ಚನ್ನರಾಯಪಟ್ಟಣ/ಶ್ರವಣಬೆಳಗೊಳ: ಭಗವಾನ್ ಬಾಹುಬಲಿಗೆ ನಡೆದ ಶತಮಾನದ 2ನೇ ಮಹಾ ಮಜ್ಜನಕ್ಕೆ ಅಂದಿನ ರಾಜ್ಯ ಸರ್ಕಾರ ಹಲವು ಕೊಡುಗೆ ನಿಡಿದ್ದು, ಅದರಲ್ಲಿ ಪ್ರಾಕೃತ ವಿಶ್ವದ್ಯಾಲಯ ಪ್ರಮಖವಾದುದ್ದು ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷ ಸಮೀಪಿಸುತ್ತಿದ್ದರೂ ಶೇ.40ರಷ್ಟು ಮಾತ್ರ ಮುಕ್ತಾಯವಾಗಿದೆ.
ಶ್ರವಣಬೆಳಗೋಳದ 88ನೇ ಮಹಾಮಸ್ತಕಾ ಭಿಷೇಕದ ಸ್ಮರಣಾರ್ಥ ಶಾಶ್ವತ ಯೋಜನೆಗಳ ಪೈಕಿ ಪ್ರಾಕೃತ ವಿಶ್ವವಿದ್ಯಾಲಯ ನಿರ್ಮಾಣ ಪ್ರಮುಖ ವಾಗಿದ್ದು, ಪ್ರಾಕೃತ ಭಾಷೆಯ ಅಧ್ಯಯನ ಹಾಗೂ ಜೈನ ಸಾಹಿತ್ಯ ಪ್ರಕರಣಕ್ಕಾಗಿ ರೂಪುಗೊಳ್ಳುತ್ತಿರುವ ದೇಶದ ಪ್ರಥಮ ವಿಶ್ವ ವಿದ್ಯಾಲಯ ಎಂಬ ಹೆಗ್ಗಳಿಕೆಗೆ ಶ್ರವಣಬೆಳಗೊಳದ ಹೊರ ವಲಯದಲ್ಲಿ ನಿರ್ಮಾಣ ಆಗುತ್ತಿರುವ ಪ್ರಾಕೃತ ವಿವಿ ಧವಲತೀರ್ಥಂ ಪಾತ್ರವಾಗಲಿದೆ.
36 ಎಕರೆ ಮೀಸಲು: ಶ್ರವಣಬೆಳಗೊಳ-ಹಿರೀಸಾವೆ ರಾಜ್ಯ ಹೆದ್ದಾರಿ ಸಮೀಪ ಶ್ರವಣಬೆಳಗೊಳದಿಂದ 6 ಕಿ.ಮೀ. ದೂರದಲ್ಲಿರುವ ಪ್ರಾಕೃತ ಸಂಶೋಧನಾ ಕೇಂದ್ರದ ಹಿಂಭಾಗದಲ್ಲಿ ಸುಮಾರು 36 ಎಕರೆ ಪ್ರದೇಶದಲ್ಲಿ ಪ್ರಾಕೃತ ವಿಶ್ವವಿದ್ಯಾಲಯ ಧವಲ ತೀರ್ಥಂ ಅನ್ನು ನಿರ್ಮಾಣ ಮಾಡಲಾಗುತ್ತಿದ್ದು ಆಮೆ ವೇಗದಲ್ಲಿ ಕಾಮಗಾರಿಗಳು ನಡೆಯುತ್ತಿದೆ.
21 ಕೋಟಿ ಅನುದಾನ ಬಿಡುಗಡೆ: ಪ್ರಾಕೃತ ವಿವಿ ಕ್ಯಾಂಪಸ್ ನಿರ್ಮಾಣಕ್ಕೆ 64 ಕೋಟಿ ರೂ. ಅಂದಾಜಿನ ಪೈಕಿ ರಾಜ್ಯ ಸರ್ಕಾರ ಕಳೆದ ಒಂದೂವರೆ ವರ್ಷದ ಹಿಂದೆಯೇ 21 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಕ್ಯಾಂಪಸ್ ನಿರ್ಮಾಣದ ಮೊದಲ ಹಂತದಲ್ಲಿ ಸುಸಜ್ಜಿತ ಗ್ರಂಥಾಲಯ, ಬೋಧನಾ ವಿಭಾಗ, ಬಾಲಕ ಹಾಗೂ ಬಾಲಕಿಯರ ಹಾಸ್ಟೆಲ್ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಈಗಿರುವ ಪ್ರಾಕೃತ ಸಂಶೋಧನಾ ಕೇಂದ್ರವನ್ನು ಆಡಳಿತ ಕಚೇರಿಯನ್ನೇ ವಿವಿಯ ಆಡಳಿತ ವಿಭಾಗವಾಗಿ ಬಳಸಿಕೊಳ್ಳುವ ಉದ್ದೇಶವಿದೆ.
