Advertisement

ಕ್ಯಾನ್ಸರ್‌ ವಿರುದ್ಧ ಮೂಡಲಿ ಜಾಗೃತಿ

05:42 AM Feb 04, 2019 | |

ಮಣಿಪಾಲ: ಭಯಾನಕ ಕ್ಯಾನ್ಸರ್‌ ರೋಗ ಇಂದು ಮಾನವ ನೆಮ್ಮದಿಯನ್ನು ಕಸಿದುಕೊಳ್ಳುತ್ತಿದೆ. ವೈದ್ಯಲೋಕ ಸಾಹಸಪಟ್ಟು ಚಿಕಿತ್ಸೆ ನೀಡಿದರೂ ಕ್ಯಾನ್ಸರ್‌ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

Advertisement

ಕ್ಯಾನ್ಸರ್‌ ವಯಸ್ಸು, ಲಿಂಗ, ಜಾತಿ-ಮತ ಭೇದವಿಲ್ಲದೆ ಎಲ್ಲ ಸ್ತರದ ಜನರನ್ನೂ ಕಾಡುವ ಹೆಮ್ಮಾರಿ. ದೇಹದಲ್ಲಿ ಅಸಹಜವಾಗಿ ಉತ್ಪತ್ತಿಯಾಗುವ ಜೀವಕೋಶಗಳಿಂದಾಗಿ ಕ್ಯಾನ್ಸರ್‌ ಉಂಟಾಗುತ್ತದೆ. ತಂಬಾಕುಸೇವನೆ, ಮದ್ಯಪಾನ, ವಿವಿಧ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದು, ವಿಷಯುಕ್ತ ಗಾಳಿಯ ಸೇವನೆ ಹಾಗೂ ಕೆಲವು ವೈರಸ್‌ಗಳಿಂದ ಕ್ಯಾನ್ಸರ್‌ ದಿಕ್ಕರಿಸುತ್ತದೆ. ಆದರೆ ಇದಕ್ಕೆ ಇಂಥದ್ದೇ ಕಾರಣ ಎಂದು ಖಚಿತವಾಗಿ ಹೇಳುವ ಹಾಗೂ ಇಲ್ಲ. ಕ್ಯಾನ್ಸರ್‌ ಸಂಪೂರ್ಣವಾಗಿ ಗುಣವಾಗಬಹುದು ಇಲ್ಲವೇ ಜೀವನವನ್ನೇ ಬಲಿ ತೆಗೆದುಕೊಳ್ಳಬಹುದು.

ಕ್ಯಾನ್ಸರ್‌ ರೋಗದ ವಿರುದ್ಧ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಫೆಬ್ರವರಿ ನಾಲ್ಕನ್ನು ವಿಶ್ವ ಕ್ಯಾನ್ಸರ್‌ ದಿನ ಎಂಬುದಾಗಿ ಘೋಷಿಸಿದೆ.

ಆಚರಣೆ
ವಿಶ್ವ ಆರೋಗ್ಯದ ಸಹಯೋಗದಲ್ಲಿ ಪ್ರತಿವರ್ಷ ಫೆ. 4ರಂದು ಕ್ಯಾನ್ಸರ್‌ ಜಾಗೃತಿ ಜಾಥಾ ಹಾಗೂ ಸಮ್ಮೇಳನ, ವಿಚಾರ ಸಂಕಿರಣಗಳನ್ನು ಆಯೋಜಿಸಿ ಕ್ಯಾನ್ಸರ್‌ ರೋಗ ಪೀಡಿತರಿಗೆ ಆತ್ಮವಿಶ್ವಾಸದ ಔಷಧವನ್ನು ಹಂಚಲಾಗುತ್ತದೆ. ಸುಮಾರು 150 ವಿಧಗಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ ಬಗೆಗಿನ ಅರಿವಿಗೆ ಈ ದಿನವನ್ನು ಮೀಸಲಾಗಿಡಲಾಗುತ್ತದೆ.
1933ರಿಂದ ಜಿನೇವಾ, ಸ್ವಿಟ್ಜರ್‌ಲ್ಯಾಂಡ್‌ ಗಳಲ್ಲಿ ಯೂನಿಯನ್‌ ಇಂಟರ್‌ನ್ಯಾಶನಲ್‌
ಕ್ಯಾನ್ಸರ್‌ ಕಂಟ್ರೋಲ್‌ ಎಂಬ ಸಂಸ್ಥೆ ಕ್ಯಾನ್ಸರ್‌ ಬಗ್ಗೆ ಸಾಂಕೇತಿಕವಾಗಿ ಜಾಗೃತಿ ಮೂಡಿಸುತ್ತಿತ್ತು. 2000ದಿಂದೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯ ಮೂಲಕ ಅಧಿಕೃತವಾಗಿ ಜಾಗತಿಕ ಮಟ್ಟದಲ್ಲಿ ಕ್ಯಾನ್ಸರ್‌ ಜಾಗೃತಿ ದಿನ ಆರಂಭವಾಯಿತು.

