ಮಂಗಳೂರು: ಓದಿ ಏನಾಗುವ ಆಸೆಯಿದೆ ಎಂದು ಶಾಲೆಯಲ್ಲಿ ಅಧ್ಯಾಪಕಿ ಕೇಳಿದಾಗ ಎಲ್ಲರೂ ಡಾಕ್ಟರ್, ಎಂಜಿನಿಯರ್ ಆಗುತ್ತೇವೆ ಎಂದಾಗ, ಮೂಲೆಯಲ್ಲಿ ಕುಳಿತಿದ್ದ ಹುಡುಗನೊಬ್ಬ “ನಾನು ಬಾಡಿಬಿಲ್ಡರ್ ಆಗುತ್ತೇನೆ ಮೇಡಂ’ ಎಂದಿದ್ದ. ಅದನ್ನು ಕೇಳಿದ್ದ ಸಹಪಾಠಿ ಗಳೆಲ್ಲ ನಕ್ಕು ತಮಾಷೆ ಮಾಡಿದ್ದರು. ಆದರೆ ಅದೇ, ಹುಡುಗ ಈಗ ಸಿಂಗಾಪುರದಲ್ಲಿ ನಡೆದ “ಮಿಸ್ಟರ್ ಯುನಿವರ್ಸ್ ಬಾಡಿ ಬಿಲ್ಡಿಂಗ್’ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಆಗುವ ಮೂಲಕ ಕರಾವಳಿಗೆ ಕೀರ್ತಿ ತಂದಿದ್ದಾನೆ!
ಮಂಗಳೂರಿನ ಬೊಕ್ಕಪಟ್ಣದ ಈ ಕ್ರೀಡಾ ಸಾಧಕನ ಹೆಸರು ನಿಶಾನ್ ಕುಮಾರ್. ನಿಶಾನ್ 65 ಕೆಜಿ ವಿಭಾಗದ ಅಂತಾರಾಷ್ಟ್ರೀಯ ದೇಹದಾಡ್ಯì ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಕಡು ಬಡತನದಲ್ಲಿ ಹುಟ್ಟಿದ ಇವರ ಯಶೋಗಾಥೆ ಎಲ್ಲರಿಗೂ ಸ್ಫೂರ್ತಿ ನೀಡುವಂತದ್ದು.
ನರೇಂದ್ರ-ಸುಚಿತಾ ದಂಪತಿ ಪುತ್ರರಾದ ನಿಶಾನ್‌ಗೆ ಚಿಕ್ಕಂದಿನಲ್ಲೇ ದೊಡ್ಡ ಬಾಡಿಬಿಲ್ಡರ್ ಆಗಬೇಕೆಂಬ ಆಸೆ-ಕನಸು ಇತ್ತು. ಆದರೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿಲ್ಲ. ಅರ್ಧ ದಲ್ಲಿಯೇ ಎಲ್‌ಎಲ್‌ಬಿ ಕಲಿಕೆಯನ್ನು ಮೊಟಕುಗೊಳಿಸಿ, ಬಾಡಿ ಬಿಲ್ಡಿಂಗ್‌ನಲ್ಲೇ ತರಬೇತಿ ಪಡೆಯಲು ಬೆಂಗಳೂರಿನತ್ತ ಪಯಣ ಬೆಳೆಸಿದ್ದರು.
