ಉಳ್ಳಾಲ: ಕಾರ್ಯಾಗಾರಗಳು ಅಧ್ಯಾಪಕ ವೃಂದಕ್ಕೆ ಹೊಸ ಅನು ಭವಗಳನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳಿಗೆ ಹೊಸತನವನ್ನು ಕಲಿಸಲು ಸಾಧ್ಯವಾಗುವುದು ಎಂದು ಉಳ್ಳಾಲ ನಗರಸಭೆ ಪೌರಾಯುಕ್ತೆ ವಾಣಿ.ವಿ.ಆಳ್ವ ಹೇಳಿದರು.
ಅವರು ದಕ್ಷಿಣ ಕನ್ನಡ ಭೌತಶಾಸ್ತ್ರ ಉಪ ನ್ಯಾಸಕರ ಸಂಘದ ವತಿಯಿಂದ ಇಲ್ಲಿನ ಕೆ.ಪಾಂಡ್ಯರಾಜ ಬಲ್ಲಾಳ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಭೌತಶಾಸ್ತ್ರ ಉಪನ್ಯಾಸಕರಿಗೆ ಜರಗಿದ ಒಂದು ದಿನದ ಕಾರ್ಯಾಗಾರದಲ್ಲಿ ಪ್ರತಿಭಾ ಪುರ ಸ್ಕಾರ ಮತ್ತು ಸರಕಾರಿ ಪದವಿಪೂರ್ವ ಕಾಲೇಜುಗಳಿಗೆ ಉಚಿತ ಪ್ರಾಯೋಗಿಕ ಉಪಕರಣ ವಿತರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅನುಭವಗಳು ಈಗಿನ ವ್ಯವಸ್ಥೆಗೆ ಸರಿ ಹೊಂದುವುದಿಲ್ಲವೆಂದು ಅರಿತಾಗ, ಈಗಿನ ವಿದ್ಯಾರ್ಥಿಗಳಿಗೆ ಬೇಕಾದ ಜ್ಞಾನವನ್ನು ವೃದ್ಧಿಸಲು ಕಾರ್ಯಾಗಾರಗಳು ಸಹ ಕಾರಿಯಾಗುತ್ತದೆ. ಈ ಮೂಲಕ ಬದುಕಿಗೆ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಕರ್ತವ್ಯದ ಒತ್ತಡಗಳ ನಡುವೆ ಜೀವನಕ್ಕೆ ಅರ್ಥವಿರುವುದಿಲ್ಲ. ಈ ಸಮಯದಲ್ಲಿ ವಿಶೇಷ ತರಬೇತಿಗಳು ಮನಸ್ಸಿಗೆ ಹಿತ ನೀಡುವುದರಿಂದ ಒತ್ತಡಗಳಿಂದ ಹೊರ ಬರಲು ಸಾಧ್ಯವಾಗುತ್ತದೆ ಎಂದರು.
ಕೆ.ಪಾಂಡ್ಯರಾಜ ಬಳ್ಳಾಲ್ ಚ್ಯಾರಿ ಟೇಬಲ್ ಟ್ರಸ್ಟ್ ನ ಮುಖ್ಯಸ್ಥೆ ಡಾ.ಪ್ರಿಯಾ ಬಳ್ಳಾಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಪಾಂಡ್ಯರಾಜ ಬಲ್ಲಾಳ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಶರ್ಮಿಳಾ ಮುಖೇಶ್ ರಾವ್, ದಕ್ಷಿಣ ಕನ್ನಡ ಭೌತ ಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಆನಂದ್, ಉಳ್ಳಾಲ ಪಾಂಡ್ಯರಾಜ ನರ್ಸಿಂಗ್ ಕಾಲೇಜು ವಿಭಾಗ ಮುಖ್ಯಸ್ಥೆ ಕೈನಿ ಸಿಸಿಲಿಯಾ, ದಕ್ಷಿಣ ಕನ್ನಡ ಭೌತಶಾಸ್ತ್ರ ಉಪನ್ಯಾಸಕರ ಸಂಘದ ಕೋಶಾಧಿಕಾರಿ ವಿನ್ಸೆಂಟ್ ಮಸ್ಕರೇನ್, ದಕ್ಷಿಣ ಕನ್ನಡ ಭೌತಶಾಸ್ತ್ರ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಹರೀಶ್ ಸಾತ್ವಿಕ್ ಉಪಸ್ಥಿತರಿದ್ದರು.
ಸಮ್ಮಾನ
ಮಂಗಳೂರು ವಿವಿಯಲ್ಲಿ ಪಿಎಚ್.ಡಿ. ಪದವಿ ಪಡೆದ ಮಂಗಳೂರು ರಥಬೀದಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸರೋಜಿನಿ, ದಕ್ಷಿಣ ಕನ್ನಡ ಭೌತಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಆನಂದ್ ಹಾಗೂ ವಿವಿಧ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಶೇ.100 ಅಂಕ ಪಡೆದ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು.