವು ಭಾರತಕ್ಕೆ ವಿಶ್ವಕಪ್ ಕೂಟ ತಂದರೆ ನಾನು ಖಾಲಿ ಚೆಕ್ ಗೆ ಸಹಿ ಹಾಕಿ ಕೊಡುತ್ತೇನೆ” ಎಂದು ಬಿಟ್ಟರು. ಹೀಗೆ ಸಾಳ್ವೆ ಎಂದುಕೊಂಡಿದ್ದ ಮಹಾನ್ ಕಾರ್ಯವೊಂದು ಹೂ ಎತ್ತಿದಂತೆ ಸಲೀಸಾಗಿ ಮುಗಿದು ಹೋಗಿತ್ತು.

ಇಂದಿರಾ-ಅಂಬಾನಿ ಬಲವನ್ನು ಬೆನ್ನಿಗೆ ಕಟ್ಟಿಕೊಂಡ ಸಾಳ್ವೆ ಲಾಹೋರ್ ಗೆ ಹೋಗಿ ನೂರ್ ಖಾನ್ ಭೇಟಿ ಮಾಡಿದರು. ವಿಶ್ವಕಪ್ ಆಯೋಜನೆ ಹಕ್ಕನ್ನು ಇಂಗ್ಲೆಂಡ್ ನಿಂದ ಸ್ಥಳಾಂತರಿಸುವ ಪ್ರಸ್ತಾವನೆಯನ್ನು ಜಗಮೋಹನ್ ದಾಲ್ಮಿಯಾ ಅವರು ಐಸಿಸಿಗೆ ಬರೆದರು. ಐಸಿಸಿ ಸಭೆಯಲ್ಲಿ ಈ ವಿಚಾರ ಬಂದಾಗ ಭಾರತದ ಪ್ರಸ್ತಾವನೆಗೆ ಭಾರಿ ತಿರಸ್ಕಾರ ಎದುರಾಯಿತು. ಆಗ ಇಂಗ್ಲೆಂಡ್ ಬೋರ್ಡ್ ಅಧ್ಯಕ್ಷರೇ ಐಸಿಸಿ ಅಧ್ಯಕ್ಷರಾಗುತ್ತಿದ್ದರು. ಅಲ್ಲದೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಬಳಿ ವಿಟೋ ಪವರ್ ಇತ್ತು. ಭಾರತದಂತಹ ದೇಶದ ಯಾವುದೇ ಪ್ರಸ್ತಾವನೆಯನ್ನು ಕಡೆಗಣಿಸಲಾಗುತ್ತಿತ್ತು. ಇದನ್ನೆಲ್ಲಾ ಮೊದಲೇ ಯೋಚಿಸಿದ್ದ ಸಾಳ್ವೆ ಮತ್ತು ತಂಡ ಒಂದು ಪ್ಲ್ಯಾನ್ ಮಾಡಿತ್ತು. ಅದೆಂದರೆ ರೊಟೇಶನ್ ಪಾಲಿಸಿಯಲ್ಲಿ ವಿಶ್ವಕಪ್. ಅಂದರೆ ಭಾರತದ ಬಳಿಕ ವಿಶ್ವಕಪ್ ಆಯೋಜನೆ ಅವಕಾಶ ಆಸ್ಟ್ರೇಲಿಯಾಗೆ ಸಿಗಬೇಕು ಎಂದು ಪ್ರಸ್ತಾವನೆಯಲ್ಲಿ ಸೂಚಿಸಿತ್ತು. ಹೀಗಾಗಿ ವಿಟೋ ಪವರ್ ಬಳಸದಂತೆ ಕಾಂಗರೂ ದೇಶವನ್ನು ಕಟ್ಟಿಹಾಕಿತ್ತು. ಇದರ ಬೆಂಬಲ ಪಡೆದು ಭಾರತ ಪಾಕಿಸ್ತಾನ ಜಂಟಿ ಮ್ಯಾನೇಜ್ ಮೆಂಟ್ ಕಮಿಟಿ ರಚಿಸಲಾಯಿತು. ಎನ್ ಕೆಪಿ ಸಾಳ್ವೆ ಅಧ್ಯಕ್ಷರಾದರು.