ಶ್ರೀಗಳ ಕನಸು ಈಡೇರಿದೆ: ಜೈನ ಧರ್ಮದ ಬಹುಪಾಲು ಸಾಹಿತ್ಯ ಪ್ರಾಕೃತ ಭಾಷೆಯಲ್ಲಿದೆ. ಹಾಗಾಗಿ ಪ್ರಾಕೃತ ವಿಶ್ವದ್ಯಾನಿಲಯ ಆರಂಭಿಸಬೇಕೆಂದು ಶ್ರವಣಬೆಳಗೊಳ ಜೈನ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೂರು ದಶಕದ ಕನಸು, ಆ ಕನಸಿನ ಸಾಕಾರಕ್ಕೆ 1993ರ ಮಹಾ ಮಸ್ತಕಾಭಿಷೇಕದ ಸಂದರ್ಭದಲ್ಲಿ ಅಂದಿನ ಮುಖ್ಯ ಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರು ನಾಂದಿ ಹಾಡಿದರು. ಅಂದು ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಆರಂಭವಾಯಿತು. ಈಗ ಪ್ರಾಕೃತ ವಿವಿ ನಿರ್ಮಾಣವಾಗುತ್ತಿರುವುದು ಶ್ರೀಗಳ ಕನಸು ಈಡೇರಿದಂತಾಗಿದೆ.
ಆಸಕ್ತಿ ತೋರಿಸದ ಸರ್ಕಾರಗಳು: ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಲಾನ್ಯಾಸ ನೆರವೇರಿಸಿದ್ದರು. ಆದರೆ ಕಾಮಗಾರಿ ಆರಂಭವಾಗುವುದು ತಡವಾಯಿತಲ್ಲದೇ ಯೋಜನೆ ಕೈತಪ್ಪುವ ಹಂತಕ್ಕೂ ಬಂದು ತಲುಪಿತ್ತು.ಆದರೆ ಚಾರುಶ್ರೀಗಳ ಸತತ ಒತ್ತಡದಿಂದ ಅನುದಾನ ಬಿಡುಗಡೆ ಮಾಡಿ 2018ರ ಮಹಾಮಸ್ತಕಾಭಿಷೇಕ ವೇಳೆ ಕಾಮಗಾರಿಗೆ ಚಾಲನೆ ದೊರೆಯಿತಾದವರು ಕಾಮಗಾರಿ ಪ್ರಾರಂಭ ಮಾಡುವಲ್ಲಿ ಆಡಳಿತಾರುಢ ಸರ್ಕಾರಗಳು ಆಸಕ್ತಿ ತೋರಲಿಲ್ಲ.
ರೇವಣ್ಣ ಮನಸ್ಸು ಮಾಡಲಿಲ್ಲ: ಜಿಲ್ಲೆಯ ಪ್ರಭಾವಿ ರಾಜಕಾರಣಿ ರಾಜ್ಯದ ಸೂಪರ್ ಸಿಎಂ ಎಂಬ ಖ್ಯಾತಿ ಪಡೆದಿದ್ದ ಎಚ್.ಡಿ.ರೇವಣ್ಣ ಲೋಕೋಪಯೋಗಿ ಮಂತ್ರಿಯಾಗಿದ್ದರೂ ಕಾಮಗಾರಿಯನ್ನು ಶರವೇಗದಲ್ಲಿ ಮಾಡಿಸಲು ವಿಫಲರಾದರು. ಅವರ ಆಡಳಿತದ ಅವಧಿಯಲ್ಲಿ ಪ್ರಾಕೃತ ವಿವಿ ಕಾಮಗಾರಿ ಬಗ್ಗೆ ಶ್ರವಣಬೆಳಗೊಳದಲ್ಲಿ ಲೋಕೋಪಯೋಗಿ ಅಧಿಕಾರಿಗಳ ಸಭೆ ನಡೆಸಲಿಲ್ಲ. ರೇವಣ್ಣ ಒಮ್ಮೆ ಅಧಿಕಾರಿಗಳಿಗೆ ಆದೇಶಿಸಿದ್ದರೆ ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣವಾಗುತ್ತಿತ್ತು ಎಂದು ರಾಜಕೀಯ ಮುಖಂಡರು ಅಭಿಪ್ರಾಯಪಡುತ್ತಾರೆ.
ಅಧಿಕಾರ ಅಸಡ್ಡೆ: ಪ್ರಾಕೃತ ವಿಶ್ವ ವಿದ್ಯಾಲಯ ಧವಲತೀರ್ಥಂ ಕಾಮಗಾರಿಯನ್ನು ಮನಸೋ ಇಚ್ಛೆ ಮಾಡಲಾಗುತ್ತಿಲ್ಲ. ಕಳಪೆ ಕಾಮಗಾರಿ ಆಗಬಾರದೆಂದು ಪ್ರತಿ ಹಂತದ ಕಾಮಗಾರಿಯನ್ನು ಜೈನ ಮಠದ ಅಧಿಕಾರಿಗಳು ಮುಂದೆ ನಿಂತು ನೋಡುವುದರಿಂದ ಗುತ್ತಿಗೆದಾರ ಗುಣಮಟ್ಟದಲ್ಲಿ ಕೆಲಸ ಮಾಡಬೇಕಿದೆ. ಗುಣಮಟ್ಟದ ಕೆಲಸ ಮಾಡುವುದರಿಂದ ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳಿಗೆ ಮಾಮೂಲಿ ದೊರೆಯುವುದಿಲ್ಲ ಹಾಗಾಗಿ ಅಧಿಕಾರಿಗಳು ಮುತುವರ್ಜಿ ವಹಿಸದೇ ಅಸಡ್ಡೆ ತೋರುತ್ತಿದ್ದಾರೆ.
