Advertisement
ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು 2013 ಮತ್ತು 2014ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇತ್ತೀಚಿನ ವಿವಿಧ ಕೂಟಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಸಿಂಧು ಪದಕ ಗೆಲ್ಲುವ ಪ್ರಮುಖ ಸ್ಪರ್ಧಿಯಾಗಿದ್ದಾರೆ. ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ 2015ರಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಆದರೆ ಇತ್ತೀಚೆಗೆ ಫಾರ್ಮ್ ಕೊರತೆ ಎದುರಿಸುತ್ತಿರುವುದು ತುಸು ಆತಂಕಕ್ಕೆ ಕಾರಣವಾಗಿದೆ. ವನಿತಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಕೊರಿಯಾದ ಕಿಮ್ ಹೊ ಮಿನ್ ಅಥವಾ ಈಜಿಪ್ಟ್ನ ಹದಿಯಾ ಹೋಸ್ನಿ ವಿರುದ್ಧ ಮೊದಲ ಸುತ್ತಿನ ಪಂದ್ಯವಾಡಲಿದ್ದಾರೆ. ಗೆದ್ದು ಮುಂದುವರಿದರೆ ಕ್ವಾರ್ಟರ್ ಫೈನಲ್ ಪ್ರವೇಶಕ್ಕೆ ಚೀನದ ಸುನ್ ಯು ವಿರುದ್ಧ ಕಾದಾಡುವ ಸಾಧ್ಯತೆ ಇದೆ. ಸೈನಾ ನೆಹ್ವಾಲ್ ಸ್ವಿಟ್ಸರ್‌ಲ್ಯಾಂಡಿನ ಸಬ್ರಿನಾ ಜಾಕ್ವೆಟ್-ಉಕ್ರೇನಿನ ನತಾಲ್ಯಾ ವೊಯೆಕ್ ನಡುವಿನ ವಿಜೇತರನ್ನು ಎದುರಿಸುವರು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಕೆ. ಶ್ರೀಕಾಂತ್ ಪದಕ ಗೆಲ್ಲುವ ಪ್ರಮುಖ ಸ್ಪರ್ಧಿಯಾಗಿದ್ದಾರೆ. ಅವರು ಕಳೆದ ಇಂಡೋನೇಶ್ಯ ಹಾಗೂ ಆಸ್ಟ್ರೇಲಿಯ ಓಪನ್ ಟೂರ್ನಿಗಳಲ್ಲಿ ಪ್ರಶಸ್ತಿಗೆ ಪಾತ್ರರಾಗಿದ್ದರು. ಇದೇ ಫಾರ್ಮ್ ಮುಂದುವರಿಸಿದರೆ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಪದಕದ ಖಾತೆ ತೆರೆಯಬಹುದು. ಬಿ. ಸಾಯಿ ಪ್ರಣೀತ್, ಅಜಯ್ ಜಯರಾಮ್, ಸಮೀರ್ ವರ್ಮ ಪುರುಷರ ಸಿಂಗಲ್ಸ್ ವಿಭಾಗದ ಪ್ರಮುಖರಾಗಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಬಿ. ಸುಮೀತ್ ರೆಡ್ಡಿ, ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೋನ್ನಪ್ಪ ಮತ್ತು ಸುಮೀತ್ ರೆಡ್ಡಿ ಜೋಡಿ ಸ್ಥಾನ ಪಡೆದಿದೆ. ಭಾರತದ ಪುರುಷರು ಪ್ರಸಕ್ತ ಬ್ಯಾಡ್ಮಿಂಟನ್ ಋತುವಿನಲ್ಲಿ ಒಟ್ಟು 6 ಪ್ರಶಸ್ತಿಗಳೊಂದಿಗೆ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಇದು ಗ್ಲಾಸ್ಗೋ ಯಶಸ್ಸಿಗೆ ಸ್ಫೂರ್ತಿಯಾಗಬಹುದು. ಪಂದ್ಯಾವಳಿ ಆ. 27ರ ವರೆಗೆ ನಡೆಯಲಿದೆ.