ಸಿರುಗುಪ್ಪ: ಪ್ರತಿ ಗ್ರಾಮೀಣ ಕುಟುಂಬಗಳಿಗೆ ಕ್ರಿಯಾತ್ಮಕವಾದ ನಲ್ಲಿ ಸಂಪರ್ಕ ಕಲ್ಪಿಸುವುದು, ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರೊದಗಿಸುವುದು ಜಲ್‌ಜೀವನ್ ಯೋಜನೆಯ ಮುಖ್ಯ ಉದ್ದೇಶ ಎಂದು ಜಿಪಂ ಸಂಯೋಜಕ ಹುಸೇನ್‌ಸಾಬ್ ತಿಳಿಸಿದರು. ಕರೂರು ಗ್ರಾಪಂ ಸಭಾಂಗಣದಲ್ಲಿ ಜಿಪಂ ಬಳ್ಳಾರಿ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಜಲ್‌ಜೀವನ್ ಮಿಷನ್ ಯೋಜನೆ ಅನುಷ್ಠಾನ ಕುರಿತು ಇಲಾಖೆ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅ ಧಿಕಾರಿ, ಸಿಬ್ಬಂದಿ, ಚುನಾಯಿತ ಪ್ರತಿನಿಧಿಗಳು, ಗ್ರಾಮ ನೀರು ನೈರ್ಮಲ್ಯ ಸಮಿತಿ ಸದಸ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ನೀರು ಸರಬರಾಜು ಮೂಲ ಸೌಕರ್ಯಗಳ ರಚನೆ ಮಾಡುವುದರ ಮೂಲಕ ಪ್ರತಿ ಗ್ರಾಮೀಣ ಕುಟುಂಬಕ್ಕೆ 2024ರ ವೇಳೆಗೆ ಕ್ರಿಯಾತ್ಮಕ ನಳ ಸಂಪರ್ಕ ಕಲ್ಪಿಸುವುದು ಮತ್ತು ಗುಣಮಟ್ಟದ ನೀರನ್ನು ನಿಯಮಿತವಾಗಿ ಲಭ್ಯವಾಗುವಂತೆ ಮಾಡುವುದು, ಸಮುದಾಯದಲ್ಲಿ ನೀರಿನ ಮಹತ್ವ ಕುರಿತು ಜಾಗೃತಿ ಮೂಡಿಸುವುದು ಗ್ರಾಮೀಣ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಭಾಗವಹಿಸುವ ಮೂಲಕ ಶುದ್ಧ ಕುಡಿಯುವ ನೀರಿನ ಭದ್ರತೆಗಾಗಿ ದೀರ್ಘಕಾಲಿನ ಯೋಜನೆ ರೂಪಿಸುವುದು, ಶಾಲೆಗಳು, ಅಂಗನವಾಡಿ ಕೇಂದ್ರಗಳು, ಸರ್ಕಾರಿ ಕಟ್ಟಡಗಳು, ಆರೋಗ್ಯ ಕೇಂದ್ರ ಮತ್ತು ಸಮುದಾಯ ಕಟ್ಟಡಗಳಿಗೆ ಕ್ರಿಯಾತ್ಮಕ ನಳಸಂಪರ್ಕ ಒದಗಿಸುವುದು, ಸುರಕ್ಷಿತ ಕುಡಿಯುವ ನೀರಿನ ವಿವಿಧ ಅಂಶಗಳು ಮತ್ತು ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. ಗ್ರಾಪಂ ಅಧ್ಯಕ್ಷೆ ಚಂದ್ರಕಲಾ, ಪಿಡಿಒ ಶಿವಪ್ಪ ಮತ್ತು ಗ್ರಾಪಂ ಸದಸ್ಯರು, ಸಾರ್ವಜನಿಕರು ಇದ್ದರು