ವಿಶೇಷ ಥೀಮ್‌
ವಿಶ್ವ ಕ್ಯಾನ್ಸರ್‌ ದಿನದಂದು ವಿಶೇಷ ಘೋಷವಾಕ್ಯದೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ. 3 ವರ್ಷಗಳಿಂದ I Am and I will ಎಂಬ ಘೋಷವಾಕ್ಯದಲ್ಲಿ ಆಚರಣೆ ನಡೆಸಲಾಗುತ್ತಿದೆ.

Advertisement

ಮುನ್ನೆಚ್ಚರಿಕೆ, ಆತ್ಮವಿಶ್ವಾಸದ ಮದ್ದು
ಕೆಲವು ಬಗೆಯ ಕ್ಯಾನ್ಸರ್‌ಗಳನ್ನು ಗುಣಪಡಿಸಬಹುದು. ಕ್ಷಿಪ್ರ ರೋಗಪತ್ತೆಯ
ಮೂಲಕ ಆರಂಭಿಕ ಹಂತದಲ್ಲಿಯೇ ಅದಕ್ಕೆ ಚಿಕಿತ್ಸೆ ಒದಗಿಸುವುದು ಮುಖ್ಯ. ಧೂಮಪಾನ, ಮದ್ಯಪಾನ ಹಾಗೂ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದರಿಂದ ದೂರ ಇದ್ದು, ಸಂತುಲಿತ ಆಹಾರ, ದೈಹಿಕ ಚಟುವಟಿಕೆಗಳ ಜೀವನ ಶೈಲಿ ರೂಢಿಸಿಕೊಂಡರೆ ಕ್ಯಾನ್ಸರ್‌ ದೂರವಿರುತ್ತದೆ.

2018 ರಲ್ಲಿ ಕ್ಯಾನ್ಸರ್‌ ನಿಂದ ಮೃತಪಟ್ಟವರ ಸಂಖ್ಯೆ: 7,84,821

ಪುರುಷರು 4,13,519, ಮಹಿಳೆಯರು 3,71,302

. ಕರ್ನಾಟಕದ ದಕ್ಷಿಣ ಭಾಗ ಮತ್ತು ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಕರುಳಿನ ಕ್ಯಾನ್ಸರ್‌ ಕಂಡುಬರುತ್ತಿದೆ. ಇದಕ್ಕೆ ಕಾರಣ ಆಹಾರದಲ್ಲಿ ಮಸಾಲೆ ಪದಾರ್ಥಗಳು ಮತ್ತು ಉಪ್ಪಿನ ಅಂಶ ಜಾಸ್ತಿ ಇರುವುದು.
. ಭಾರತದಲ್ಲಿ ಪ್ರತಿ 8 ನಿಮಿಷಗಳಿಗೆ ಒಬ್ಬ ಮಹಿಳೆ ಗರ್ಭ ಕಂಠದ ಕ್ಯಾನ್ಸರ್‌ ನಿಂದ ಮರಣ ಹೊಂದುತ್ತಾರೆ.
. ಪ್ರತಿ ದಿನ ತಂಬಾಕು ಸಂಬಂಧಿಸಿದ ಕ್ಯಾನ್ಸರ್‌ನಿಂದ ಸುಮಾರು 2,500 ಜನ ಸಾಯುತ್ತಾರೆ. ಪುರುಷರಲ್ಲಿ 45%, ಮಹಿಳೆಯರಲ್ಲಿ 17%ನಷ್ಟು ಕ್ಯಾನ್ಸರ್‌ ತಂಬಾಕು ಸೇವನೆಯಿಂದ ಬರುತ್ತದೆ.

2018ರಲ್ಲಿ ಸ್ತನ ಕ್ಯಾನ್ಸರ್‌ನಿಂದ 87,090 ಮಹಿಳೆ ಯರು ಮರಣ ಹೊಂದಿದ್ದು, ಸುಮಾರು 1,62,468 ಹೊಸ ಪ್ರಕರಣಗಳು ದಾಖಲಾಗಿವೆ.


