Advertisement

ವಿಶ್ವ ಕ್ಯಾನ್ಸರ್‌ ದಿನಾಚರಣೆ: ಜನಜಾಗೃತಿ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ್‌ ಬೊಮ್ಮಾಯಿ ಚಾಲನೆ

07:13 PM Feb 04, 2022 | Team Udayavani |

ಬೆಂಗಳೂರು: ವೈದ್ಯಕೀಯ ಜಗತ್ತಿಗೆ ಸವಾಲಾಗಿದ್ದ ಕ್ಯಾನ್ಸರ್‌ ಕ್ರಮೇಣ ಹೊಸ ವೈದ್ಯಕೀಯ ತಂತ್ರಜ್ಞಾನ ಹಾಗೂ ಔಷಧಗಳ ಮೂಲಕ ಕ್ಯಾನ್ಸರ್‌ ಪೀಡಿತರಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡುವುದರಿಂದ ಜೀವ ಉಳಿಸಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ತಿಳಿಸಿದರು.

Advertisement

ವಿಶ್ವ ಕ್ಯಾನ್ಸರ್‌ ದಿನದ ಅಂಗವಾಗಿ ಆರೋಗ್ಯ ಇಲಾಖೆ ವತಿಯಿಂದ ಬೆಂಗಳೂರಿನ ಉತ್ತರಹಳ್ಳಿಯ ಬಿಬಿಎಂಪಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನಸ್ಸು ಮಾಡಿದರೆ ಯಾವುದೇ ರೋಗದಿಂದ ಬೇಕಾದರೂ, ಮುಕ್ತಿ ಪಡೆದು ಹೊಸ ಜೀವನ ಕಟ್ಟಿಕೊಳ್ಳಲು ಸಾಧ್ಯವಿದೆ. ಕ್ಯಾನ್ಸರ್‌ ರೋಗವನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚುವುದರಿಂದ ಕ್ಯಾನ್ಸರ್‌ನಿಂದ ಗುಣಮುಖರಾಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.

ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಮಾತನಾಡಿ, ಜಿಲ್ಲಾಸ್ಪತ್ರೆಗಳಲ್ಲಿ ಕ್ಯಾನ್ಸರ್‌ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ. ಅದನ್ನು ತಾಲೂಕು ಆಸ್ಪತ್ರೆಗಳಿಗೂ ವಿಸ್ತರಣೆ ಮಾಡಲಾಗಿದೆ. ಸಮುದಾಯ ಆರೋಗ್ಯ ಕೇಂದ್ರಕ್ಕೂ ಇದನ್ನು ಶೀಘ್ರದಲ್ಲೇ ವಿಸ್ತರಣೆ ಮಾಡಲಾಗುವುದು. ಮೈಸೂರು ಮತ್ತು ತುಮಕೂರಿನಲ್ಲಿ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಹುಬ್ಬಳ್ಳಿಯಲ್ಲೂ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಾಣ ಮಾಡಲು ಸರ್ಕಾರ ತಯಾರಿ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಕಲಬುರಗಿ: 5 ವಿಧಾನ ಪರಿಷತ್ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರಿಸಿದ್ದ ಬಿಜೆಪಿಗೆ ಹಿನ್ನಡೆ

ಭಾರತದಲ್ಲಿ 12 ರಿಂದ 13 ಲಕ್ಷ ಜನರು, ರಾಜ್ಯದಲ್ಲಿ 20 ರಿಂದ 25 ಸಾವಿರ ಜನರಲ್ಲಿ ಪ್ರತಿ ವರ್ಷ ಕ್ಯಾನ್ಸರ್‌ ಹೊಸದಾಗಿ ಪತ್ತೆಯಾಗುತ್ತದೆ. 30 ವರ್ಷ ಮೇಲ್ಪಟ್ಟ ಮಹಿಳೆಯರು ಜಾಗೃತರಾಗಿರಬೇಕು. ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್‌ನಿಂದ ಶೇ.30 ರಿಂದ ಶೇ.40ರಷ್ಟು ಮಹಿಳೆಯರು ಸಾವನ್ನಪ್ಪುತ್ತಾರೆ. ಆದರೆ ಇದು ಸಾಮಾನ್ಯ ಕ್ಯಾನ್ಸರ್‌ 5 ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿಕೊಂಡರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಪುರುಷರು ಶ್ವಾಸಕೋಶ ಹಾಗೂ ಬಾಯಿಯ ಕ್ಯಾನ್ಸರ್‌ ಗೆ ಬಲಿಯಾಗುತ್ತಿದ್ದಾರೆ. ಪೌಷ್ಠಿಕ ಆಹಾರ, ದೈಹಿಕ ಚಟುವಟಿಕೆ ಜೊತೆ ದುಶ್ಚಟಗಳಿಂದ ದೂರ ಇರುವುದು ಕ್ಯಾನ್ಸರ್‌ ತಡೆಯಲು ಸಹಕಾರಿ ಎಂದು ಹೇಳಿದರು.

Advertisement

ವಿಶ್ವ ಸಂಸ್ಥೆಯ ಪ್ರಕಾರ ಶಿಕ್ಷಣದ ಕೊರತೆ, ಬಡತನ ಇರುವ ರಾಷ್ಟ್ರಗಳಲ್ಲಿ ಕ್ಯಾನ್ಸರ್‌ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಬಡತನ ರೇಖೆಗಿಂತ ಕೆಳಗಿರುವವರಿಗೆ ಕ್ಯಾನ್ಸರ್‌ ಶಿಬಿರ ಹಮ್ಮಿಕೊಂಡಿದೆ. ಕಿದ್ವಾಯಿ ಸಂಸ್ಥೆ , ಅನೇಕ ಸಂಘ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಇದಕ್ಕೆ ಕೈ ಜೋಡಿಸಿವೆ. ಎಷ್ಟು ಬೇಗ ಕ್ಯಾನ್ಸರ್‌ ಪತ್ತೆಯಾಗುತ್ತದೋ ಅಷ್ಟು ಬೇಗ ಗುಣಪಡಿಸಬಹುದು. ಕ್ಯಾನ್ಸರ್‌ ರೋಗಿಗಳನ್ನು ಪ್ರೀತಿ ಮತ್ತು ಎಚ್ಚರಿಕೆಯಿಂದ ಆರೈಕೆ ಮಾಡಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next