ಬರ್ಲಿನ್: ಭಾರತದ ವನಿತಾ ಕಂಪೌಂಡ್ ತಂಡ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದು ಸಂಭ್ರಮಿ ಸಿದೆ. ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರಿಣೀತ್ ಕೌರ್ ಅವರನ್ನೊಳಗೊಂಡ ತಂಡ ಶ್ರುಕವಾರದ ಫೈನಲ್‌ನಲ್ಲಿ ಮೆಕ್ಸಿಕೊವನ್ನು 235-229 ಅಂಕಗಳ ಅಂತರದಿಂದ ಮಣಿಸಿತು.
ಸೆಮಿಫೈನಲ್‌ನಲ್ಲಿ ಭಾರತ ತಂಡ ಕೊಲಂಬಿಯಾವನ್ನು 220-216 ಅಂತರದಿಂದ ಹಾಗೂ ಕ್ವಾರ್ಟರ್ ಫೈನಲ್‌ನಲ್ಲಿ ಚೈನೀಸ್ ತೈಪೆಯನ್ನು 228-226 ಅಂತರದಿಂದ ಪರಾಭವಗೊಳಿಸಿತ್ತು.
1981ರಲ್ಲಿ ವಿಶ್ವ ಆರ್ಚರಿ ಚಾಂಪಿ ಯನ್‌ಶಿಪ್ ಆರಂಭಗೊಂಡಿದ್ದು, ವನಿತಾ ಕಂಪೌಂಡ್ ತಂಡ ಒಟ್ಟು 9 ಸಲ ಫೈನಲ್‌ನಲ್ಲಿ ಎಡವಿತ್ತು. 4 ಸಲ ರಿಕರ್ವ್ ಫೈನಲ್‌ನಲ್ಲಿ, 5 ಸಲ ಕಂಪೌಂಡ್ ವಿಭಾಗದಲ್ಲಿ ನಮ್ಮವರಿಗೆ ಬಂಗಾರ ಕೈಕೊಟ್ಟಿತ್ತು.
ಕೇವಲ ಆರಂಭ ಮಾತ್ರ
“ನಾವು ಬಹಳಷ್ಟು ರಜತ ಪದಕಗ ಳನ್ನು ಜಯಿಸಿದ್ದೇವೆ. ಆದರೆ ಬಂಗಾರದ ಕೊರತೆ ಕಾಡುತ್ತಿತ್ತು. ನಿನ್ನೆಯೇ ದೊಡ್ಡ ಮಟ್ಟದ ಯೋಜನೆ ಹಾಕಿಕೊಂಡಿದ್ದೆವು. ಇದು ಯಶಸ್ವಿಯಾಗಿದೆ. ಇದು ಕೇವಲ ಆರಂಭ ಮಾತ್ರ. ಇನ್ನೂ ಹೆಚ್ಚು ಚಿನ್ನದ ಪದಕಗಳನ್ನು ಗೆಲ್ಲುವುದು ನಮ್ಮ ಗುರಿ’ ಎಂಬುದಾಗಿ ಜ್ಯೋತಿ ಹೇಳಿದರು.
“ಇದೊಂದು ಸ್ಮರಣೀಯ ಕ್ಷಣ. ಭಾರತದ ತ್ರಿವರ್ಣ ಬಹಳ ಎತ್ತರದಲ್ಲಿ ಹಾರಾಡಲಾರಂಭಿಸಿದೆ’ ಎಂಬುದು ಈ ತಂಡದ ಅತೀ ಕಿರಿಯ ಸದಸ್ಯೆ, 17 ವರ್ಷದ ಅದಿತಿ ಸ್ವಾಮಿ ಅವರ ಖುಷಿಯ ನುಡಿಗಳು.