ಮತದಾನದ ಗ್ಯಾಂಬ್ಲಿಂಗ್: ಇನ್ನೂ ಭಾರತಕ್ಕೆ ಆಯೋಜನೆ ಹಕ್ಕು ಸಿಕ್ಕಿರಲಿಲ್ಲ. ಐಸಿಸಿ ಮತದಾನದಲ್ಲಿ ಜಯ ಸಿಗುವುದು ಬೇಕಿತ್ತು. ಐಸಿಸಿಯಲ್ಲಿ ಆಗ ಎಂಟು ಟೆಸ್ಟ್ ಆಡುವ ದೇಶಗಳು ಮತ್ತು 21 ಅಸೋಸಿಯೇಟ್ ದೇಶಗಳು ಸದಸ್ಯರು. ಟೆಸ್ಟ್ ದೇಶಗಳಿಗೆ ತಲಾ ಎರಡು ವೋಟ್ ಮತ್ತು ಉಳಿದ ದೇಶಗಳಿಗೆ ತಲಾ ಒಂದು ಮತ ಹಾಕುವ ಅವಕಾಶ. ಅಂದರೆ 29 ದೇಶಗಳು 37 ವೋಟ್ ಗಳು.

ಇನ್ನೂ ವಿದೇಶಿ ನಿಯಮಗಳಿಗೆ ಒಳಪಡದ, ಬಡ ದೇಶವಾಗಿದ್ದ ಭಾರತದಲ್ಲಿ ವಿಶ್ವಕಪ್ ನಂತಹ ಮಹಾನ್ ಕೂಟ ನಡೆಸಬಹುದು ಎಂದು ವೋಟ್ ಹಾಕಲು ಇತರ ದೇಶಗಳು ಮುಂದೆ ಬರುವುದು ಅಷ್ಟರಲ್ಲೇ ಇತ್ತು. ಆಗ ಸಾಳ್ವೆ ಉರುಳಿಸಿದ್ದು ಹೊಸ ದಾಳ. ವಿಶ್ವಕಪ್ ಆಯೋಜಿಸುವ ದೇಶವು ಸದಸ್ಯ ರಾಷ್ಟ್ರಗಳಿಗೆ ಗೌರವ ಧನ ನೀಡಬೇಕಿತ್ತು. ಅಸೋಸಿಯೇಟ್ ದೇಶಗಳಿಗೆ ಇಂಗ್ಲೆಂಡ್ ನೀಡುತ್ತಿದ್ದ 5 ಸಾವಿರ ಪೌಂಡ್ ಗಿಂತ ನಾಲ್ಕು ಪಟ್ಟು ಹೆಚ್ಚು ಅಂದರೆ 20 ಸಾವಿರ ಪೌಂಡ್ ನೀಡುತ್ತೇವೆ ಮತ್ತು ಟೆಸ್ಟ್ ದೇಶಗಳಿಗೆ ಇಂಗ್ಲೆಂಡ್ ಗಿಂತ ಐದು ಪಟ್ಟು ಹೆಚ್ಚು ಅಂದರೆ ತಲಾ 75 ಸಾವಿರ ಪೌಂಡ್ ನೀಡುತ್ತೇವೆ ಎಂದು ಪತ್ರ ಬರೆದರು. ಈ ಉಪಾಯ ಕೆಲಸ ಮಾಡಿತ್ತು. ಐಸಿಸಿ ಮತದಾನಲ್ಲಿ ಭಾರತಕ್ಕೆ 3/2ರ ಅಂತರದಲ್ಲಿ ಗೆಲುವಾಗಿತ್ತು.

ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಮಾತಿನಂತೆ ಇಂಗ್ಲೆಂಡ್ ತಕರಾರು ಮುಗಿದಿರಲಿಲ್ಲ. ಭಾರತದಲ್ಲಿ ಬೇಗ ಕತ್ತಲಾಗುವುದರಿಂದ 60 ಓವರ್ ಕ್ರಿಕೆಟ್ ನಡೆಸುವುದು ಕಷ್ಟ ಎಂದಿತ್ತು. ಹೀಗಾಗಿ ಏಕದಿನ ಕ್ರಿಕೆಟ್ ನಲ್ಲಿ ಮೊದಲ ಬಾರಿ 50 ಓವರ್ ಜಾರಿಗೆ ಬಂತು.

