ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯದಂತೆ ಹಾಗೂ ಪರಿಸರದ ಮೇಲೆ ಹಾನಿ ಉಂಟಾಗದಂತೆ ಎಚ್ಚರ ವಹಿಸಿ ಸಂಬಂಧಿತ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕು ಎಂದು ಎಸ್ಪಿ ಜಿ. ಕೆ.ಮಿಥುನ್ ಕುಮಾರ್ ಸೂಚಿಸಿದರು.
ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ವತಿಯಿಂದ ಪೊಲೀಸ್ ಇಲಾಖೆ ಸಿಬ್ಬಂದಿಗಳು, ಗಣಿ ಇಲಾಖೆ ಸಿಬ್ಬಂದಿಗಳು ಹಾಗೂ ಸಂಬಂಧಿತ ಅಧಿಕಾರಿ, ಸಿಬ್ಬಂದಿಗಳಿಗೆ ಆಯೋಜಿಸಲಾಗಿದ್ದ ಗಣಿಗಾರಿಕೆಯಲ್ಲಿ ಕೊರೆಯುವಿಕೆ ಮತ್ತು ಸ್ಫೋಟಕ ಬಳಕೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಗಣಿಗಾರಿಕೆಯಲ್ಲಿ ಕೊರೆಯುವಿಕೆ ಮತ್ತು ಸ್ಫೋಟಕಗಳ ಬಳಕೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಹಾಗೂ ಅಕ್ರಮ ಗಣಿಗಾರಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಸಂಬಂಧಿತ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಕೈಗೊಳ್ಳಬೇಕಾದ ಕ್ರಮಗಳ ಅರಿವು ಮೂಡಿಸಲು ಈ ಕಾರ್ಯಾಗಾರ ಆಯೋಜಿಸಲಾಗಿದೆ
ಮಾನದಂಡ ಪಾಲಿಸಿ: ಗಣಿಗಾರಿಕೆ ನಡೆಸಲು ಹಾಗೂ ಗಣಿಗಾರಿಕೆಯಿಂದ ಪರಿಸರದ ಮೇಲೆ ಉಂಟಾಗುವ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಅನುಸರಿಸಬೇಕಾದ ಸುರಕ್ಷಿತ ವಿಧಾನಗಳು, ಗಣಿಗಾರಿಕೆಯಲ್ಲಿ ಕೊರೆಯುವ ವಿಧಾನಗಳು ಮತ್ತು ಸ್ಫೋಟಕ ಬಳಕೆ ವಿಧಾನಗಳು ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಸರ್ಕಾರದ ಜಾರಿಗೆ ಗಣಿಗಾರಿಕೆ ಕಾಯ್ದೆನ್ವಯ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಹಾಗೂ ವಿಧಿಸಲಾಗಿರುವ ಮಾನದಂಡಗಳು ಮತ್ತು ಅನುಸರಿಸಬೇಕಾದ ಕ್ರಮಗಳ ಕುರಿತು ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.
ಗಣಿಗಳ ಸುರಕ್ಷತೆಯ ನಿರ್ದೇಶನಾಲಯದ ವೇಣುಗೋಪಾಲ್ ಮಾತನಾಡಿ, ಗಣಿಗಾರಿಕೆ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅರ್ಹರಿರುವವರಿಗೆ ಮಾತ್ರ ಗಣಿ ಮತ್ತು ಭೂ ವಿಜ್ಞಾನ ಸಂಸ್ಥೆಯಿಂದ ಪರವಾನಗಿ ಪತ್ರ ನೀಡಲಾಗುತ್ತದೆ. ಗಣಿಗಾರಿಕೆ ಪ್ರದೇಶದಲ್ಲಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬ ಕಾರ್ಮಿಕನ ಸುರಕ್ಷತೆ ಗಣಿಗಾರಿಕೆ ಸಂಸ್ಥೆಯ ಮಾಲೀಕನ ಹೊಣೆಗಾರಿಕೆಯಾಗಿರುತ್ತದೆ.
ಪಾಲನೆ ಮಾಹಿತಿ: ಯಾವುದೇ ಅನಿರೀಕ್ಷಿತ ಘಟನೆ ನಡೆದರೆ ಅದಕ್ಕೆ ಗಣಿಗಾರಿಕೆಯ ಮಾಲೀಕ, ಮೇಲ್ವಿಚಾರಕ, ಮ್ಯಾನೇಜರ್‌ಗಳು ಜವಾಬ್ದಾರರಾಗಿರುತ್ತಾರೆ. ಒಟ್ಟಾರೆಯಾಗಿ ಗಣಿಗಾರಿಕೆ ಮಾಡಬೇಕಾದರೆ ಯಾವ ರೀತಿ ಅರ್ಹತೆ ಪತ್ರ ಪಡೆಯಬೇಕು,ಯಾವ ರೀತಿ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳಬೇಕು,ಕೊರೆಯುವ ವೇಳೆ ಅನುಸರಿಸಬೇಕಾದ ಕ್ರಮ ಮತ್ತು ಸ್ಫೋಟಕ ವೇಳೆ ಬಳಕೆ ಮಾಡಬೇಕಾದ ವಿಧಾನಗಳ ಬಗ್ಗೆ ವಿವರಿಸಿದರು. ಅಧಿಕಾರಿಗಳು ಸಿಬ್ಬಂದಿಗಳು ಮತ್ತು ಪೊಲೀಸರು ಗಣಿಗಾರಿಕೆ ಸಸ್ಥಳಗಳಿಗೆ ಭೇಟಿ ನೀಡಿದಾಗ ಪರಿಶೀಲಿಸಬೇಕಾದ ದಾಖಲೆಗಳ ಬಗ್ಗೆ ಮಾಹಿತಿ ನೀಡಿದರು.
ಇದನ್ನೂ ಓದಿ : ತಹಶೀಲ್ದಾರ್ ಗಂಗಪ್ಪ ಸುತ್ತ ಅವ್ಯವಹಾರದ ಹುತ್ತ!
ಕಾರ್ಯಗಾರದಲ್ಲಿ ಡಿ.ವೈ.ಎಸ್.ಪಿ ರವಿಶಂಕರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ನಂಜುಂಡಸ್ವಾಮಿ ಸೇರಿದಂತೆ ತಾಲೂಕಿನ ಎಲ್ಲಾ ಪೊಲೀಸ್ ಅಧಿಕಾರಿಗಳು,ಸಿಬ್ಬಂದಿ ಉಪಸ್ಥಿತರಿದ್ದರು.