Advertisement
ಕಳೆದ 9 ವರ್ಷಗಳ ಐತಿಹಾಸಿಕ ಸಾಧನೆ-ಸಾಹಸ ಭಾರತದಲ್ಲಿ ವಿಜೃಂಭಿಸುತ್ತಿದೆ. ವಿಶ್ವವೇ ಮೆಚ್ಚುಗೆಯ ಚಪ್ಪಾಳೆ ತಟ್ಟುತ್ತಿದೆ. ಭಾರತದ ಬಗ್ಗೆ ಮೂಗು ಮುರಿದವರೇ ಇದೀಗ ಭಾರತದ ಸಾಧನೆ ಮೆಚ್ಚಿ ಸ್ನೇಹ-ಸಂಬಂಧಗಳ ವೃದ್ಧಿಗೆ ಮುಂದಾಗುತ್ತಿದ್ದಾರೆ.
Related Articles
Advertisement
ಪ್ರಧಾನಿ ಮೋದಿ 9 ವರ್ಷಗಳಲ್ಲಿ ಮ್ಯಾಜಿಕ್ ಏನೂ ಮಾಡಲಿಲ್ಲ. ಇದ್ದ ವ್ಯವಸ್ಥೆಯಲ್ಲಿ ಪ್ರಾಮಾಣಿಕ ಯತ್ನ ಕೈಗೊಂಡರು. ಆಡಳಿತ ಬಿಗಿಗೊಳಿಸಿದರು. ಸ್ವಾರ್ಥ ತೊರೆದು ದೇಶದ ಹಿತ ಮೊದಲೆಂದರು. ವಿಶ್ವ ಮಟ್ಟದಲ್ಲಿ ಕುಗ್ಗುತ್ತಿದ್ದ ಭಾರತದ ವರ್ಚಸ್ಸು ವೃದ್ಧಿಗೆ ಶಕ್ತಿ ತುಂಬಿದರು. ಭ್ರಷ್ಟಾಚಾರ-ಹಗರಣ ರಹಿತ, ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಿದರು. ಕೋವಿಡ್ ಮಾರಿ ದಾಳಿಗೆ ಶ್ರೀಮಂತ ಹಾಗೂ ಮುಂದುವರಿದ ರಾಷ್ಟ್ರಗಳ ಅಸಹಾಯಕರಾಗಿ ಕುಳಿತಿರುವಾಗ ಭಾರತದಲ್ಲಿ ಕೋವಿಡ್‌ನ್ನು ಕಟ್ಟಿ ಹಾಕಲಾಯಿತು. ರಾಷ್ಟ್ರದ ಎಲ್ಲರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಿದ್ದು ಐತಿಹಾಸಿಕ ದಾಖಲೆಯೇ ಸರಿ. ಆರ್ಥಿಕತೆ ಹೆಚ್ಚುವಂತೆ ಮಾಡಿದರು. ಮೂಲಭೂತ ಸೌಲಭ್ಯಗಳ ಅನುಷ್ಠಾನಕ್ಕೆ ಮುಂದಾಗಿದ್ದರಿಂದಲೇ ಇಂದು ಭಾರತ ವಿಶ್ವಮಟ್ಟದಲ್ಲಿ ಪ್ರಜ್ವಲಿಸುವಂತಾಗಿದೆ.
ಕೋವಿಡ್ ಸಂಕಷ್ಟ, ಲಾಕ್‌ಡೌನ್, ವಿವಿಧ ಉದ್ಯಮ, ವ್ಯಾಪಾರ-ವಾಣಿಜ್ಯಗಳ ಮೇಲೆ ತನ್ನದೇ ಪರಿಣಾಮ ಬೀರಿದ್ದರಿಂದ ಹಲವು ದೇಶಗಳು ಸಂಕಷ್ಟ ಎದುರಿಸುವಂತಾಗಿದ್ದರೆ, ಭಾರತದ ಆರ್ಥಿಕ ಬೆಳವಣಿಗೆ ಮಾತ್ರ ಜಿಗಿತ ಕಾಣುತ್ತಿದ್ದು, ಭವಿಷ್ಯದಲ್ಲಿ ಆಶಾದಾಯಕ ಸ್ಥಿತಿ-ಸ್ಥಾನ ಗೋಚರಿಸುತ್ತಿದೆ. ಪ್ರಸ್ತುತ ಭಾರತ ವಿಶ್ವದ 5ನೇ ಅತೀ ದೊಡ್ಡ ಆರ್ಥಿಕ ಶಕ್ತಿ ರಾಷ್ಟ್ರವಾಗಿ ಕಂಗೊಳಿಸುತ್ತಿದ್ದು, ಬರುವ ವರ್ಷಗಳಲ್ಲಿ ಮೂರನೇ ಸ್ಥಾನಕ್ಕೆ ಜಿಗಿಯಲಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.