ಕ್ಯಾನ್ಸರ್ ಗೆ ಕಿಕ್‌ ನೀಡಿದ ಬಾಕ್ಸರ್‌

ಕರ್ನಾಟಕದ ಕಿಕ್‌ಬಾಕ್ಸರ್‌ನ ಆಟಗಾರನೊಬ್ಬ ಪುಣೆಯಲ್ಲಿ ನಡೆಯುತ್ತಿದ್ದ ಏಷ್ಯನ್‌ ಕಿಕ್‌ ಬಾಕ್ಸಿಂಗ್‌ ಗಾಗಿ ರಾಷ್ಟ್ರೀಯ ಶಿಬಿರದಲ್ಲಿ ತೊಡಗಿಕೊಂಡಿದ್ದಾಗ ಜ್ವರ ಕಾಣಿಸಿಕೊಂಡಿತ್ತು. ಅನಂತರ ಬಾಯಿಯಲ್ಲಿ ರಕ್ತ ಬಂದಿದ್ದನ್ನು ಕಂಡು ವೈದ್ಯರಲ್ಲಿ ಪರೀಕ್ಷೆ ಮಾಡಿಸಿದಾಗ ಅದು ಸಾಮಾನ್ಯ ಜ್ವರವಲ್ಲ, ಮಾರಕ ರಕ್ತದ ಕ್ಯಾನ್ಸರ್‌ ಎಂದು ತಿಳಿಯಿತು. ಇದನ್ನೆಲ್ಲ ಧೈರ್ಯದಿಂದ ಎದುರಿಸಿ 2018-19ನೇ ಸಾಲಿನ ನ್ಯಾಷನಲ್‌ ಫೆಡರೇಷನ್‌ ಕಪ್‌ ಪಡೆದುಕೊಂಡವರು ಕಿಕ್‌ ಬಾಕ್ಸರ್‌ ಗಿರೀಶ್‌ ಗೌಡ. ಗಿರೀಶ್‌ಗೆಮಾರಕ ಕ್ಯಾನ್ಸರ್‌ ತಗಲಿರುವುದು ಪತ್ತೆಯಾದಾಗ ವೈದ್ಯರು ಇನ್ನುಮುಂದೆ ಬಾಕ್ಸಿಂಗ್‌ ರಿಂಗ್‌ನಲ್ಲಿ ಕಾಣಿಸಿಕೊಳ್ಳುವಂತಿಲ್ಲ ಎಂದು ಸಲಹೆ ನೀಡಿದ್ದರು. ಅದನ್ನು ಧಿಕ್ಕರಿಸಿದ ಗಿರೀಶ್‌ 91 ದಿನಗಳ ಕಾಲ ಅಭ್ಯಸಿಸಿ ದಿಲ್ಲಿಯ 9ನೇ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಗೆದ್ದಕೊಂಡರು. ಕ್ಯಾನ್ಸರ್‌-ಕಿಕ್‌ ಬಾಕ್ಸಿಂಗ್‌ ಎರಡನ್ನೂ ತನ್ನ ಆತ್ಮಬಲದಿಂದಲೇ ಗೆದ್ದುಕೊಂಡರು.

ಸಕಾರಾತ್ಮಕ ಯೋಚನೆಯಿಂದ ಗೆದ್ದ ಲೀಸಾ! 
ನಿಮ್ಮ ಜೀವನದ ಸಿಇಒ ನೀವೇ ಆಗಬೇಕು ಎಂದು ಕೊಂಡು ಕ್ಯಾನ್ಸರ್‌ ಬಂದಾಗಲೂ ಅದರ ವಿರುದ್ಧ ಧೈರ್ಯ ವಾಗಿ ಹೋರಾಡಿದರು ನಟಿ ಲಿಸಾ ರೇ. ಭಾರತೀಯ ಚಿತ್ರರಂಗದಲ್ಲೂ ನಟಿಸಿರುವ ಈಕೆಗೆ 2009ರಲ್ಲಿ ಕ್ಯಾನ್ಸರ್‌ ಇರುವುದು ಖಚಿತವಾಗಿತ್ತು. ತಾನೀಗ ಕ್ಯಾನ್ಸರ್‌ ಮುಕ್ತೆ ಎಂದು ಲಿಸಾ ರೇ 2010ರ ಎಪ್ರಿಲ್‌ನಲ್ಲಿ ಘೋಷಿಸಿದರು. ಎದುರಾಗುವ ಕಷ್ಟಗಳನ್ನು ಸಹನೆ ಮತ್ತು ಧೈರ್ಯದಿಂದ ಎದುರಿಸಬೇಕು. ಎಲ್ಲವನ್ನೂ ಡಾಕ್ಟರ್‌ ಗೆ ವಹಿಸಿ ಸುಮ್ಮನಿರಬಾರದು. ಅವರು ಸಹಾಯ ಮಾಡಬಲ್ಲರಷ್ಟೇ. ಆದರೆ ಕಾನ್ಸರ್‌ನಂಥ ರೋಗವನ್ನು ಎದುರಿಸುವುದು ನಮ್ಮಲ್ಲಿರುವ ಸಕಾರಾತ್ಮಕೂàಚನೆಯಿಂದ ಮಾತ್ರ ಸಾಧ್ಯ ಎಂದು ಲಿಸಾ ರೇ ತಮ್ಮ ಕಥೆಯನ್ನು ಹೇಳುತ್ತಾರೆ. 

