ಗ್ಲಾಸ್ಕೊ: ಭಾರತದ ಖ್ಯಾತ ಶಟ್ಲರ್ ಸೈನಾ ನೆಹ್ವಾಲ್ ಮತ್ತು ಸಾಯಿ ಪ್ರಣೀತ್ ಅವರು ತಮ್ಮ ಎದುರಾಳಿಯೆದುರು ಜಯ ಸಾಧಿಸಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪ್ರಿ-ಕ್ವಾರ್ಟರ್ ಫೈನಲಿಗೇರಿದ್ದಾರೆ.
27ರ ಹರೆಯದ ಒಲಿಂಪಿಕ್ಸ್ ಕಂಚು ವಿಜೇತೆ ಸೈನಾ ಅವರು ಸ್ವಿಸ್‌ನ ಸಬ್ರಿನಾ ಜಾಕ್ವೆಟ್ ಅವರನ್ನು 21-11, 21-12 ಗೇಮ್‌ಗಳಿಂದ ಕೇವಲ 33 ನಿಮಿಷಗಳಲ್ಲಿ ಉರುಳಿಸಿ ಮುನ್ನಡೆದರು. ಇದು ಸಬ್ರಿನಾ ವಿರುದ್ಧ ಸೈನಾ ದಾಖಲಿಸಿದ ಎರಡನೇ ಗೆಲುವು ಆಗಿದೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲೂ ಸೈನಾ ಅವರು ಸಬ್ರಿನಾರನ್ನು ಕೆಡಹಿದ್ದರು.
ಸೈನಾ ಜಕಾರ್ತಾದಲ್ಲಿ ನಡೆದ ಈ ಹಿಂದಿನ ವಿಶ್ವ ಬ್ಯಾಡ್ಮಿಂಟನ್ ಕೂಟದಲ್ಲಿ ಬೆಳ್ಳಿಯ ಪದಕ ಜಯಿಸಿದ್ದರೆ ಸಬ್ರಿàನಾ ಈ ವರ್ಷ ನಡೆದ ಯುರೋಪಿಯನ್ ಬ್ಯಾಡ್ಮಿಂಟನ್ ಕೂಟದಲ್ಲಿ ಕಂಚು ಪಡೆದಿದ್ದರು.
ಸೈನಾ ಮುಂದಿನ ಸುತ್ತಿನಲ್ಲಿ ದ್ವಿತೀಯ ಶ್ರೇಯಾಂಕದ ಸಂಗ್ ಜಿ ಹ್ಯುನ್ ಅವರನ್ನು ಎದುರಿಸಲಿದ್ದಾರೆ. ಹ್ಯುನ್ ಇನ್ನೊಂದು ಪಂದ್ಯ ದಲ್ಲಿ ಭಾರತದ ತನ್ವಿ ಲಾಡ್ ಅವರನ್ನು 21-9, 21-19 ಗೇಮ್‌ಗಳಿಂದ ಸೋಲಿಸಿದರು.
ಸಿಂಗಾಪುರ ಓಪನ್ ಚಾಂಪಿಯನ್ ಬಿ. ಸಾಯಿ ಪ್ರಣೀತ್ ಅವರು 20ರ ಹರೆಯದ ಇಂಡೋನೇಶ್ಯದ ಅಂತೋನಿ ಸಿನಿಸುಕ ಜಿಂಟಿಂಗ್ ವಿರುದ್ಧ ಆತಂಕದ ಕ್ಷಣಗಳನ್ನು ಎದುರಿಸಿದರೂ ಮೂರು ಗೇಮ್‌ಗಳ ಹೋರಾಟದಲ್ಲಿ ಜಯ ಸಾಧಿಸಲು ಯಶಸ್ವಿಯಾದರು. 2014ರ ಯೂತ್ ಒಲಿಂಪಿಕ್ ಮತ್ತು ವಿಶ್ವ ಜೂನಿಯರ್ ಬ್ಯಾಡ್ಮಿಂಟನ್‌ನ ಬಾಲಕರ ಸಿಂಗಲ್ಸ್‌ನಲ್ಲಿ ಕಂಚು ಜಯಿಸಿದ್ದ ಜಿಂಟಿಂಗ್ ಅವರುನ್ನು ಪ್ರಣೀತ್ 14-21, 21-18, 21-19 ಗೇಮ್‌ಗಳಿಂದ ಕೆಡಹಿದರು.
ಶ್ರೀಕಾಂತ್ ಮುನ್ನಡೆ: ವಿಶ್ವದ ಎಂಟನೇ ರ್‍ಯಾಂಕಿನ ಕಿದಂಬಿ ಶ್ರೀಕಾಂತ್ ಫ್ರಾನ್ಸ್‌ನ ಲುಕಾಸ್ ಕಾರ್ವಿ ಅವರನ್ನು 21-9, 21-17 ಗೇಮ್‌ಗಳಿಂದ ಸೋಲಿಸಿ ಮುನ್ನಡೆದರು. ಮುಂದಿನ ಸುತ್ತಿನಲ್ಲಿ ಅವರು ಡೆನ್ಮಾರ್ಕ್‌ನ ಆ್ಯಂಡರ್ಸ್ ಅಂಟೋನ್ಸೆನ್ ಅವರನ್ನು ಎದುರಿಸಲಿದ್ದಾರೆ.