ಚನ್ನಪಟ್ಟಣ: ವ್ಯಕ್ತಿತ್ವ ವರ್ಧನೆಯಲ್ಲಿ ಪುಸ್ತಕಗಳ ಪಾತ್ರ ಪ್ರಮುಖವಾದುದು. ವೈಚಾರಿಕವಾಗಿ ಚಿಂತಿಸುವ, ವೈಜ್ಞಾನಿಕವಾಗಿ ಆಲೋಚಿಸುವ ಮತ್ತು ಸಮಾಜವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಪುಸ್ತಕಗಳನ್ನು ಓದುವುದರಿಂದ ರೂಢಿಸಿಕೊಳ್ಳಬಹುದು ಎಂದು ಸಾಹಿತಿ ವಿಜಯ್ ರಾಂಪುರ ತಿಳಿಸಿದರು.
ಪಟ್ಟಣದ ರಾಜಾಕೆಂಪೇಗೌಡ ಬಡಾವಣೆಯಲ್ಲಿ ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ಏರ್ಪಡಿಸಿದ್ದ ವಿಶ್ವ ಪುಸ್ತಕ ಹಾಗೂ ಹಕ್ಕುಸ್ವಾಮ್ಯ ದಿನದ ಸರಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎಲ್ಲರೂ ವಾಚನಾಭಿರುಚಿ ಬೆಳೆಸಿಕೊಳ್ಳುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಬೆಂಬಲವಾಗಿ ನಿಲ್ಲೋಣ. ವಿದ್ಯಾರ್ಥಿಗಳು ಮತ್ತು ಯುವಜನತೆ ಜನಪದ, ಕಲೆ, ಸಂಸ್ಕೃತಿ,ಇತಿಹಾಸ,ನಾಡು-ನುಡಿ ಅರಿಯಲು ಪುಸ್ತಕ ಪ್ರೇಮ ಹೊಂದುವುದು ಅತ್ಯಗತ್ಯವಾದದ್ದು ಎಂದು ಅಭಿಪ್ರಾಯಪಟ್ಟರು.
ಹಿರಿಯ ಜಾನಪದ ಗಾಯಕ ಚೌ.ಪು. ಸ್ವಾಮಿ ಮಾತನಾಡಿ, ಪುಸ್ತಕಗಳು ಮನುಷ್ಯನ ಬದುಕಿನ ಜೀವನಾಡಿಗಳು.ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಪುಸ್ತಕಗಳ ಮೊರೆ ಹೋಗಬೇಕು ಅದಕ್ಕಾಗಿಯೇ ಹಿರಿಯರು ಸಾಧಕ ವಿದ್ಯೆ- ಭಾದಕ ದ್ರವ್ಯ ಎಂದಿದ್ದಾರೆ.
ಎಂದರು. ಯುವ ಕವಿ ಲಕ್ಷ್ಮೀ ಕಿಶೋರ್ ಅರಸ್ ಕೂಡೂರು ಮಾತನಾಡಿ ,ನಮ್ಮಲ್ಲಿರುವ ಸಜೀವ ಸೌಂದರ್ಯ ಮತ್ತು ಸಂಪತ್ತು ಎಂದರೆ ಜ್ಞಾನ ಮತ್ತು ವಿದ್ಯೆ. ಇವುಗಳಿಗೆ ಮೂಲ ಆಕರ ಪುಸ್ತಕಗಳು .ಹಾಗಾಗಿ ಪುಸ್ತಕಗಳ ಮಹತ್ವವನ್ನುಭವಿಷ್ಯದ ಪೀಳಿಗೆಗೆ ಸಾರಬೇಕಾದದ್ದು ನಮ್ಮ ಆದ್ಯ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್ ಖಜಾಂಚಿ ಅನಿತಾ ವಿಜಯ್ ಹಾಜರಿದ್ದರು.