Advertisement
ಯಾವುದೇ ನವಜಾತ ಶಿಶುವಿನ ಮೂರು ಮುಖ್ಯ ಆವಶ್ಯಕತೆಗಳೆಂದರೆ ತಾಯಿಯ ಮಡಿಲಿನ ಬಿಸುಪು (ಶಾಖ), ತಾಯಿಯ ತೋಳಿನ ಮಮತೆಯ ಆಸರೆ/ರಕ್ಷಣೆ, ಸ್ತನದಿಂದ ಬರುವ ಅಮೃತ ಸದೃಶ ವಾದ ಸ್ತನ್ಯ/ಪೋಷಣೆ ಇವುಗಳಲ್ಲಿ ಮೊದಲಿನ ಎರಡನ್ನು ಯಾರೂ ನೀಡಬಹುದಾದರೂ ತನ್ನ ಸ್ತನ್ಯದಿಂದ ಪೋಷಣೆ ಮಾಡ ಬಲ್ಲವಳು ತಾಯಿ ಮಾತ್ರ.
Related Articles
Advertisement
ಆಯುರ್ವೇದದಲ್ಲಿ ಧಾತ್ರೀ ಎಂಬ ವಿಶಿಷ್ಠ ಪರಿಕಲ್ಪನೆಯಿದ್ದು, ಇದು ಇತ್ತೀಚೆಗಿನ ದಿನಗಳ ಸ್ತನ್ಯ ಬ್ಯಾಂಕ್‌ನ ಹಳೆಯ ರೂಪ ಎನ್ನುವಂತಿದೆ. ತಾಯಿಯ ಸ್ತನ್ಯದ ಅಭಾವದ ಸಂದರ್ಭದಲ್ಲಿ ಯೋಗ್ಯ ಗುಣಗಳಿರುವ ಸ್ತ್ರೀಯನ್ನು ಪರೀಕ್ಷಿಸಿ ಆಯ್ಕೆಮಾಡಿ ಧಾತ್ರಿ ಎಂದು ಪರಿಗಣಿಸಿ ಸೂಕ್ತ ಆರೈಕೆ ನೀಡಿ ಅವಳಿಂದ ಮಗುವಿಗೆ ಸ್ತನ್ಯಪಾನ ಮಾಡಿಸಲಾಗುತ್ತಿತ್ತು. ಏಕೆಂದರೆ ಸ್ತನ್ಯಕ್ಕೆ ಸ್ತನ್ಯವೇ ಪೂರಕ; ಮತ್ತೂಂದಿಲ್ಲ. ಯಾವುದೇ ಕೃತಕ ಆಹಾರವೂ ಇದಕ್ಕೆ ಸಾಟಿಯಲ್ಲ. ಸ್ತನ್ಯಕ್ಷಯದಂತಹ ಸಂದರ್ಭದಲ್ಲಿಯೂ ಸ್ತನ್ಯ ಜನಕ ಆಹಾರ ಔಷಧಗಳ ವಿಸ್ತೃತ ಉಲ್ಲೇಖ-ಬಳಕೆಯೂ ಆಯುರ್ವೇದದಲ್ಲಿದೆ. ಅದಕ್ಕೆಂದೇ ಕವಿ ಲಕ್ಷ್ಮೀನಾರಾಯಣ ಭಟ್ಟರು ಹೇಳಿದ್ದಾರೆ: ಅಮ್ಮಾ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ… ಅದು ನೀಡುವ ಶಾಂತಿ ಕಾಂತಿ ಯಾವ ತಾರೆ ರವಿಗಿದೆ.. ಹಾಲು ಕುಡಿಸಿ ಹೃದಯ ಮಿಡಿಸಿ ಪ್ರೀತಿ ಉಣಿಸಿ ಮನಸಿಗೆ ಬಾಳತೇದು ಮಕ್ಕಳಿಗೆ ಬೆರವಳೆಲ್ಲ ಕನಸಿಗೆ..
