Advertisement

ವಿಶ್ವವಿಜೇತರು ತವರಿಗೆ ಬಂದರು; ತೆರೆದ ಬಸ್ಸಿನಲ್ಲಿ ಮೆಸ್ಸಿ ಟೀಮ್‌ ರೋಡ್‌ ಶೋ

11:33 PM Dec 20, 2022 | Team Udayavani |

ಬ್ಯೂನಸ್‌ ಐರಿಸ್‌: ಇತ್ತ ನಡುರಾತ್ರಿಯೂ ಅಲ್ಲದ, ಅತ್ತ ಬೆಳಗಿನ ಜಾವವೂ ಅಲ್ಲದ ಹೊತ್ತಿನಲ್ಲಿ ತವರಿಗೆ ಆಗಮಿಸಿದ ವಿಶ್ವವಿಜೇತ ಆರ್ಜೆಂಟೀನಾ ಫ‌ುಟ್‌ಬಾಲ್‌ ತಂಡಕ್ಕೆ ರಾಜಧಾನಿ ಬ್ಯೂನಸ್‌ ಐರಿಸ್‌ನಲ್ಲಿ ಅಭೂತಪೂರ್ವ ಸ್ವಾಗತ ಸಿಕ್ಕಿತು.

Advertisement

ಮೆಸ್ಸಿ ಪಡೆ ತೆರೆದ ಬಸ್‌ ಏರಿ ನಡೆಸಿದ ರೋಡ್‌ಶೋಗೆ ಲಕ್ಷಾಂತರ ಮಂದಿ ಸಾಕ್ಷಿಯಾದರು. ಫ‌ುಟ್‌ಬಾಲ್‌ ಲೋಕದ ಸಾಮ್ರಾಟರನ್ನು ಕಾಣಲು ಅಭಿಮಾನಿಗಳು ಕಿಲೋಮೀಟರ್‌ ಉದ್ದಕ್ಕೂ ಜಮಾಯಿಸಿದ್ದರು. ಮೆರವಣಿಗೆಯುದ್ದಕ್ಕೂ ಆರ್ಜೆಂಟೀನಾ ತಂಡದ ಸದಸ್ಯರು ಅಭಿಮಾನಿಗಳತ್ತ ಕೈಬೀಸುತ್ತ, ಹಾಡು ಹೇಳುತ್ತ ಸಂಭ್ರಮಿಸಿದರು. ಆರ್ಜೆಂಟೀನಾ ರಾಜಧಾನಿಯಲ್ಲಿ 36 ವರ್ಷಗಳ ಬಳಿಕ ಇಂಥದೊಂದು ಖುಷಿಯ ವಾತಾವರಣ ಮೇಳೈಸಿದ್ದರಿಂದ ಸಹಜ ವಾಗಿಯೇ ಜನರಲ್ಲಿ ಎಲ್ಲಿಲ್ಲದ ಉತ್ಸಾಹ, ಜೋಶ್‌ ಮನೆಮಾಡಿಕೊಂಡಿತ್ತು. ಎಲ್ಲೆಲ್ಲೂ ಜೈಕಾರ ಮೊಳಗುತ್ತಿತ್ತು.

ಬ್ಯೂನಸ್‌ ಐರಿಸ್‌ನ ಎಲ್ಲ ಕಟ್ಟಡಗಳೂ ಆರ್ಜೆಂಟೀನಾದ ಬೃಹತ್‌ ಜೆರ್ಸಿಗಳಿಂದ ಸಿಂಗಾರಗೊಂಡಿದ್ದವು. ಜತೆಗೆ ವರ್ಣ ಮಯ ದೀಪಾಲಂಕಾರ. ಎಲ್ಲರೂ ಆರ್ಜೆಂಟೀನಾದ ಫ‌ುಟ್‌ ಬಾಲ್‌ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದರು. ಕೈಯಲ್ಲಿ ರಾಷ್ಟ್ರಧ್ವಜ ಹಾರಾಡುತ್ತಿತ್ತು.

1986ರಲ್ಲಿ ಆರ್ಜೆಂಟೀನಾ ಕೊನೆಯ ಸಲ ಚಾಂಪಿಯನ್‌ ಆದಾಗ ಅದು ಮರಡೋನಾ ಯುಗವಾಗಿತ್ತು. ಅಂದಿನ ಸಂಭ್ರಮವನ್ನು ಕಣ್ತುಂಬಿಸಿಕೊಂಡ ಒಂದಿಷ್ಟು ಮಂದಿ ಮೆಸ್ಸಿ ಪಡೆಯ ಯಶೋಗಾಥೆಗೂ ಸಾಕ್ಷಿಯಾದದ್ದು ವಿಶೇಷವಾಗಿತ್ತು. ಅಂದ ಹಾಗೆ, 1986ರಲ್ಲಿ ಆರ್ಜೆಂಟೀನಾ ವಿಶ್ವಕಪ್‌ ಎತ್ತಿ ಸಂಭ್ರಮಿಸುವಾಗ ಆಗಿನ್ನೂ ಮೆಸ್ಸಿ ಜನಿಸಿರಲಿಲ್ಲ!

ಸಂಭ್ರಮಾಚರಣೆಗೆ ರಜೆ ಘೋಷಣೆ
ಬ್ಯೂನಸ್‌ ಐರಿಸ್‌: ವಿಶ್ವಕಪ್‌ ಫ‌ುಟ್‌ ಬಾಲ್‌ ಗೆಲುವಿನ ಸಂಭ್ರಮಾಚರಣೆ ಗಾಗಿ ಆರ್ಜೆಂಟೀನಾದ ಅಧ್ಯಕ್ಷ ಆಲ್ಬರ್ಟೊ ಫೆರ್ನಾಂಡಿಸ್‌ ಮಂಗಳವಾರ ರಾಷ್ಟ್ರೀಯ ರಜೆ ಘೋಷಿಸಿದರು.

Advertisement

36 ವರ್ಷಗಳ ಬಳಿಕ ಆರ್ಜೆಂಟೀನಾ ವಿಶ್ವಕಪ್‌ ಗೆದ್ದ ಕಾರಣ ದೇಶದೆಲ್ಲೆಡೆ ಸಂಭ್ರಮ ಮುಗಿಲು ಮುಟ್ಟಿತ್ತು. ಅಲ್ಲಿ ಪ್ರತಿಯೊಂದು ಬೀದಿಯಲ್ಲೂ ಹಬ್ಬದ ವಾತಾವರಣವಿತ್ತು. ಈ ಸಂಭ್ರಮವನ್ನು ಇನ್ನಷ್ಟು ಹೆಚ್ಚಿ ಸುವ ಸಲುವಾಗಿ ರಾಷ್ಟ್ರೀಯ ರಜೆ ಸಾರಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next