Advertisement

ಸಮನ್ವಯದ ಕೆಲಸ: 14 ತಂಡಗಳಿಗೆ ಡಿಸಿ ನಿರ್ದೇಶನ

07:42 AM Jul 07, 2020 | mahesh |

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಮತ್ತು ಸಾರ್ವಜನಿಕರ ಆರೋಗ್ಯ ಸುರಕ್ಷೆಗಾಗಿ ರಾಜ್ಯ ಸರಕಾರದ ಸೂಚನೆಯಂತೆ ರಚಿಸಲಾಗಿರುವ 14 ತಂಡಗಳು ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಸೂಚಿಸಿದ್ದಾರೆ. ಅವರು ಜಿಲ್ಲಾ ಪಂಚಾಯತ್‌ ಸಭಾಂಗಣ ದಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಪಾಸಿಟಿವ್‌: ವಿಳಂಬ ಸಲ್ಲ
ತುರ್ತು ಅಗತ್ಯವಿದ್ದಲ್ಲಿ ಖಾಸಗಿ ಆಸ್ಪತ್ರೆಯ ಆ್ಯಂಬುಲೆನ್ಸ್‌ಗಳನ್ನು ಬಳಸಿಕೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಯಾವುದೇ ಕಾರಣಕ್ಕೂ ಪಾಸಿಟಿವ್‌ ವರದಿ ಬಂದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ವಿಳಂಬ ಸಲ್ಲದು. ವಿಳಂಬವಾದಲ್ಲಿ ಇತರರಿಗೂ ಸೋಂಕು ಹರಡುವ ಸಂಭವ ಹೆಚ್ಚು ಎಂದು ಹೇಳಿದರು.

ಮುಂಜಾಗ್ರತೆಗೆ ಇನ್ನೊಂದು ಆಸ್ಪತ್ರೆ
ಜಿಲ್ಲೆಯಲ್ಲಿ ಬೆಡ್‌ ಮಾನಿಟರಿಂಗ್‌ ಸಿಸ್ಟಂ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಇದರಿಂದ ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್‌ಗಳು ಖಾಲಿ ಇವೆ? ಸಮೀಪದ ಆಸ್ಪತ್ರೆ ಎಲ್ಲಿದೆ? ಆ ಆಸ್ಪತ್ರೆಯಲ್ಲಿ ಏನು ಸೌಲಭ್ಯಗಳಿವೆ? ಎಂಬ ಮಾಹಿತಿ ಕೂಡಲೇ ಲಭ್ಯವಾಗಲಿದ್ದು ಇದರಿಂದ ವೃಥಾ ಆಸ್ಪತ್ರೆಗೆ ಅಲೆಯುವುದು ತಪ್ಪಲಿದೆ. ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಆಸ್ಪತ್ರೆಗಳಲ್ಲಿ 2,400 ಬೆಡ್‌ಗಳನ್ನು ಕೋವಿಡ್‌-19 ರೋಗಿಗಳಿಗೆ ಮೀಸಲಿಡಲಾ ಗಿದೆ. ಮುಂಜಾಗ್ರತೆಗಾಗಿ ಇನ್ನೂಂದು ಸುಸಜ್ಜಿತ ಕೋವಿಡ್‌-19 ಆಸ್ಪತ್ರೆ ಸಿದ್ಧಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ದಾದಿಯರಿಗೆ ತರಬೇತಿ
ಜಿಲ್ಲೆಯ ಎಲ್ಲ ಸರಕಾರಿ ಆಸ್ಪತ್ರೆಗಳ ದಾದಿಯರನ್ನು ಐಸಿಯುವಿನಲ್ಲಿ ಕಾರ್ಯ ನಿರ್ವಹಣೆಯ ವಿಧಾನ ಕುರಿತಂತೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ವಿಶೇಷ ತರಬೇತಿಗೆ ನಿಯೋಜಿಸುವಂತೆ ಆರೋಗ್ಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ವರದಿ ನೀಡದಿದ್ದರೆ ಲೈಸನ್ಸ್‌ ರದ್ದು
ಶೀತ, ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿರುವ ರೋಗಿಗಳ ವಿವರ ನೀಡದ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳ ಲೈಸೆನ್ಸ್‌ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದ ಡಿಸಿ, ಪ್ರತಿದಿನ ವರದಿ ನೀಡುವಂತೆ ತಿಳಿಸಿದರು. ಎಲ್ಲ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಪ್ರತಿದಿನ ತಮ್ಮ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ, ಶೀತ, ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿರುವ ರೋಗಿಗಳ ವರದಿ ನೀಡಬೇಕು. ಇಂತಹ ಲಕ್ಷಣಗಳಿದ್ದು ರೋಗಿಯ ತಪಾಸಣೆ ಬಿಟ್ಟು ಹೋಗಿ ಆ ವ್ಯಕ್ತಿ ಕೋವಿಡ್‌ನಿಂದ ಮೃತಪಟ್ಟಲ್ಲಿ ಸಂಬಂಧಪಟ್ಟ ವ್ಯಾಪ್ತಿಯ ಸಿಬಂದಿಯ ನಿರ್ಲಕ್ಷ್ಯದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

