ಚಿಕ್ಕಬಳ್ಳಾಪುರ: ಹೆಣ್ಣು ಭ್ರೂಣ ಹತ್ಯೆ ಅಮಾನುಷ ಪದ್ಧತಿ. ಇದು ಮಾನವ ಕುಲಕ್ಕೆ ಅಪಾಯಕಾರಿ ಬೆಳವಣಿಗೆ ಎಂದು ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕಿ ಡಾ.ಮಮತಾ ಎಂ.ಎಸ್. ಕಳವಳ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಬುಧವಾರಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕೆಪಿಎಂಇ, ಎಂಟಿಪಿ ಮತ್ತು ಪಿಸಿಪಿಎನ್‌ಡಿಟಿ ಆಕ್ಟ್ ಗಳ ಕುರಿತು ವೈದ್ಯಕೀಯ ವೃತ್ತಿ ನಿರತರಿಗೆ ಜಾಗೃತಿ ಮೂಡಿಸುವಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಭ್ರೂಣಲಿಂಗ ಪತ್ತೆ ಮತ್ತು ಭ್ರೂಣ ಲಿಂಗ ಆಯ್ಕೆ ಮಾಡುವ ಪ್ರಕ್ರಿಯೆಯು ಕಾನೂನು ಬಾಹಿರವಾಗಿದ್ದು, ನೋಂದಾಯಿತ ವೈದ್ಯರು ಭ್ರೂಣಲಿಂಗ ಪತ್ತೆ ಮಾಡಿದಲ್ಲಿ ಮೊದಲಿನ ಅಪರಾಧಕ್ಕೆ3 ವರ್ಷಗಳ ವರೆಗೆ ಜೈಲುಶಿಕ್ಷೆ ಜೊತೆಗೆ 10,000 ರೂ.ಗಳವರೆಗೆ ದಂಢ ವಿಧಿಸಲಾಗುವುದು. ಅಪರಾಧ ದೃಢಪಟ್ಟರೆ ವೈದ್ಯಕೀಯ ವೃತ್ತಿ ಮಾಡದಂತೆ ನಿರ್ಬಂಧ ಹೇರಲಾಗುವುದು. ಮಹಿಳೆ,ಆಕೆಯ ಪತಿ ಹಾಗೂ ಅವರ ಸಂಬಂಧಿಕರು, ಭ್ರೂಣಲಿಂಗಪತ್ತೆಗೆಒತ್ತಾಯಿಸಿದಲ್ಲಿ ಅಂತಹವರಿಗೂ ಕೂಡ ಮೊದಲ ಅಪರಾಧಕ್ಕೆ 3ವರ್ಷಗಳ ಜೈಲು ಶಿಕ್ಷೆ ಹಾಗೂ 50,000 ದಿಂದ 1 ಲಕ್ಷ ರೂ.ವರೆಗೆದಂಢ ವಿಧಿಸಲಾಗುವುದು ಎಂದರು.
ಕೆಪಿಎಂಇ ಉಪನಿರ್ದೇಶಕ ಡಾ.ವಿವೇಕ್ ದೊರೈ ಮಾತನಾಡಿ, ಜಿಲ್ಲೆಯಲ್ಲಿ ಪುರುಷ,ಮಹಿಳೆಯರ ಲಿಂಗಾನುಪಾತ ಪ್ರಮಾಣದಲ್ಲಿ ಬಹಳಷ್ಟು ಅಂತರವಿರುವುದು ಅಪಾಯಕಾರಿ ಬೆಳವಣಿಗೆ ಎಂದರು.ಐಎಂಎ ರಾಜ್ಯ ಅಧ್ಯಕ್ಷ ಡಾ.ವೆಂಕಟಾಚಲಪತಿ ಮಾತನಾಡಿ,ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಯಾವ ರೀತಿ ತಪಾಸಣೆ ಮಾಡಬೇಕು.ತಪಾಸಣೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಕ್ಷಮಪ್ರಾಧಿಕಾರಕ್ಕೆ ತಿಳಿಸಿಕೊಟ್ಟರು.
ಕಾರ್ಯಾಗಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (ಪಿಸಿಪಿಎನ್‌ಡಿಟಿ) ಉಪನಿರ್ದೇಶಕಿ ಡಾ.ಚಂದ್ರಕಲಾ ಜಿ., ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳಾದ ಡಾ.ಚೆನ್ನಕೇಶವರೆಡ್ಡಿ ಇತರರಿದ್ದರು.