Advertisement

ದಾನದಲ್ಲಿ ಧೀಮಂತ ಸಾಹಿತಿಗಳ ಕೃತಿಗಳು

11:55 AM Nov 12, 2018 | Team Udayavani |

ಬೆಂಗಳೂರು: ಓದುಗರಲ್ಲಿ ಸಾಹಿತ್ಯಭಿರುಚಿ ಹುಟ್ಟಿಸುವ ಜತೆಗೆ ಸಾರ್ವಜನಿಕ ಗ್ರಂಥಾಲಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ರೂಪಿಸಿರುವ “ಪುಸ್ತಕ ದಾನ ಅಭಿಯಾನ’ಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

Advertisement

ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ, ಶೂದ್ರ ಶ್ರೀನಿವಾಸ್‌, ಡಾ.ಎಸ್‌.ಎಸ್‌.ಅಂಗಡಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್‌ ಸೇರಿದಂತೆ ಸಾಹಿತ್ಯ ಲೋಕದ ಹಲವರು ಪುಸ್ತಕಗಳನ್ನು ದಾನವಾಗಿ ನೀಡಿ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.

ಜತಗೆ ನಗರದ ಗರುಡ ಮಾಲ್‌ ಮತ್ತು ರಾಜರಾಜೇಶ್ವರಿ ನಗರದ ಗೋಪಾಲನ್‌ ಅರ್ಕೇಡ್‌ ಮಾಲ್‌ನಲ್ಲಿ ನಡೆದ ಪುಸ್ತಕ ದಾನ ಅಭಿಯಾನದಲ್ಲಿ ಸುಮಾರು ಏಳು ನೂರು ಪುಸ್ತಕಗಳನ್ನು ದಾನ ರೂಪದಲ್ಲಿ ಸಾರ್ವಜನಿಕರು ಗ್ರಂಥಾಲಯ ಇಲಾಖೆಗೆ ನೀಡಿದ್ದಾರೆ.

ಕಾದಂಬರಿಕಾರ ಡಾ.ಯು.ಆರ್‌.ಅನಂತಮೂರ್ತಿ ಅವರ “ಯುಗಪಲ್ಲಟ, ದೇವನೂರು ಮಹಾದೇವರ “ಎದೆಗೆ ಬಿದ್ದ ಅಕ್ಷರ, ಜಿ.ಪಿ.ರಾಜರತ್ನಂ ಅವರ “ರಾಬಿನ್‌ ಹುಡ್‌, ಬೆಳೆಗೆರೆ ಕೃಷ್ಣಶಾಸಿಗಳ “ಸಾಹಿತಿಗಳ ಸ್ಮತಿ, ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ “ಕುವೆಂಪು ನಾಟಕಗಳ ಅಧ್ಯಯನ’ ಕೆ.ವಿ.ತಿರುಮಲೇಶ್‌ ಅವರ “ಜ್ಞಾನ-ವಿಜ್ಞಾನ ತತ್ವಜ್ಞಾನ’ ಸೇರಿದಂತೆ ನಾಡಿನ ಖ್ಯಾತ ಕಾದಂಬರಿಕಾರರ ಮತ್ತು ಸಾಹಿತಿಗಳ ಕೃತಿಗಳು ದಾನ ರೂಪದಲ್ಲಿ ಕೇಂದ್ರ ಗ್ರಂಥಾಲಯ ಶಾಖೆ ಸೇರಿವೆ.

ಸ್ಪರ್ಧಾತ್ಮಕ ಪುಸ್ತಕಗಳ ದಾನ:  ನ.5 ರಂದು ಗರುಡ ಮಾಲ್‌ನಲ್ಲಿ ನಡೆದ ಪುಸ್ತಕದಾನದ ಅಭಿಯಾನದಲ್ಲಿ ಮೂರು ನೂರು ಕೃತಿಗಳು ಮತ್ತು ನ. 13 ರಂದು ರಾಜರಾಜೇಶ್ವರಿ ನಗರ ವ್ಯಾಪ್ತಿಯ ಗೋಪಾಲನ್‌ ಮಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿಯಾನದಲ್ಲಿ ವಿವಿಧ ಲೇಖಕರ ಮತ್ತು ಕವಿಗಳ ಸುಮಾರು ನಾಲ್ಕು ನೂರು ಕೃತಿಗಳನ್ನು ಸಾರ್ವಜನಿಕರು ನೀಡಿದ್ದಾರೆ. ಇದರಲ್ಲಿ ಕೆಎಎಸ್‌, ಐಎಎಸ್‌, ರೈಲ್ವೆ, ಎಫ್ಡಿಎ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪುಸ್ತಕಗಳ ಜತೆಗೆ ವಿಜ್ಞಾನ- ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವು ಪುಸ್ತಕಗಳು ಕೂಡ ಸೇರಿವೆ.  

Advertisement

ಪ್ರಕಾಶಕರಿಂದಲೂ ದಾನ: ಸಾರ್ವಜನಿಕ ಗ್ರಂಥಾಲಯ ಇಲಾಖೆ ರೂಪಿಸಿರುವ ಪುಸ್ತಕದಾನ ಅಭಿಯಾನಕ್ಕೆ ನಾಡಿನ ಪುಸ್ತಕ ಪ್ರಕಾಶಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಪ್ನ ಬುಕ್‌ ಹೌಸ್‌ನ, ಅಂಕಿತ ಪ್ರಕಾಶ, ಅಕ್ಷರ ಪ್ರಕಾಶನ, ನವಪುಸ್ತಕ ಪ್ರಕಾಶನ ಸೇರಿದಂತೆ ಹಲವು ಪುಸ್ತಕ ಪ್ರಕಾಶಕರು ನೂರಕ್ಕೂ ಅಧಿಕ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆಗೆ ನೀಡಿದ್ದಾರೆ.

