ರಬಕವಿ-ಬನಹಟ್ಟಿ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಘಟ್ಟವಾಗಿದೆ. ಮುಂಬರುವ 40 ದಿನಗಳ ವಿದ್ಯಾರ್ಥಿಗಳು ಜೀವನದಲ್ಲಿ ಬಹಳಷ್ಟು ಮಹತ್ವದ ದಿನಗಳಾಗಿವೆ. ಆದ್ದರಿಂದ ಗುರಿ ಮುಟ್ಟಲು ವಿದ್ಯಾರ್ಥಿಗಳು ಸಂಕಲ್ಪ ಮಾಡುವುದರ ಜೊತೆಗೆ ಸತತ ಪರಿಶ್ರಮವನ್ನು ಪಡಬೇಕಾಗಿದೆ. ಇವೆರಡರಿಂದ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಮುಧೋಳದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಎಂ. ಮುಲ್ಲಾ ತಿಳಿಸಿದರು.
ಅವರು ಮಂಗಳವಾರ ತಾಲ್ಲೂಕಿನ ಹೊಸೂರಿನ ಪದ್ಮಾವತಿ ಅಂತರರಾಷ್ಟ್ರೀಯ ಶಾಲೆಯಲ್ಲಿ ರಬಕವಿ ಬನಹಟ್ಟಿ ಹಾಗೂ ಮುಧೋಳದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನಕ್ಕೆ ನ್ಯಾಯ ಒದಗಿಸಿ ಕೊಡುವ ನಿಟ್ಟಿನಲ್ಲಿ ಗಮನ ನೀಡಬೇಕು. ಪಾಲಕರಿಗೆ ಉತ್ತಮ ಮಕ್ಕಳವಾಗಿ, ಶಿಕ್ಷಕರಿಗೆ ಉತ್ತಮ ವಿದ್ಯಾರ್ಥಿಯಾಗಿ, ಸಮಾಜಕ್ಕೆ ಮತ್ತು ದೇಶಕ್ಕೆ ಉತ್ತಮ ಪ್ರಜೆಯಾಗಬೇಕಾಗಿದೆ. ಒಟ್ಟಿನಲ್ಲಿ ಈ ಮಹತ್ವದ ಘಟ್ಟಿನಲ್ಲಿ ಮಕ್ಕಳು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಪಡೆದುಕೊಂಡ ಉತ್ತಮ ಫಲಿತಾಂಶ ಪಡೆದುಕೊಂಡರೆ ಇಲಾಖೆ ಕೈಗೊಂಡ ಈ ಕಾರ್ಯ ಫಲದಾಯಕವಾಗುತ್ತದೆ ಎಂದು ಎಸ್. ಎಂ. ಮುಲ್ಲಾ ತಿಳಿಸಿದರು.
ಇದೇ ಸಂದರ್ಭದಲ್ಲಿ ಗೋಕಾಕದ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಿಗಾರ ವಿಶೇಷ ಉಪನ್ಯಾಸ ನೀಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ಭಯ ಬೇಡ, ಮನುಷ್ಯ ಹುಟ್ಟಿದಾಗಿನಿಂದ ಅನೇಕ ಪರೀಕ್ಷೆಗಳನ್ನು ಎದುರಿಸುತ್ತಾನೆ. ವಿದ್ಯಾರ್ಥಿಗಳ ಮೇಲೆ ಪಾಲಕರು, ಶಿಕ್ಷಕರು ಮತ್ತು ಸಮಾಜದವರು ಸಾಕಷ್ಟು ಭರವಸೆಯನ್ನು ಇಟ್ಟಿರುತ್ತಾರೆ. ಆದ್ದರಿಂದ ಯಾವುದೆ ಒತ್ತಡಗಳಿಗೆ ಒಳಗಾಗದೆ ಧೈರ್ಯವಾಗಿ ಪರೀಕ್ಷೆ ಎದುರಿಸುವುದರಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದರು.
ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ನೇಮಗೌಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ ವಂದಾಲ, ರಬಕವಿ ಬನಹಟ್ಟಿ ತಾಲ್ಲೂಕು ನೋಡಲ್ ಅಧಿಕಾರಿ ಶ್ರೀಶೈಲ ಬುರ್ಲಿ, ಮುಧೋಳ ತಾಲ್ಲೂಕು ನೋಡಲ್ ಅಧಿಕಾರಿ ಎಸ್.ಡಿ. ನೀಲಗುಂದ, ಸಂಸ್ಥೆಯ ಆಡಳಿತಾಧಿಕಾರಿ ಭಾರತಿ ತಾಳಿಕೋಟಿ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಬಿ.ಎಸ್.ಕಡಕೋಳ, ಬಾಬಾಗೌಡ ಪಾಟೀಲ, ಎಚ್. ಪ್ರತಾಪ, ಪ್ರಾಚಾರ್ಯ ಬಸವರಾಜ ಕಲಾದಗಿ, ಶ್ರೀಶೈಲ ಕುಂಬಾರ ಇದ್ದರು.