ಬಾಣಂತಿ ಆರೈಕೆಯಲ್ಲಿಮೊದಲನೇ ಹತ್ತು ದಿನ
ಬಾಣಂತಿ ಆರೈಕೆಯಲ್ಲಿ ಮೊದಲೇನೇ ಹತ್ತು ದಿನ ಹಸಿವನ್ನು ಉದ್ದೀಪನಗೊಳಿಸಿ ಜೀರ್ಣಕ್ರಿಯೆ ಸರಾಗವಾಗಿ ನಡೆದುಕೊಳ್ಳುವಂತೆ ನೋಡಿಕೊಳ್ಳುವ ಔಷಧಗಳನ್ನು ಆಯೋಜಿಸಲಾಗಿರುತ್ತದೆ. ಉದಾಹರಣೆಗೆ ಕಾಳಜೀರಿಗೆ ಕಷಾಯ, ಓಮಕಾಳಿನ ಲೇಹ್ಯ, ಶುಂಠಿ ಲೇಹ, ಬೆಳ್ಳುಳ್ಳಿ-ನೀರುಳ್ಳಿ ಲೇಹ ಇತ್ಯಾದಿಗಳು. ಅನಂತರದ 10 ರಿಂದ 15 ದಿನಗಳಲ್ಲಿ ಪ್ರಾಮುಖ್ಯವಾಗಿ ಹಾಲನ್ನು ಹೆಚ್ಚಿಸುವಂತೆ ಹಾಗೂ ಗರ್ಭಿಣಿಗೆ ಪೋಷಣೆ ನೀಡುವಂತೆ ವಿವಿಧ ರೀತಿಯ ಗಂಜಿಗಳನ್ನು ನೀಡಲಾಗುತ್ತದೆ. ಉದಾಹರಣೆಗೆ: ಮೆಂತೆ ಗಂಜಿ, ಶತಪುಷ್ಪ (ಸಾಸಪ್ಪೆ) ಗಂಜಿ, ಸಾಸಿವೆ ಗಂಜಿ ಇತ್ಯಾದಿಗಳು. ಕೊನೆಯದಾಗಿ ಬಾಣಂತಿಗೆ ಪುಷ್ಠಿ, ಸ್ತನ್ಯಕ್ಕೆ ಅಧಿಕ ಪೋಷಕಾಂಶಗಳನ್ನು ನೀಡುವಂತಹಾ ಒಣಹಣ್ಣು ಅವುಗಳೆಂದರೆ ಬಾದಾಮಿ, ಗೋಡಂಬಿ, ಖರ್ಜೂರ, ಅಂಜೂರ ಇತ್ಯಾದಿಗಳನ್ನು ತುಪ್ಪ, ಬೆಲ್ಲ, ಕಲ್ಲು ಸಕ್ಕರೆ ಇತ್ಯಾದಿಗಳ ಪಾಕದೊಂದಿಗೆ ಲೇಹ ತಯಾರಿಸಲಾಗುತ್ತದೆ. ಇವೆಲ್ಲವೂ ಬಾಣಂತಿ ಆಹಾರದ ಜತೆಗೆ ಸ್ತನ್ಯದ ಗುಣಮಟ್ಟವನ್ನು ಹಾಗೂ ಪೋಷಕಾಂಶವನ್ನು ವರ್ಧಿಸುವಂತಹವು. ತನ್ಮೂಲಕ ಮಗುವಿನ ಶಾರೀರಿಕ ಆರೋಗ್ಯ ಹಾಗೂ ಬುದ್ಧಿಮತ್ತೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸರಿಯಾಗಿ ವಿಶ್ಲೇಷಿಸಿದರೆ ಇದು ನಮ್ಮ ಪೂರ್ವಜರ ವೈಜ್ಞಾನಿಕವಾದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಸ್ತನ್ಯಪಾನ ಮಗುವಿಗಷ್ಟೆ ಅಲ್ಲ ತಾಯಿಯಲ್ಲೂ ಸ್ತನ ಹಾಗೂ ಗರ್ಭಕೋಶದ ನಿಯಂತ್ರಣ, ಕ್ಯಾನ್ಸರ್ ನಿಯಂತ್ರಣಕಾರಕವಾಗಿದ್ದು, ಶರೀರದ ಬೊಜ್ಜು ನಿಯಂತ್ರಣ, ಮಗುವಿನೊಂದಿಗೆ ಉತ್ತಮ ಭಾಂದವ್ಯ ತನ್ಮೂಲಕ ತಾಯಿಯ ಮಾನಸಿಕ ಆರೋಗ್ಯ ಮೇಲೂ ಕೂಡ ಪರಿಣಾಮ ಬೀರಬಲ್ಲುದಾಗಿದೆ. -ಡಾ| ಮಮತಾ ಕೆ.
ಪ್ರಾಂಶುಪಾಲರು, ಎಸ್‌ಡಿಎಂ ಆಯುರ್ವೇದ ಕಾಲೇಜು, ಉಡುಪಿ