ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳ ಹುದ್ದೆಯನ್ನು ಹೈಕೋರ್ಟ್ ರದ್ದುಗೊಳಿಸಿದ ನಂತರವೂ ಕುಲಪತಿ ಪ್ರೊ. ಕೆ.ಆರ್. ವೇಣುಗೋಪಾಲ್ ವಿಶ್ವವಿದ್ಯಾಲಯದ ತಮ್ಮ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ವಿವಿ ಸಿಂಡಿಕೇಟ್ ಸದಸ್ಯರು ಆರೋಪಿಸಿದರು. ನ್ಯಾಯಾಲಯದ ಆದೇಶ ಹೊರಬಿದ್ದ ನಂತರ ಗುರುವಾರ ಜ್ಞಾನಭಾರತಿ ಆವರಣದಲ್ಲಿರುವ ಆಡಳಿತ ಕಚೇರಿಯಲ್ಲಿ ಸಿಂಡಿಕೇಟ್ ಸದಸ್ಯರಾದ ಸುಧಾಕರ್, ಗೋಪಿನಾಥ್ ಮತ್ತು ಗೋವಿಂದರಾಜು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈಗಾಗಲೇ ಹೈಕೋರ್ಟ್ ತನ್ನ ಏಕಸದಸ್ಯಪೀಠ ನೀಡಿರುವ ತೀರ್ಪನ್ನು ಎತ್ತಿ ಹಿಡಿದಿದ್ದು, ಕುಲಪತಿ ನೇಮಕಾತಿ ಆದೇಶವನ್ನು ರದ್ದುಗೊಳಿಸಿದೆ. ಅದರ ಹೊರತಾಗಿಯೂ ಗುರುವಾರ ಪ್ರೊ. ವೇಣುಗೋಪಾಲ್ ಕಾರ್ಯ ನಿರ್ವಹಿಸುವ ಮೂಲಕ ಅಕ್ರಮವಾಗಿ ಹಳೆ ದಿನಾಂಕದಲ್ಲಿ ಫೈಲ್‌ಗಳಿಗೆ ಸಹಿ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಕೂಡಲೇ ಪ್ರಭಾರ ನೇಮಕ ಮಾಡಲಿ: ವೇಣುಗೋಪಾಲ್ ಅವರ ಸ್ಥಾನವನ್ನು ರದ್ದುಗೊಳಿಸಿರುವುದರಿಂದ ರಾಜ್ಯ ಸರ್ಕಾರವು ಕೂಡಲೇ ಪ್ರಭಾರ ಕುಲಪತಿಯನ್ನು ನೇಮಿಸಬೇಕು. ಕಾರಣ, ಇದೇ ಮಾ.25ರಂದು ವಿಶ್ವವಿದ್ಯಾಲಯದ ಆರ್ಥಿಕತೆ ಸಂಬಂಧಿಸಿದ ಬಜೆಟ್ ಸಭೆ ಇದೆ. ನಂತರ ಏ.8ರಂದು ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮ ನಿಗದಿಯಾಗಿದೆ. ಈ ಎಲ್ಲಾ ಕಾರಣಗಳಿಂದ ತುರ್ತಾಗಿ ಪ್ರಭಾರ ಕುಲಪತಿಯನ್ನು ನೇಮಕ ಮಾಡುವಂತೆ ಆಗ್ರಹಿಸಿದರು.
ರಾಜ್ಯಪಾಲರ ನಿರ್ದೇಶನದಂತೆ ನಡೆ: ಹೈಕೋರ್ಟ್ ಆದೇಶವನ್ನು ಗೌರವಿಸುತ್ತೇನೆ. ನ್ಯಾಯಾಲಯದ ಪ್ರತಿ ನನಗೆ ಇನ್ನೂ ಸಿಕ್ಕಿಲ್ಲ ಮತ್ತು ಏಕಾಏಕಿ ವಿಶ್ವವಿದ್ಯಾಲಯದ ಆಡಳಿತವನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ. ಈ ವಿಚಾರವಾಗಿ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಆಗಿರುವ ರಾಜ್ಯಪಾಲರು ನನಗೆ ನಿರ್ದೇಶನ ನೀಡುವ ತನಕ ಕಾರ್ಯ ನಿರ್ವಹಿಸುತ್ತೇನೆ ಎಂದು ಪ್ರೊ. ಕೆ.ಆರ್. ವೇಣುಗೋಪಾಲ್ ತಿಳಿಸಿದರು. ಹೈಕೋರ್ಟ್ ತೀರ್ಪಿನ ಕುರಿತು ಸುಪ್ರೀಂಕೋರ್ಟಿಗೆ ಮೇಲ್ಮನವಿ ಹೋಗುತ್ತೇನೆ. ಆದರೆ, ಅದಕ್ಕೂ ಮೊದಲು ರಾಜ್ಯಪಾಲರ ನಿರ್ದೇಶನದಂತೆ ನಾನು ಕಾರ್ಯ ನಿರ್ವಹಿಸಬೇಕಿದೆ. ರಾಜ್ಯಪಾಲರು ಸೂಚಿಸುವ ವ್ಯಕ್ತಿಗೆ ಅಧಿಕಾರವನ್ನು ಹಸ್ತಾಂತರಿಸಿ, ನಂತರ ಅಧಿಕಾರದಿಂದ ನಿರ್ಗಮಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ನಡೆ: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದನ್ನು ಕಾನೂನು ತಜ್ಞರ ಅಭಿಪ್ರಾಯ ಪಡೆದು ನಿರ್ಧರಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಮ ತಿಳಿಸಿದರು. ನ್ಯಾಯಾಲಯದ ತೀರ್ಪು ಮತ್ತು ಮುಂದಿನ ಕುಲಪತಿಗಳ ನೇಮಕಕ್ಕೂ ಮೊದಲು ಅನುಸರಿಸಬೇಕಾದ ನಿಯಮಗಳನ್ನು ತಿಳಿದು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.