ಆಶಾವಾದ, ದೃಢಸಂಕಲ್ಪ ಸೋನಾಲಿ ಬೇಂದ್ರೆ ಸೂತ್ರ 
ಬಾಲಿವುಡ್‌ ನಟಿ ಸೋನಾಲಿ ಬೇಂದ್ರೆ ಅವರಲ್ಲಿ ಮೆಟಾಸ್ಟಾಟಿಕ್‌ ಹಂತದಲ್ಲಿ ಕ್ಯಾನ್ಸರ್‌ ಪತ್ತೆಯಾಗಿತ್ತು. ಇಲ್ಲಿ ವ್ಯಕ್ತಿಯ ದೇಹದಲ್ಲಿ ಕ್ಯಾನ್ಸರ್‌ ಕೋಶಗಳು ತಮ್ಮ ಮೂಲ ಸ್ಥಾನದಿಂದ ಒಡೆದು ಇತರ ಭಾಗಗಳಿಗೆ ಹರಡುತ್ತವೆ. ಕ್ಯಾನ್ಸರ್‌ ಈ ಹಂತದಲ್ಲಿ ಬಹಳ ಪ್ರಬಲವಾಗಿರುತ್ತದೆ. 2018ರಲ್ಲಿ 43ನೇ ವಯಸ್ಸಿಗೆ ಆಕೆಗೆ ಕ್ಯಾನ್ಸರ್‌ ಅಡರಿಕೊಂಡಿತು. ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆದು ಈಗ ಅವರು ಮುಂಬಯಿಗೆ ಮರಳಿದ್ದಾರೆ. ಕ್ಯಾನ್ಸರ್‌ ಪತ್ತೆಯಾಗಿದ್ದಾಗ ಅವರು ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಈ ಕುರಿತು ಪೋಸ್ಟ್‌ ಮಾಡಿದ್ದರು. ‘ಕೆಲವೊಮ್ಮೆ ನಾವು ನಿರೀಕ್ಷಿಸದೆಯೇ ಇರುವ ವೇಳೆಗೆ ಜೀವನ ನಮ್ಮ ಕಡೆಗೆ ಕರ್ವ್‌ ಬಾಲ್‌ (ಕ್ರಿಕೆಟ್‌ನಲ್ಲಿರುವಂತೆ) ಎಸೆಯುತ್ತದೆ…’ ಎಂಬುದಾಗಿ ಹೇಳಿಕೊಂಡಿದ್ದರು. ಇದನ್ನು ಎದುರಿಸಲು ತತ್‌ ಕ್ಷಣ ಕಾರ್ಯಪ್ರವೃತ್ತರಾಗುವುದಕ್ಕಿಂತ ಉತ್ತಮ ಹಾದಿಯಿಲ್ಲ. ತಾನು ಆಶಾವಾದಿಯಾಗಿದ್ದು, ಪ್ರತಿ ಹೆಜ್ಜೆಯಲ್ಲೂ ಹೋರಾಡಲು ದೃಢಸಂಕಲ್ಪ ಮಾಡಿದ್ದೇನೆ. ನನ್ನ ಹಿಂದೆ ಕುಟುಂಬ ಮತ್ತು ಸ್ನೇಹಿತರ ಬಲ ಇದೆ ಎಂಬುದನ್ನು ತಿಳಿದು ಈ ಯುದ್ಧವನ್ನು ಎದುರಿಸುತ್ತಿದ್ದೇನೆ ಎಂದು ಆಶಾವಾದ ವ್ಯಕ್ತಪಡಿಸಿದ್ದರು.