ಮೂಲಭೂತ ಸೌಲಭ್ಯಗಳಿಗೆ ಒತ್ತು
ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಅಧಿಕಾರಕ್ಕೆ ಬಂದಾಗ ದೇಶದ ಸ್ಥಿತಿ ಏನಾಗಿತ್ತು ಎಂಬುದು ರಾಷ್ಟ್ರಕ್ಕೆ ತಿಳಿದ ಸಂಗತಿಯಾಗಿದೆ. ಹಿಂದಿನ ಸರಕಾರ ಅಭಿವೃದ್ಧಿಗಿಂತ ಹಗರಣ, ಭ್ರಷ್ಟಾಚಾರಗಳಿಂದಲೇ ಸುದ್ದಿ ಮಾಡಿತ್ತು. ವಿಶ್ವ ಮಟ್ಟದಲ್ಲಿ ಭಾರತದ ವರ್ಚಸ್ಸು ಕುಂದಿತ್ತು. ಇವೆಲ್ಲವುದನ್ನು ಸರಿಪಡಿಸುವ, ವರ್ಚಸ್ಸು ಹೆಚ್ಚಿಸುವ, ರಾಷ್ಟ್ರದಲ್ಲಿ ಮೂಲಭೂತ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಸವಾಲು ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಮೂಲಭೂತ ಸೌಲಭ್ಯಗಳ ನೀಡಿಕೆಗೆ ಹೆಚ್ಚಿನ ಒತ್ತು ನೀಡಿದರು. ರಸ್ತೆ, ರೈಲು, ವಿಮಾನಯಾನ, ವಿದ್ಯುತ್, ಕುಡಿಯುವ ನೀರು, ಆರೋಗ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸೌಲಭ್ಯ ಹೆಚ್ಚಳಕ್ಕೆ ಮುಂದಾದರು. ಅದರ ಫಲಿತಾಂಶ ಏನೆಂಬುದು ರಾಷ್ಟ್ರದಾದ್ಯಂತ ಗೋಚರಿಸುತ್ತಿದೆ.
ರೈಲು ಮಾರ್ಗಗಳ ವಿದ್ಯುದೀಕರಣ ಈ ಹಿಂದೆ ಅಂದಾಜು 700-800 ಕೋಟಿ ರೂ.ಗಳಷ್ಟು ಅನುದಾನ ನೀಡುತ್ತಿದ್ದರೆ, ಇದೀಗ 7,000-8,000 ಕೋಟಿ ರೂ.ಗಳನ್ನು ನೀಡಲಾಗುತ್ತಿದೆ. ಮಾರ್ಗ ನಿರ್ಮಾಣ ದುಪ್ಪಟ್ಟುಗೊಂಡಿದೆ. ಹುಬ್ಬಳ್ಳಿಯಲ್ಲಿ ವಿಶ್ವದ ಲ್ಲಿಯೇ ಅತೀ ಉದ್ದನೆಯ ರೈಲ್ವೇ ಪ್ಲಾಟ್‌ಫಾರ್ಮ್ ನಿರ್ಮಾಣ ಗೊಂಡಿದೆ. ರೈಲು ಮಾರ್ಗಗಳ ಡಬ್ಲಿಂಗ್, ರಾಷ್ಟ್ರೀಯ ಹೆದ್ದಾರಿ ದಾಖಲೆ ರೂಪ ಪಡೆದುಕೊಂಡಿದ್ದು, ಹೆದ್ದಾರಿ ನಿರ್ಮಾಣವೂ ದುಪ್ಪಟ್ಟಾಗಿದೆ. ಜಲಜೀವನ ಮಿಶನ್ ಅಡಿಯಲ್ಲಿ ದೇಶದ ಪ್ರತೀ ಮನೆಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಅಭಿಯಾನ ಕ್ರಾಂತಿಕಾರಿಯಾಗಿದೆ. ವಿದ್ಯುತ್ ಮುಖ ನೋಡಿರದ ಅನೇಕ ಪ್ರದೇಶ, ಕುಗ್ರಾಮಗಳು ಬೆಳಕು ಕಂಡಿವೆ. ಕೇಂದ್ರ ಸರಕಾರದ ವಿವಿಧ ಯೋಜನೆಗಳ ನೆರವು, ಸಬ್ಸಿಡಿ ಮಧ್ಯವರ್ತಿಗಳ ಹಾವಳಿ, ಸೋರಿಕೆ ಇಲ್ಲದೆಯೇ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ.
