ಬುಡಾಪೆಸ್ಟ್: ಇಲ್ಲಿ ನಡೆಯುತ್ತಿರುವ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ರಿಲೇ ಓಟಗಾರರ ತಂಡ ದಾಖಲೆ ಬರೆದಿದೆ. 4*400 ಮೀಟರ್ ಕೂಟದ ಫೈನಲ್ ತಲುಪಿದ ಭಾರತೀಯ ಪುರುಷರ ತಂಡವು ಇದೇ ವೇಳೆ ಏಷ್ಯನ್ ದಾಖಲೆ ಮುರಿದಿದೆ.
ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ಭಾರತದ ಪುರುಷರ 4×400 ಮೀಟರ್ ರಿಲೇ ತಂಡದ ರೋಚಕ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಕೂಟದ ಫೇವರಿಟ್ ಯುಎಸ್ಎ ಜೊತೆಗೆ ಭಾರತವನ್ನು ಹೀಟ್ 1 ರಲ್ಲಿ ಇರಿಸಲಾಗಿದೆ.
ಅಹರ್ತಾ ಸುತ್ತಿನಲ್ಲಿ ಭಾರತ ತಂಡ ಎರಡನೇ ಸ್ಥಾನ ಪಡೆಯಿತು. ಯುಎಸ್ ಎ ಮೊದಲ ಸ್ಥಾನ ಪಡೆಯಿತು. ಮುಹಮ್ಮದ್ ಅನಾಸ್ ಯಾಹಿಯಾ ಅವರೊಂದಿಗೆ ಆರಂಭಿಸಿದ ಭಾರತ ಮೊದಲ ರನ್ ನಂತರ ಆರನೇ ಸ್ಥಾನದಲ್ಲಿತ್ತು ಆದರೆ ಅಮೋಜ್ ಜೇಕಬ್ ಅವರ ಅದ್ಭುತ ಓಟ ಭಾರತವನ್ನು ಎರಡನೇ ಸ್ಥಾನಕ್ಕೆ ತಂದಿಟ್ಟಿತು. ಮುಹಮ್ಮದ್ ಅಜ್ಮಲ್ ವರಿಯತ್ತೋಡಿ ಮತ್ತು ರಾಜೇಶ್ ರಮೇಶ್ ಅವರು ಆ ಅಮೂಲ್ಯ ಪ್ರಯೋಜನವನ್ನು ಉಳಿಸಿಕೊಂಡಿದ್ದು ಮಾತ್ರವಲ್ಲದೆ 2:59.05 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದರಲ್ಲದೆ, ಏಷ್ಯನ್ ದಾಖಲೆಯನ್ನು ಧ್ವಂಸಗೊಳಿಸಿದರು. ಹಿಂದಿನ ಏಷ್ಯಾದ 2:59.51 ಸೆಕೆಂಡ್ ನ ದಾಖಲೆ ಜಪಾನ್ ಹೆಸರಿನಲ್ಲಿತ್ತು.
ಒಂದು ಹಂತದಲ್ಲಿ, ಆಂಕರ್ ಲೆಗ್ ನಲ್ಲಿ ರಾಜೇಶ್ ರಮೇಶ್ ಯುಎಸ್‌ಎಯ ಜಸ್ಟಿನ್ ರಾಬಿನ್ ಸನ್ ರನ್ನು ಕ್ಷಣಮಾತ್ರಕ್ಕೆ ಹಿಂದಿಕ್ಕಿದರು, ಭಾರತೀಯರ ಅಸಾಧಾರಣ ಪ್ರಯತ್ನ ಅತ್ಲೆಟಿಕ್ ಜಗತ್ತನ್ನು ವಿಸ್ಮಯಗೊಳಿಸಿತು. ಆದರೆ 2:58:47 ಸೆಕೆಂಡ್ ಗಳಲ್ಲಿ ಯುಎಸ್ಎ ಗುರಿ ತಲುಪಿತು.
2:59:42s ಸೆಕೆಂಡ್ ಗಳಲ್ಲಿ ಗುರಿ ತಲುಪಿದ ಬ್ರೇಟ್ ಬ್ರಿಟನ್ ಮತ್ತು ಬೋಟ್ಸವಾನ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದು, ಫೈನಲ್ ಪ್ರವೇಶ ಪಡೆದಿದೆ. ಎರಡನೇ ಹೀಟ್ ನಲ್ಲಿ ಜಮೈಕಾ (2:59:82ಸೆ), ಫ್ರಾನ್ಸ್ (3:00:05ಸೆ) ಮತ್ತು ಇಟಲಿ (3:00:14ಸೆ) ಅಟೋಮ್ಯಾಟಿಕ್ ಅರ್ಹತೆ ಗಳಿಸಿದರೆ, ನೆದರ್ಲೆಂಡ್ಸ್ (3:00:23ಸೆ) ಕೂಡಾ ಸ್ಥಾನ ಪಡೆಯಿತು.