ಬಳಿಕ ಕೊಯಮತ್ತೂರಿನಲ್ಲಿ ನಡೆದ 65 ಕೆ.ಜಿ. ವಿಭಾಗದ “ಮಿಸ್ಟರ್ ಇಂಡಿಯಾ ಜೂನಿಯರ್ ಟೈಟಲ್’ ಜತೆ ಚಿನ್ನದ ಪದಕ, ಮಿಸ್ಟರ್ ಇಂಡಿಯಾ ಬೆಸ್ಟ್ ಪೋಸರ್ ಜತೆ ಓವರ್‌ಆಲ್ ರನ್ನರ್ ಆಪ್ ಪ್ರಶಸ್ತಿ ಕೂಡ ಗೆದ್ದರು. 2017ರಲ್ಲಿ “ಮಿಸ್ಟರ್ ಕರ್ನಾಟಕ’ ಪಟ್ಟವೂ ಒಲಿಯಿತು. ಬ್ಯಾಂಕಾಕ್‌ನಲ್ಲಿ “ಮಿಸ್ಟರ್ ಏಶ್ಯ ಜೂನಿಯರ್’ ಪ್ರಶಸ್ತಿ ಜತೆಗೆ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನೂ ಗಳಿಸಿದರು. ಸಿಂಗಾಪುರದಲ್ಲಿ 3 ದಿನಗಳ ಹಿಂದೆ “ಮಿಸ್ಟರ್ ಯೂನಿವರ್ಸ್’ ವಿಶ್ವ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದು ದೇಶದ ಗಮನ ಸೆಳೆದಿರುವುದು ಗಮನಾರ್ಹ.
ಡೆಂಗ್ಯೂನಿಂದ ತಪ್ಪಿದ ಅವಕಾಶ
ನಿಶಾನ್ ಕುಮಾರ್‌ಗೆ ಜೂನ್ ತಿಂಗಳಿನಲ್ಲಿ ನಡೆದ ಮಿಸ್ಟರ್ ವರ್ಲ್ಡ್ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಭಾಗ ವಹಿಸುವುದಕ್ಕೆ ಅವಕಾಶ ಸಿಕ್ಕಿತ್ತು. ಆದರೆ ಅದೇ ಸಮಯದಲ್ಲಿ ಡೆಂಗ್ಯೂ ಜ್ವರ ಬಂದಿದ್ದ ಕಾರಣ ಮತ್ತು ವೀಸಾ ಸಮಸ್ಯೆಯಿಂದಾಗಿ ಅವಕಾಶ ಕೈತಪ್ಪಿತ್ತು. ಮುಂದಿನ ಮಿಸ್ಟರ್ ಇಂಡಿಯಾ, ಮಿಸ್ಟರ್ ವರ್ಲ್ಡ್ ಸೀನಿಯರ್‌ಗೆ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ.
ದುಡಿದ ಹಣ ಕಲಿಕೆಗೆ
ನಿಶಾನ್ ಬೆಂಗಳೂರಿನ ಸಂಸ್ಥೆ ಯೊಂದನ್ನು ಸೇರಿಕೊಂಡರು. ಪಾರ್ಟ್ ಟೈಂ ಕೆಲಸಕ್ಕೆ ಸೇರಿ ಅದರಿಂದ ಬಂದ ಹಣವನ್ನು ಉಳಿಸಿ ಬಾಡಿ ಬಿಲ್ಡಿಂಗ್ ಕಲಿಕೆಗೆ ವಿನಿಯೋಗಿಸುತ್ತಿದ್ದರು. ಅಲ್ಲಿಯೇ ಜಿಮ್ ಒಂದರಲ್ಲಿ ಪರ್ಸನಲ್ ಟ್ರೈನರ್ ಆಗಿ ಕೆಲಸ ನಿರ್ವಹಿಸಿದರು. ಅದೇ ಸಮಯಕ್ಕೆ ಮಂಗಳೂರಿನಲ್ಲಿ “ಮಿಸ್ಟರ್ ದಕ್ಷಿಣ ಕನ್ನಡ’ ದೇಹದಾಡ್ಯì ಸ್ಪರ್ಧೆ ನಡೆಯಿತು. ಕೋಚ್ ಕುಮಾರ್ ಪುತ್ರನ್ ಬಳಿ ಹೆಚ್ಚಿನ ತರಬೇತಿ ಪಡೆದುಕೊಂಡರು. ಆ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡರು.
ನವೀನ್ ಭಟ್ ಇಳಂತಿಲ