ಇಂದಿರಾ ಹತ್ಯೆ: ಎಲ್ಲವೂ ಭಾರತ ಅಂದುಕೊಂಡಂತೆ ನಡೆಯುತ್ತಿತ್ತು. ಆದರೆ ಆಗ ಒಂದು ಟ್ವಿಸ್ಟ್ ಎದುರಾಗಿತ್ತು. ಇಂದಿರಾ ಗಾಂಧಿ ಅವರ ಹತ್ಯೆಯಾಗಿತ್ತು! ಪುತ್ರ ರಾಜೀವ್ ಗಾಂಧಿ ಅವರು ಪ್ರಧಾನಿಯಾದರು. ಆದರೆ ಇಂದಿರಾ ಹಾಗೆ ರಾಜೀವ್ ಅವರು ಧೀರೂಭಾಯಿ ಅಂಬಾನಿ ಜೊತೆಗೆ ಉತ್ತಮ ನಂಟು ಹೊಂದಿರಲಿಲ್ಲ. ಅಲ್ಲದೆ ರಾಜೀವ್ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ವಿ.ಪಿ ಸಿಂಗ್ ಅವರು ಆದಾಯ ತೆರಿಗೆ ಅಧಿಕಾರಿಗಳನ್ನು ಅಂಬಾನಿ ಹಿಂದೆ ಬಿಟ್ಟಿದ್ದರು. ಹೀಗಾಗಿ ಸರ್ಕಾರ ಮತ್ತು ಅಂಬಾನಿ ನಂಟು ಹದಗೆಟ್ಟಿತ್ತು. ಅಲ್ಲಿಗೆ ಖರ್ಚು ಭರಿಸುವ ಅಂಬಾನಿ ದೂರವಾಗಿದ್ದು, ಸಾಳ್ವೆ ವಿಶ್ವಕಪ್ ಕನಸಿಗೆ ದೊಡ್ಡ ಏಟು ಬಿದ್ದಿತ್ತು.

ವಿಶ್ವಕಪ್ ಆಯೋಜನೆಗೆ 30 ಕೋಟಿ ರೂ. ಬೇಕಿತ್ತು. ಅದರಲ್ಲಿ ಭಾರತ 20 ಮತ್ತು ಪಾಕಿಸ್ತಾನ 10 ಕೋಟಿ ಹಾಕಬೇಕಿತ್ತು. ವಿಶ್ವಕಪ್ ನಲ್ಲಿ ಭಾಗವಹಿಸುವ ದೇಶಗಳಿಗೆ 1984ರ ಡಿಸೆಂಬರ್ ಒಳಗೆ ಒಟ್ಟು ನಾಲ್ಕು ಕೋಟಿ ನೀಡಬೇಕಿತ್ತು. ಆದರೆ ಭಾರತ ಬಳಿ ಎಳ್ಳಷ್ಟೂ ಹಣವಿಲ್ಲ. ಹಲವು ಕಂಪೆನಿಗಳ ಬಳಿ ಪ್ರಾಯೋಜಕತ್ವಕ್ಕೆ ತೆರಳಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ರಾಜೀವ್ ಗಾಂಧಿ ಅವರನ್ನೇ ಭೇಟಿಯಾದ ಸಾಳ್ವೆ ನಾಲ್ಕು ಕೋಟಿಯ ನೆರವು ಕೇಳಿದರು. “1983ರ ವಿಶ್ವಕಪ್ ಗೆದ್ದು ಕ್ರಿಕೆಟ್ ಲೋಕದಲ್ಲಿ ಒಳ್ಳೆಯ ಹೆಸರು ಬಂದಿದೆ. ಆದರೆ ಈಗ ಹಣ ಪಾವತಿಸಲು ಆಗದಿದ್ದರೆ ಮರ್ಯಾದೆ ಹೋಗುತ್ತದೆ” ಎಂಬ ಸಾಳ್ವೆ ಭಾವನಾತ್ಮಕ ಮಾತು ಕೇಳಿ ನಾಲ್ಕು ಕೋಟಿ ಕೊಡಲು ಮುಂದಾದರು.

