ಗಂಗಾವತಿ: ಭೂಮಿ ಮೇಲೆ ಜನಿಸಿದ ಯಾರು ಅನಾಥರಲ್ಲ. ಅವರಿಗೆ ಇಡೀ ಸಮಾಜವೇ ಪ್ರತಿಯೊಬ್ಬರ ನೆರವಿಗೆ ಬರಬೇಕು ಎಂದು ಸವಿತ ಸಮಾಜದ ಗೆಳೆಯರ ಬಳಗದ ಮುಖಂಡ ವಿಶ್ವನಾಥ್ ಗದ್ವಾಲ್ ಹೇಳಿದರು.
ಅವರು ವಿಶ್ವ ಕ್ಷೌರಿಕರ ದಿನದ ಅಂಗವಾಗಿ ನಗರದ ಅನಾಥ ಆಶ್ರಮ ಮತ್ತು ಭಿಕ್ಷುಕರಿಗೆ ಉಚಿತ ಕ್ಷೌರ ಸೇವೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರ ವೃತ್ತಿ ಶ್ರೇಷ್ಟವಾದದ್ದು. ವಿಶ್ವಗುರು ಬಸವಣ್ಣನವರು ಹೇಳಿದಂತೆ ಕಾಯಕದಲ್ಲಿ ಕೈಲಾಸವನ್ನು ಕಾಣುವ ಪ್ರತಿಯೊಬ್ಬರಲ್ಲಿಯೂ ದೇವರಿದ್ದಾನೆ. ಆದ್ದರಿಂದ ವಿಶ್ವ ಕ್ಷೌರಿಕರ ದಿನದ ನಿಮಿತ್ತ ಇಡೀ ಮನುಷ್ಯ ಕುಲವನ್ನು ಸ್ವಚ್ಚ ಮತ್ತು ಶುಭ್ರಗೊಳಿಸುವ ಕಾಯಕದಲ್ಲಿ ನಿರತವಾಗಿರುವ ಎಲ್ಲ ಕ್ಷೌರಿಕರಿಗೂ ಶುಭಾಶಯಗಳು. ತಮ್ಮ ತಮ್ಮ ವೃತ್ತಿಯನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತಾ ಆರ್ಥಿಕವಾಗಿ ಸಬಲರಾಗಿ ಅನಾಥರು ಮತ್ತು ಅಶಕ್ತರಿಗೆ ಸಹಾಯ ಮಾಡುವ ಗುರಿಯನ್ನು ಪ್ರತಿಯೊಬ್ಬರು ಹೊಂದಬೇಕು ಎಂದರು.
ಜೂನಿಯರ್ ಕಾಲೇಜು ಮೈದಾನದ ರಂಗಭೂಮಿ ಮತ್ತು ಬೀದಿ ಬದಿಯಲ್ಲಿರುವ ಭಿಕ್ಷುಕರಿಗೆ ಅನಾಥರಿಗೆ ಕ್ಷೌರ ಮಾಡಿ ಜಳಕವನ್ನು ಮಾಡಿಸಲಾಯಿತು. ಲಯನ್ಸ್ ಬುದ್ದಿ ಮಾಂದ್ಯ ಮಕ್ಕಳು, ಕಂಪ್ಲಿ ರಸ್ತೆಯಲ್ಲಿರುವ ವೃದ್ಧಾಶ್ರಮದ ಹಿರಿಯರಿಗೆ ಉಚಿತ ಕ್ಷೌರ ಸೇವೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ವಿಶ್ವನಾಥ ಗದ್ವಾಲ್, ಮಹಾಬಳೇಶ, ಶರಣ ಬಸವ ಹಡಪದ್ ಸೇರಿ ಅನೇಕ ಗೆಳೆಯರು ಇದ್ದರು.