ಕಲ್ಲಿದ್ದಲು ಉತ್ಪಾದನೆ-ಹರಾಜಿನಲ್ಲಿ ದಾಖಲೆನಾನು ನಿರ್ವಹಿಸುವ ಕಲ್ಲಿದ್ದಲು ಮತ್ತು ಗಣಿ ಇಲಾಖೆಯನ್ನು ತೆಗೆದುಕೊಳ್ಳಿ ಯುಪಿಎ ಸರಕಾರದಲ್ಲಿ ಕಲ್ಲಿದ್ದಲು ಹಗರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಉತ್ಪಾದನೆ, ಹರಾಜು ಇನ್ನಿತರ ಕಾರ್ಯಗಳಲ್ಲಿ ಏನೆಲ್ಲ ಲೋಪ, ಹಗರಣಗಳು ಕೇಳಿ ಬಂದಿದ್ದವು. ನರೇಂದ್ರ ಮೋದಿ ನೇತೃತ್ವದ ಸರಕಾರ ಬಂದ ಮೇಲೆ ಕಲ್ಲಿದ್ದಲು, ಗಣಿ ವಿಚಾರದಲ್ಲಿ ಅಮೂಲಾಗ್ರ ಬದಲಾವಣೆ, ಸುಧಾರಣೆ ತರಲಾಗಿದ್ದು, ಪಾರದರ್ಶನ ನಿಯಮಗಳ ಪಾಲನೆಯಿಂದಾಗಿ ಈ ಹಿಂದೆ 570 ಮಿಲಿಯನ್ ಟನ್‌ನಷ್ಟು ಇದ್ದ ಕಲ್ಲಿದ್ದಲು ಉತ್ಪಾದನೆ ಇದೀಗ 1,000 ಬಿಲಿಯನ್ ಟನ್‌ಗೆ ಹೆಚ್ಚಿದೆ. ಕಲ್ಲಿದ್ದಲು ಬ್ಲಾಕ್‌ಗಳ ಹರಾಜು ನಿಯಮ ದಡಿಯಲ್ಲಿ ಪಾರದರ್ಶಕತೆಯೊಂದಿಗೆ ಕೈಗೊಳ್ಳಲಾಗಿದೆ. ಒಂದೇ ವರ್ಷದಲ್ಲಿ ಸುಮಾರು 105 ಗಣಿಗಳ ಹರಾಜು ಪ್ರಕ್ರಿಯೆ ಸುಸೂತ್ರವಾಗಿ ನಡೆದಿದೆ. ಕಲ್ಲಿದ್ದಲು ಗಣಿಯಿಂದ ಒಡಿಶಾ ಸರಕಾರಕ್ಕೆ 2008-09ರಲ್ಲಿ 5 ಸಾವಿರ ಕೋಟಿ ರೂ.ಗಳ ಆದಾಯ ಬರುತ್ತಿತ್ತು. 2018-19ರಲ್ಲಿ ಅದು 25 ಸಾವಿರ ಕೋಟಿ ರೂ.ಗೆ ಹೆಚ್ಚಿತ್ತು. 2020ರಲ್ಲಿ ಕಲ್ಲಿದ್ದಲು ಗಣಿ ಹರಾಜು ನಿಯಮಗಳಲ್ಲಿ ಮತ್ತಷ್ಟು ಸುಧಾರಣೆ, ಕ್ರಾಂತಿಕಾರಕ ಬದಲಾ ವಣೆಗಳ ಹಿನ್ನೆಲೆಯಲ್ಲಿ ಒಡಿಶಾ ಸರಕಾರಕ್ಕೆ ಅಂದಾಜು 50 ಸಾವಿರ ಕೋಟಿ ರೂ.ಗಳ ಆದಾಯ ಬಂದಿದೆ ಎಂದು ಅಲ್ಲಿನ ಮುಖ್ಯ ಮಂತ್ರಿಯವರೇ ಸಂತಸ ವ್ಯಕ್ತಪಡಿಸಿದ್ದಾರೆ. ಸಂಸತ್ತಿನಲ್ಲಿ ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳ ಅಸಹಕಾರ, ಉಭಯ ಸದನಗಳಲ್ಲಿ ಗದ್ದಲ, ಕಲಾಪಕ್ಕೆ ಅಡ್ಡಿಯ ನಡುವೆಯೂ ಕಾಶ್ಮೀರಕ್ಕೆ 370 ಕಲಂ ರದ್ದು, ತ್ರಿವಳಿ ತಲಾಕ್ ರದ್ದು ಸೇರಿದಂತೆ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು, ಅನೇಕ ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆಯಲಾಗಿದೆ. ಭಾರತದ ಬೆಳವಣಿಗೆ ವೇಗ, ಉತ್ತಮ ಮೂಲಭೂತ ಸೌಲಭ್ಯ, ಗಟ್ಟಿ ನಾಯಕತ್ವದ ಪರಿಣಾಮವಾಗಿ ವಿಶ್ವದ ಅನೇಕ ದೇಶಗಳ ಹೂಡಿಕೆದಾರರು ಭಾರತದ ಕಡೆ ಮುಖ ಮಾಡಿದ್ದಾರೆ. ಪ್ರತಿಷ್ಠಿತ ಕಂಪೆನಿಗಳು ತಮ್ಮ ಉದ್ಯಮವನ್ನು ಭಾರತದಲ್ಲಿ ನೆಲೆ ಗೊಳಿಸಲು ಮುಂದಾಗಿದ್ದು, ಬರುವ ದಿನಗಳಲ್ಲಿ ದೇಶದಲ್ಲಿ ಉದ್ಯಮದ ನೆಗೆತ ಮತ್ತಷ್ಟು