ನಾಲ್ಕು ಕೋಟಿ ಕೊಟ್ಟರೂ ಅದನ್ನು ಬಿಸಿಸಿಐ ಸರ್ಕಾರಕ್ಕೆ ಹಿಂದೆ ಕೊಡಬೇಕಿತ್ತು. ಅದಕ್ಕೂ ಮೊದಲು ವಿಶ್ವಕಪ್ ಆಯೋಜನೆಗೆ 20 ಕೋಟಿ ಒಟ್ಟು ಮಾಡಬೇಕಿತ್ತು. ಇದೇ ಸಮಯದಲ್ಲಿ ದೂರದರ್ಶನ ಕೂಡಾ ತಾನು ಕೊಡಬೇಕಿದ್ದ 6 ಕೋಟಿ ರೂ. ಗೌರವ ಧನ ಕೊಡಲಾಗುವುದಿಲ್ಲ ಎಂದು ಕೈಯೆತ್ತಿ ಬಿಟ್ಟಿತು. ಕಾರಣ ನಾವು ಬ್ರಾಡ್ ಕಾಸ್ಟಿಂಗ್ ಗುಣಮಟ್ಟವನ್ನು ಹೆಚ್ಚಿಸುತ್ತೇವೆ ಎಂದು ಬಿಸಿಸಿಐ ಈಗಾಗಲೇ ಐಸಿಸಿಗೆ ಹೇಳಿತ್ತು. ಇದರ ಖರ್ಚನ್ನು ಅಂದರೆ ಬರೋಬ್ಬರಿ 30 ಕೋಟಿಯನ್ನು ದೂರದರ್ಶನವೇ ಭರಿಸಬೇಕಿತ್ತು. ಹೀಗಾಗಿ ಬಿಸಿಸಿಐ ಕೂಡ ಏನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ.

ಇದೇ ಸಮಯದಲ್ಲಿ ರಾಜೀವ್ ಗಾಂಧಿ ಮತ್ತು ವಿ.ಪಿ ಸಿಂಗ್ ನಡುವಿನ ಸ್ನೇಹ ಹದಗೆಟ್ಟಿತ್ತು. ಪರಿಣಾಮ ಸಿಂಗ್ ಹಣಕಾಸು ಸಚಿವಾಲಯ ಕಳೆದುಕೊಂಡರು. ಇದೇ ಸಮಯಕ್ಕೆ ಕಾಯುತ್ತಿದ್ದ ಸಾಳ್ವೆ ಕೂಡಲೇ ಧೀರೂಭಾಯಿ ಅಂಬಾನಿಗೆ ಕರೆ ಮಾಡಿ, ಮತ್ತೆ ವಿಶ್ವಕಪ್ ಆಯೋಜನೆಯ ಪ್ರಸ್ತಾವನೆಯಿಟ್ಟರು. ಕೇವಲ ಒಂದು ಷರತ್ತು ಹಾಕಿದ ಅಂಬಾನಿ ‘ಎಸ್’ ಎಂದುಬಿಟ್ಟರು. ಆ ಷರತ್ತು ಏನೆಂದರೆ “ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರದರ್ಶನ ಪಂದ್ಯದಲ್ಲಿ ನಾನು ಪ್ರಧಾನಿ ರಾಜೀವ್ ಗಾಂಧಿ ಬಳಿ ಕುಳಿತುಕೊಳ್ಳಬೇಕು”. ಇದಕ್ಕೆ ಒಪ್ಪಿದ ಸಾಳ್ವೆಗೆ ಬಲ ಬಂದಿತ್ತು.

ರಿಲಯನ್ಸ್ ಕಪ್: ಮೊದಲು ಅಂಬಾನಿ ಕೇಂದ್ರ ಸರ್ಕಾರಕ್ಕೆ ನಾಲ್ಕು ಕೋಟಿ ರೂ. ನೀಡಿದ್ದರು. ಬಳಿಕ ಟೈಟಲ್ ಸ್ಪಾನ್ಸರ್ ಶಿಪ್ ಎಂದು ಐದು ಕೋಟಿ ರೂ. ಬಿಸಿಸಿಐಗೆ ಕೊಟ್ಟರು. ಅನಿಲ್ ಅಂಬಾನಿ ಅವರನ್ನು ಸಂಘಟಕರನ್ನಾಗಿಸಿದರು. ಈ ಮೂಲಕ ವಿಶ್ವಕಪ್ ರಿಲಯನ್ಸ್ ಕಪ್ ಎಂದು ಹೆಸರು ಪಡೆಯಿತು. ಅಲ್ಲದೆ ಇಂಡಿಯಾ ಪಾಕಿಸ್ತಾನ ಜಂಟಿ ಸಂಘಟನಾ ಸಮಿತಿಯೂ ರಿಲಿಯನ್ಸ್ ಕಪ್ ಸಮಿತಿ ಎಂದು ಹೆಸರು ಬದಲಾಯಿತು. ಕೇವಲ ತನ್ನ ಬ್ರ್ಯಾಂಡ್ ಜಗತ್ತಿನ ಎಲ್ಲೆಡೆ ಪ್ರಸಿದ್ಧಿ ಪಡೆಯಬೇಕು ಎಂಬ ಕಾರಣದಿಂದ ಅಂಬಾನಿ ಎಷ್ಟಾದರೂ ಖರ್ಚು ಮಾಡಲು ಸಿದ್ದರಿದ್ದರು.

