Advertisement
ಇಲ್ಲಿ ನಡೆಯುತ್ತಿರುವ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ 52 ಕೆ.ಜಿ ವಿಭಾಗದಲ್ಲಿ ಅಮಿತ್ ಪಂಘಲ್ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ. ವಿಶ್ವ ಬಾಕ್ಸಿಂಗ್ ಇತಿಹಾಸದಲ್ಲಿ ಭಾರತದ ಸ್ಪರ್ಧಿಯೊಬ್ಬರು ಪ್ರಶಸ್ತಿ ಸುತ್ತಿಗೆ ಏರಿದ ಮೊದಲ ನಿದರ್ಶನ ಇದಾಗಿದ್ದು, ದೇಶದ ಕ್ರೀಡಾಭಿಮಾನಿಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಆದರೆ 63 ಕೆ.ಜಿ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಮನೀಷ್ ಕೌಶಿಕ್ ಇಲ್ಲಿ ಪರಾಭವಗೊಂಡು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಶುಕ್ರವಾರದ ಸೆಮಿಫೈನಲ್ ಹಣಾಹಣಿಯಲ್ಲಿ 2ನೇ ಶ್ರೇಯಾಂಕದ ಅಮಿತ್ ಪಂಘಲ್ 3-2 ಅಂತರದಿಂದ ಕಜಾಕಸ್ಥಾನದ ಸಾಕೆನ್ ಬಿಬೊಸ್ಸಿನೋವ್ ಅವರನ್ನು ಹಿಮ್ಮೆಟ್ಟಿಸಿದರು. ಶನಿವಾರ ನಡೆಯುವ ಚಿನ್ನದ ಕಾಳಗದಲ್ಲಿ ಅಮಿತ್ ಪಂಘಲ್ ಉಜ್ಬೆಕಿಸ್ಥಾನದ ಶಖೋಬಿದಿನ್ ಜೊçರೋವ್ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಅವರು ಫ್ರಾನ್ಸ್‌ನ ಬಿಲಾಲ್ ಬೆನ್ನಮ ಅವರನ್ನು ಮಣಿಸಿದರು. ಜೊçರೋವ್ ರಿಯೋ ಒಲಿಂಪಿಕ್ ಚಾಂಪಿಯನ್ ಆಗಿದ್ದಾರೆ.
Related Articles
Advertisement
ಚಿನ್ನವೋ? ಬೆಳ್ಳಿಯೋ?ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಭಾರತ ಈವರೆಗೆ ಕಂಚಿಗಿಂತ ಮಿಗಿಲಾದ ಪದಕ ಗೆದ್ದದ್ದಿಲ್ಲ. ಈ ಪದಕಗಳ ಸಂಖ್ಯೆ ಶುಕ್ರವಾರ ಐದಕ್ಕೇರಿತು. 2009ರಲ್ಲಿ ವಿಜೇಂದರ್ ಸಿಂಗ್, 2011ರಲ್ಲಿ ವಿಕಾಸ್ ಕೃಷ್ಣನ್, 2015ರಲ್ಲಿ ಶಿವ ಥಾಪ ಮತ್ತು 2017ರಲ್ಲಿ ಗೌರವ್ ಬಿಧುರಿ ಕಂಚಿನ ಸಾಧನೆ ಮಾಡಿದ್ದರು. ಈ ಯಾದಿಗೆ ಹೊಸತಾಗಿ ಸೇರಿದವರು ಶುಕ್ರವಾರದ ಸೆಮಿಯಲ್ಲಿ ಸೋತ ಮನೀಷ್ ಕೌಶಿಕ್. ಈಗ ಅಮಿತ್ ಪಂಘಲ್ ಮುಂದೆ ಕಂಚಿಗೂ ಮಿಗಿಲಾದ ಪದಕ ಗೆಲ್ಲುವ ಅವಕಾಶ ಎದುರಾಗಿದೆ. ಬೆಳ್ಳಿಯಂತೂ ಖಾತ್ರಿಯಾಗಿದ್ದು, ಇದು ಚಿನ್ನವಾಗಿ ಹೊಳೆಯಲಿ ಎಂಬುದು ಕ್ರೀಡಾಭಿಮಾನಿಗಳ ಹಾರೈಕೆ. ಪಂಘಲ್ ಪ್ರಚಂಡ ಫಾರ್ಮ್
ಪ್ರಚಂಡ ಫಾರ್ಮ್ನಲ್ಲಿರುವ ಅಮಿತ್ ಪಂಘಲ್ 2017ರ ಆವೃತ್ತಿಯಲ್ಲಿ ಮೊದಲ ಸಲ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಣಕ್ಕಿಳಿದು ಕ್ವಾರ್ಟರ್ ಫೈನಲ್ ತನಕ ಸಾಗಿದ್ದರು. ಬಳಿಕ ಬಲ್ಗೇರಿಯಾದ “ಸ್ಟ್ರಾಂಜಾ ಮೆಮೋರಿಯಲ್’ ಟೂರ್ನಿ ಹಾಗೂ 2018ರ ಏಷ್ಯಾಡ್‌ನಲ್ಲಿ ಚಿನ್ನದ ಪದಕ ಗೆದ್ದು ಮೆರೆದರು. ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲೂ ಬಂಗಾರಕ್ಕೆ ಕೊರಳೊಡ್ಡಿದ್ದರು. ಈ ಬಂಗಾರ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಒಲಿದೀತೇ ಎಂಬುದು ಶನಿವಾರದ ಕುತೂಹಲ.