ಬುಡಾಪೆಸ್ಟ್: ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಚಿನ್ನ ಮುಡಿಗೇರಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಇದು ವಿಶ್ವ ಆ್ಯತ್ಲೆಟಿಕ್ಸ್‌ನಲ್ಲಿ ಭಾರತ ಜಯಿಸಿರುವ ಪ್ರಪ್ರಥಮ ಚಿನ್ನವಾಗಿದೆ.
ರವಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ನೀರಜ್ ಚೋಪ್ರಾ 88.17 ಮೀ. ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದರು. ಪಾಕಿಸ್ಥಾನದ ಅರ್ಷದ್ ನದೀಮ್ 87.82 ಮೀ. ದೂರಕ್ಕೆ ಎಸೆದು ದ್ವಿತೀಯ ಸ್ಥಾನಿಯಾದರು.
ಭಾರತದವರೇ ಆದ ಕಿಶೋರ್ ಜನಾ 5ನೇ ಸ್ಥಾನ ಗಳಿಸಿಕೊಂಡರು. ಇವರು ತಮ್ಮ ವೃತ್ತಿಜೀವನ ದಾಖಲೆ 84.77 ಮೀ. ದೂರ ಜಾವೆಲಿನ್ ಎಸೆದರು. ತಮ್ಮ 5ನೇ ಪ್ರಯತ್ನದಲ್ಲಿ ಈ ದಾಖಲೆ ಮಾಡಿದರು.
ಭಾರತದ ಇನ್ನೋರ್ವ ಸ್ಪರ್ಧಿ ಡಿ.ಪಿ.ಮನು ಆರನೇ ಸ್ಥಾನಿಯಾದರು. ಭಾರತದ ಮೂವರು ಅಗ್ರ 8ರಲ್ಲಿ ಸ್ಥಾನ ಪಡೆದಿರುವುದು ಕೂಡ ಇದೇ ಮೊದಲು.
ಮೊದಲ ಪ್ರಯತ್ನದಲ್ಲಿ ಪೌಲ್ ಮಾಡಿಕೊಂಡ ನೀರಜ್ ಜೋಪ್ರಾ, ಎರಡನೇ ಪ್ರಯತ್ನದಲ್ಲಿ 88.17 ಮೀ.ವರೆಗೆ ಎಸೆಯುವ ಮೂಲಕ ದಾಖಲೆ ನಿರ್ಮಿಸಿದರು.
ಮೂರನೇ ಪ್ರಯತ್ನದಲ್ಲಿ 86.32 ಮೀ. ಎಸೆದರು. ನಾಲ್ಕನೇ ಪ್ರಯತ್ನದಲ್ಲಿ 84.64, 5ನೇ ಪ್ರಯತ್ನದಲ್ಲಿ 87.73 ಮೀ. ಎಸೆದರು. ಆರನೇ ಪ್ರಯತ್ನದಲ್ಲಿ 83.98 ಮೀ. ಎಸೆದರು. ಈ ಮೊದಲು 2022ರಲ್ಲಿ ಚೋಪ್ರಾ ಬೆಳ್ಳಿ ಜಯಿಸಿದ್ದರು.