ಹೆಚ್ಚಲಿದ್ದು, ಇದರಿಂದ ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಸಹಕಾರಿ ಆಗಲಿದೆ. ರೈತರಿಗೆ ಕೃಷಿ ಸಮ್ಮಾನ, ಕೃಷಿ ಸಿಂಚನ ಹೀಗೆ ವಿವಿಧ ಯೋಜನೆಗಳ ಮೂಲಕ ಕೇಂದ್ರ ಸರಕಾರ ಮಹತ್ವದ ನೆರವು ನೀಡುವ ಮೂಲಕ ದೇಶದ ಸರ್ವಾಂಗೀಣ ಬೆಳವಣಿಗೆಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಹುಬ್ಬಳ್ಳಿ-ಧಾರವಾಡಕ್ಕೆ ಭರ್ಜರಿ ಕೊಡುಗೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ 9 ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡಕ್ಕೆ ಭರ್ಜರಿ ಕೊಡುಗೆ ನೀಡಿದೆ. ಹುಬ್ಬಳ್ಳಿ-ಧಾರವಾಡ ಸೇರಿದಂತೆ ಕರ್ನಾಟಕದ ಹಲವು ಮಹಾನಗರಗಳು ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕಂಡುಕೊಂಡಿವೆ. ಹು-ಧಾದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿ, ವಿಮಾನಗಳ ಹಾರಾಟದಲ್ಲಿ ಹೆಚ್ಚಳ, ಇದೀಗ ವಿಮಾನ ನಿಲ್ದಾಣ ಟರ್ಮಿನಲ್ ವಿಸ್ತರಣೆ, ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ಗಳ ಸಂಖ್ಯೆ ಹೆಚ್ಚಿಸಲಾಗಿದ್ದು, 8 ಪ್ಲಾಟ್‌ಫಾರ್ಮ್ಗಳಾಗಿವೆ. ವಿಶ್ವದಲ್ಲೇ ಅತೀ ಉದ್ದನೆಯ ರೈಲ್ವೇ ಪ್ಲಾಟ್‌ಫಾರ್ಮ್ ಹುಬ್ಬ ಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದಲ್ಲಿದೆ. ಬೆಂಗಳೂರು- ಧಾರವಾಡ ನಡುವೆ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿಗೊಳಿಸಿದೆ. ಅವಳಿನಗರದಲ್ಲಿ ಐಐಟಿ, ಐಐಐಟಿ, ಫಾರೆನ್ಸಿಕ್ ವಿಶ್ವವಿದ್ಯಾನಿಲಯ, ಲಲಿತಕಲಾ ಅಕಾಡೆಮಿ, ಅಂದಾಜು 400-450 ಕೋಟಿ ರೂ.ವೆಚ್ಚದಲ್ಲಿ ಸಿಮೆಂಟ್ ರಸ್ತೆಗಳ ನಿರ್ಮಾಣ, ಹುಬ್ಬಳ್ಳಿ-ಧಾರವಾಡ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಆರಂಭಗೊಂಡಿದೆ. ಕೇಂದ್ರ ಸರಕಾರದ ಅನುದಾನದಲ್ಲಿ ಕಿಮ್ಸ್ ಆಸ್ಪತ್ರೆ ಅಭಿವೃದ್ಧಿಗೊಳಿಸಲಾಗಿದ್ದು, ವೈದ್ಯಕೀಯ ಆಧುನಿಕ ಸಲಕರಣೆಗಳನ್ನು ನೀಡಲಾಗಿದೆ. ಹುಬ್ಬಳ್ಳಿ ಹೊರ ವಲಯದಲ್ಲಿ ರಿಂಗ್ ರಸ್ತೆಗಳ ನಿರ್ಮಾಣ ಹೀಗೆ ವಿವಿಧ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕಳೆದ 9 ವರ್ಷಗಳಲ್ಲಿ ಕೈಗೊಳ್ಳಲಾಗಿದೆ ಎಂಬುದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಅನಿಸಿಕೆ. ಅಮರೇಗೌಡ ಗೋನವಾರ