ಕಾರ್ಯ ಪ್ರಗತಿ: ವಿವಿಯ ಗ್ರಂಥಾಲಯ ಶ್ರುತ ಬಂಡಾರ ನೆಲ ಅಂತಸ್ತು 20,575 ಚದರ ಅಡಿ ಮೊದಲ ಅಂತಸ್ತು 7,600 ಅಡಿ ಒಟ್ಟು 28,175 ಚದರಡಿ ಇದ್ದು ಕೇವಲ ಪಿಲ್ಲರ್ ಮಾತ್ರ ಹಾಕಲಾಗಿದೆ. ಬೋಧನಾ ಕೊಠಡಿಗಳು ನೆಲ ಅಂತಸ್ತು, ಮೊದಲ ಹಾಗೂ ಎರಡನೇ ಅಂತಸ್ತು ತಲಾ 12,500 ಅಡಿ ಇದ್ದು ಕೇವಲ ಪಿಲ್ಲರ್ ಮಾತ್ರ ಹಾಕಲಾಗಿದೆ. ಬಾಲಕರ ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಮೂರು ಅಂತಸ್ತು ನಿರ್ಮಾಣ ಮಾಡಬೇಕಿದ್ದು ಕೇವಲ ನೆಲ ಅಂತಸ್ತು ಮಾತ್ರ ನಿರ್ಮಾಣ ಮಾಡಲಾಗಿದೆ. ಅಡುಗೆ ಮನೆ ನೆಲ ಹಾಗೂ ಮೊದಲ ಅಂತಸ್ತು ಕಟ್ಟಡ ನಿರ್ಮಿಸಬೇಕಿದ್ದು ನೆಲ ಅಂತಸ್ತಿನ ಕಾಮಗಾರಿ ಮುಕ್ತಾಯವಾಗಿದ್ದು ಮೊಲದ ಅಂತಸ್ತಿನ ಕಾಮಗಾರಿ ಪ್ರಾರಂಭಿಸಬೇಕಿದೆ.
ಮೂಲ ಸೌಕರ್ಯಗಳಿಗೆ ಯೋಜನೆ ತಯಾರಾಗಿಲ್ಲ: ಹಾಸನ ಜಿಲ್ಲೆಯ ಪ್ರಥಮ ವಿವಿ ಇದಾಗಿದೆ. ಕಾಮಗಾರಿ ನಡೆಯುತ್ತಿದೆ ಆದರೆ ವಿವಿ ಉದ್ಘಾಟನೆ ವೇಳೆಗೆ ವಿವಿ ಕ್ಯಾಂಪಸ್‌ಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ದೀಪ ಸೇರಿದತೆ ಮೂಲ ಸೌಕರ್ಯಗಳು ಆಗಬೇಕಿದೆ. ಈ ಬಗ್ಗೆ ಜಿಲ್ಲಾಡಳಿತ ಯೋಜನೆ ತಯಾರು ಮಾಡಿಲ್ಲ.
ಹೇಮವತಿ ನದಿಯಿಂದ ಶ್ರವಣಬೆಳಗೊಳಕ್ಕೆ ಕುಡಿಯುವ ನೀರು ನೀಡಲಾಗುತ್ತಿದೆ ಅದೇ ನೀರನ್ನು ಇಲ್ಲಿಗೆ ಲಿಂಕ್ ಮಾಡಬೇಕಿದೆ. ಇನ್ನು ಮುಖ್ಯ ರಸ್ತೆಯಿಂದ ವಿವಿ ಕ್ಯಾಂಪಸ್ ಒಳಕ್ಕೆ ಪ್ರವೇಶ ಮಾಡುವ ರಸ್ತೆ ನಿರ್ಮಾಣ ಹಾಗೂ ಮೀಡಿಯನ್ ಲೈಟ್ ಅಳವಡಿಕೆಗೆ ಸುಮಾರು 3 ಕೋಟಿ ರೂ. ಅನುದಾನ ಅಗತ್ಯವಿದ್ದರೂ ಈವರೆಗೂ ಇಲಾಖೆ ಯೋಜನೆ ತಯಾರು ಮಾಡಿಲ್ಲ.
• ಶಾಮಸುಂದರ್ ಕೆ. ಅಣ್ಣೇನಹಳ್ಳಿ