ಸಾಹಿತ್ಯವಲಯ ಕೂಡ ಪುಸ್ತಕದಾನ ಅಭಿಯಾನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದು, ಹಲವು ಸಾಹಿತಿಗಳು ತಮ್ಮಲ್ಲಿರುವ ಪುಸ್ತಕಗಳನ್ನು ದಾನವಾಗಿ ನೀಡಲು ಮುಂದೆ ಬಂದಿದ್ದಾರೆ ಎಂದು ಗ್ರಂಥಾಲಯ ಇಲಾಖೆಯ ಹಿರಿಯ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ನಾನೂ ಪುಸ್ತಕ ದಾನ ಮಾಡುತ್ತೇನೆ: ಗ್ರಂಥಾಲಯ ಇಲಾಖೆ ರೂಪಿಸಿರುವ ಈ ಕಾರ್ಯಕ್ರಮ ಹೆಮ್ಮಪಡುವಂತಹದ್ದಾಗಿದೆ. ಇದಕ್ಕೆ ಇಡೀ ಸಾಹಿತ್ಯ ಲೋಕವೆ  ಕೈಜೋಡಿಸಬೇಕು. ಹಲವರು ಪುಸ್ತಕಗಳನ್ನು ಓದಿ ಮನೆಯಲ್ಲಿ ಹಾಗೇ ಇಟ್ಟಿರುತ್ತಾರೆ. ಇನ್ನೂ ಕೆಲವರು ರದ್ದಿಗೆ ಹಾಕುತ್ತಾರೆ. ಇಂತವರು ಪುಸ್ತಕಗಳನ್ನು ಮಾರಾಟಮಾಡದೇ ದಾನ ರೂಪದಲ್ಲಿ ನೀಡಬೇಕು ಎಂದು ದಲಿತ ಕವಿ ಸಿದ್ಧಲಿಂಗಯ್ಯ ಹೇಳುತ್ತಾರೆ. 

ಒಂದು ಲಕ್ಷ ಪುಸ್ತಕ ದಾನ: ಕನ್ನಡ ಮತ್ತು ಸಂಸ್ಕತಿ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಬರುವ ಪ್ರಾಧಿಕಾರಗಳು ಪ್ರಕಟಿಸಿರುವ ಸುಮಾರು ಒಂದು ಲಕ್ಷ ಪುಸ್ತಕಗಳನ್ನು ಈಗಾಗಲೇ ಗ್ರಂಥಾಲಯ ಇಲಾಖೆಗೆ ನೀಡಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ವಸುಂಧರಾ ಭೂಪತಿ ಅವರು ಕೂಡ ಪ್ರಾಧಿಕಾರ ಪ್ರಕಟಿಸಿದ ನಲವತ್ತೈದು ಸಾವಿರ ಪುಸ್ತಕಗಳನ್ನು ನೀಡಿದ್ದಾರೆ.

ಜತಗೆ ಕುವೆಂಪು ಭಾಷಾ ಪ್ರಾಧಿಕಾರ ಕೂಡ ತಾನು ಪ್ರಕಟಿಸಿದ ಮೂವತೈದು ಸಾವಿರ ಪುಸ್ತಕಗಳನ್ನು ಸಚಿವೆ ಜಯಮಾಲ ಅವರ ಸಮ್ಮುಖದಲ್ಲಿಯೇ ಗ್ರಂಥಾಲಯಕ್ಕೆ ನೀಡಲು ಸಮ್ಮತಿಸಿದೆ. ಇದೇ ಹಾದಿಯಲ್ಲಿ ಕಸಾಪ ಕೂಡ ಸಾಗಿದ್ದು, ಕಸಾಪ ಪ್ರಕಟಿಸಿರುವ ಸುಮಾರು ಐದು ಸಾವಿರ ಪುಸ್ತಕಗಳನ್ನು ದಾನ ಮಾಡುವುದಾಗಿ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್‌ ಹೇಳಿದ್ದಾರೆ.

ಗ್ರಂಥಾಲಯ ಇಲಾಖೆ ರೂಪಿಸಿರುವ ಪುಸ್ತಕ ದಾನ ಅಭಿಯಾನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಅಲ್ಲದೆ ಸಾವಿರಾರು ಪುಸ್ತಕಗಳು ದಾನ ರೂಪದಲ್ಲಿ ಬಂದಿವೆ. ಹೀಗಾಗಿ ಈ ಕಾರ್ಯಕ್ರಮವನ್ನು ರಾಜ್ಯವ್ಯಾಪಿ ವಿಸ್ತರಣೆ ಮಾಡಲಾಗುವುದು.
-ಡಾ.ಸತೀಶ್‌ ಎಸ್‌.ಹೊಸಮನಿ, ಗ್ರಂಥಾಲಯ ಇಲಾಖೆ ನಿರ್ದೇಶಕ

ನಾನು ಕೂಡ ನನ್ನಲ್ಲಿರುವ ಅನೇಕ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆಗೆ ದಾನ ರೂಪದಲ್ಲಿ ನೀಡಿ ಓದುಗರನ್ನು ಪ್ರೋತ್ಸಾಹಿಸಿದ್ದೇನೆ
-ಸಿದ್ದಲಿಂಗಯ್ಯ, ಕವಿ, ಸಾಹಿತಿ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next