Advertisement

2-3 ಪ್ರಕರಣಗಳಾದರೆ ಗ್ರಾಮ ಸೀಲ್‌ಡೌನ್‌!
ಕಂಟೈನ್‌ಮೆಂಟ್‌ ವಲಯ ಕುರಿತ ನಿಯಮ ಬದಲಾಗಿದೆ. ಸ್ಥಳೀಯವಾಗಿ 2-3 ಪ್ರಕರಣ ಕಂಡುಬಂದಲ್ಲಿ ಸಂಬಂಧಪಟ್ಟ ವ್ಯಕ್ತಿಯ ಮನೆಯ ಬದಲಾಗಿ ಇಡೀ ಗ್ರಾಮವನ್ನು ಸೀಲ್‌ಡೌನ್‌ ಮಾಡಿ ಆ ಭಾಗದಲ್ಲಿನ ಸಾರ್ವಜನಿಕರನ್ನು ವ್ಯಾಪಕವಾಗಿ ಪರೀಕ್ಷೆಗೆ ಒಳಪಡಿಸಬೇಕು. ಜಿಲ್ಲೆಯಲ್ಲಿ ಪ್ರತಿದಿನ 650 ಮಂದಿಯ ಸ್ಯಾಂಪಲ್‌ ಪರೀಕ್ಷೆ ನಡೆಸುವಂತೆ ನಿರ್ದೇಶನವಿದೆ. ಜಿಲ್ಲೆಯ ಒಂದೇ ಭಾಗದಲ್ಲಿ ಸ್ಯಾಂಪಲ್‌ ತೆಗೆಯದೆ ಜಿಲ್ಲೆಯಾದ್ಯಂತ ವಿವಿಧ ವರ್ಗಗಳಿಗೆ ಸೇರಿದ ಸಾರ್ವಜನಿಕರ ಸ್ಯಾಂಪಲ್‌ ತೆಗೆದು ಪರೀಕ್ಷೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಇದು ಸಮ್ಮಾನದ ಕಾಲವಲ್ಲ
ಜಿಲ್ಲೆಯಲ್ಲಿ ಕೋವಿಡ್‌ ವಾರಿಯರ್ಗಳಿಗೆ ಸಮ್ಮಾನಗಳು ನಡೆಯುತ್ತಿವೆ. ಆದರೆ ಇದು ಸಮ್ಮಾನದ ಕಾಲವಲ್ಲ. ಅಲ್ಲಿ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ಕೋವಿಡ್ ಮುಗಿದ ಅನಂತರ ಪ್ರತಿಯೊಬ್ಬರಿಗೂ ಜಿಲ್ಲಾಡಳಿತದಿಂದಲೇ ಸಮ್ಮಾನ ಆಯೋಜಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next