ಕ್ಯಾನ್ಸರ್‌ ಜಯಿಸಿದ ಕ್ರಿಕೆಟ್‌ ಯುವರಾಜ
ಯುವರಾಜ್‌ ಸಿಂಗ್‌ ಸಾಧನೆಯ ಹಾದಿಯಲ್ಲಿ ಮುಳ್ಳಾಗಿ ಕಾಡಿದ್ದು ಕ್ಯಾನ್ಸರ್‌. 2011ರ ವಿಶ್ವಕಪ್‌ ಕ್ರಿಕೆಟ್‌ಗೆ ತಯಾರಿ ವೇಳೆ ಇವರಿಗೆ ಶ್ವಾಸಕೋಶದ ಕ್ಯಾನ್ಸರ್‌ ಇರುವುದು ತಿಳಿದು ಬಂತು. ಮಾನಸಿಕವಾಗಿ ದೃಢರಾಗಿದ್ದ ಯುವಿ ಕ್ಯಾನ್ಸರ್‌ ಎಸೆಯುತ್ತಿದ್ದ ಚೆಂಡುಗಳನ್ನು ಯಶಸ್ವಿಯಾಗಿ ಎದುರಿಸಿ ಗೆದ್ದು ಬಂದಿದ್ದಾರೆ. ಮತ್ತೆ ಕ್ರಿಕೆಟ್‌ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ. “ಅನುಭವಗಳು ನಮ್ಮನ್ನು ಶಕ್ತಿಶಾಲಿಯನ್ನಾಗಿ ಮಾಡುತ್ತವೆ. ಕ್ಯಾನ್ಸರ್‌ ಎಂದರೆ ಸಾವು ಎಂದರ್ಥವಲ್ಲ. ಹೋರಾಡಿ…’ ಇದು ಯುವಿ ಹೇಳುವ ಮಾತು.

ಇರ್ಫಾನ್‌ ಖಾನ್‌ಗೂ ಇತ್ತು ಕ್ಯಾನ್ಸರ್‌!
ಪ್ರಖ್ಯಾತ ಬಾಲಿವುಡ್‌ ನಟ ಅಪರೂಪದ ಕಾಯಿಲೆಯಾದ ನ್ಯೂರೋಎಂಡೋಕ್ರೈನ್‌ ಟ್ಯೂಮರ್‌ (ಎನ್‌ಇಟಿ) ಗೆ ಒಳಗಾದರು. 2018ರ ಮಾರ್ಚ್‌ನಲ್ಲಿ ಈ ಕುರಿತು ಹೇಳಿಕೊಂಡಿದ್ದರು. ಖಾನ್‌ ಇದರ ಚಿಕಿತ್ಸೆಗಾಗಿ ಲಂಡನ್‌ ಗೆ ತೆರಳಿದರು. 51ನೇ ವಯಸ್ಸಿಗೆ ಈ ಕಾಯಿಲೆಗೆ ಒಳಗಾದ ಖಾನ್‌ ಟ್ವೀಟ್‌ನಲ್ಲಿ ಈ ಕುರಿತು ಹೇಳಿಕೊಂಡಿದ್ದಾರೆ.
‘ಅನಿರೀಕ್ಷಿತಗಳು ನಮ್ಮನ್ನು ಬೆಳೆಸುತ್ತವೆ. ನಾನೀಗ ಎಂಡೋಕ್ರೈನ್‌ ಟ್ಯೂಮರ್‌ಗೆ ಒಳಗಾಗಿದ್ದು, ಸದ್ಯದ ಸ್ಥಿತಿ ಕಠಿನವಾಗಿದೆ. ಆದರೆ ನನ್ನ ಸುತ್ತಮುತ್ತಲಿನವರ ಪ್ರೀತಿ ಮತ್ತು ಬಲ ಹಾಗೂ ನನ್ನೊಳಗೆ ನಾನು ಕಂಡುಕೊಂಡಿರುವ ಈ ಅಂಶಗಳು ನನ್ನನ್ನು ಒಂದು ಭರವಸೆಯ ತಾಣಕ್ಕೆ ತಂದು ನಿಲ್ಲಿಸಿವೆ..’ ಎಂದು ದೃಢತೆಯನ್ನು ವ್ಯಕ್ತಪಡಿಸಿದ್ದಾರೆ.

ಮಾಹಿತಿ: ಶಿವಮಲ್ಲಯ್ಯ, ಸಂದೇಶ್‌, ಪ್ರೀತಿ, ಸುಶ್ಮಿತಾ, ರಂಜಿನಿ. ‡ವಿನ್ಯಾಸ: ಜಿ. ಪ್ರಸಾದ್‌, ಕಾಜಿಲ

Advertisement

Udayavani is now on Telegram. Click here to join our channel and stay updated with the latest news.

Next