ಅಂಬಾನಿ ಎಲ್ಲಾ ಸ್ಟೇಡಿಯಂಗಳ ಗ್ರೌಂಡ್ ಜಾಹೀರಾತನ್ನು ಬರೋಬ್ಬರಿ 2.6 ಕೋಟಿ ರೂ. ನೀಡಿ ಖರೀದಿಸಿದರು. ಅಲ್ಲದೆ ಸ್ಟೇಡಿಯಂಗಳ ರಿಪೇರಿಗೂ ಹಣ ನೀಡಿ ಹೆಚ್ಚುವರಿ ಜಾಹೀರಾತು ಜಾಗ ಪಡೆದರು. ಇಷ್ಟೆಲ್ಲಾ ಹಣ ಬಂದರೂ ಹೊರ ದೇಶದ ಆಟಗಾರರ ಹೋಟೆಲ್ ಗಳಿಗೆ ಪಾವತಿಸಲು ಬಿಸಿಸಿಐ ಬಳಿ ಹಣ ಇರಲಿಲ್ಲ. ಆಗಲೂ ಸಾಳ್ವೆ ತೆರಳಿದ್ದು ಅಂಬಾನಿ ಬಳಿ. ಇದಕ್ಕೂ ಓಕೆ ಎಂದ ರಿಲಯನ್ಸ್ ಮಾಲಕ ಹೋಟೆಲ್ ಖರ್ಚನ್ನೂ ನೋಡಿಕೊಂಡರು. ಹೀಗೆ ನಯಾ ಪೈಸೆಯೂ ಇರದೆ ವಿಶ್ವಕಪ್ ಆಯೋಜನೆ ಹಕ್ಕು ಪಡೆದಿದ್ದ ಭಾರತ ಮೊತ್ತ ಮೊದಲ ಬಾರಿಗೆ ಕ್ರಿಕೆಟ್ ನ ಮೆಗಾಕೂಟವನ್ನು ಯಶಸ್ವಿಯಾಗಿ ನಡೆಸಿತು.

ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಏಳು ರನ್ ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ಮೊದಲ ಬಾರಿಗೆ ಕಪ್ ಗೆದ್ದಿತು. ಭಾರತ ವಿಶ್ವಕಪ್ ಟ್ರೋಫಿ ತನ್ನಲ್ಲಿ ಉಳಿಸಿಕೊಳ್ಳಲು ಆಗದಿದ್ದರೂ ವಿಶ್ವ ಕ್ರಿಕೆಟ್ ನಲ್ಲಿ ಹೊಸ ಶಕ್ತಿಯಾಗಿ ರೂಪುಗೊಂಡಿತು. ಹಾವಾಡಿಗರ ದೇಶ ಎಂದು ಜರೆಯುತ್ತಿದ್ದವರ ಎದುರು ಹಿಂದೆಂದೂ ಆಗದ ರೀತಿಯಲ್ಲಿ ಮೆಗಾ ಕೂಟ ಆಯೋಜಿಸಿ ಏನೆಂದು ತೋರಿಸಿಕೊಟ್ಟಿತು. ಕೇವಲ ಎರಡು ಟಿಕೆಟ್ ಕೊಡಲು ನಿರಾಕರಿಸಿದ್ದ ಆಂಗ್ಲರು ಕೇವಲ ನಾಲ್ಕು ವರ್ಷದ ಅಂತರದಲ್ಲಿ ಭಾರತದಲ್ಲಿ ಬಂದು ಟಿಕೆಟ್ ಕೇಳುವಂತಾಯಿತು.

ಇದು ಎನ್ ಕೆಪಿ ಸಾಳ್ವೆ ಎಂಬ ಗಟ್ಟಿಗನ ಕಥೆ. ಇದು ಭಾರತದ ಕ್ರಿಕೆಟ್ ವಿಶ್ವದಲ್ಲಿ ಭಾರತ ಇಟ್ಟ ಮೊದಲ ಗಟ್ಟಿ ಹೆಜ್ಜೆಯ ಕಥೆ.

*ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next