Advertisement

150 ದಿನಕ್ಕಿಂತ ಕಡಿಮೆ ದಿನ ಕೆಲಸ ನೀಡಿದ್ರೆ ಕ್ರಮ: ನಾಯ್ಕ

10:42 AM Feb 08, 2019 | Team Udayavani |

ಕೊಟ್ಟೂರು: ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಕಾರ್ಮಿಕರಿಗೆ 150 ದಿನಕ್ಕಿಂತ ಕಡಿಮೆ ದಿನ ಕೆಲಸ ನೀಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಭೀಮಾನಾಯ್ಕ ಎಚ್ಚರಿಸಿದರು.

Advertisement

ತಾಲೂಕಿನ ರಾಂಪುರ ಗ್ರಾಮದಲ್ಲಿ ಲೋಕೊಪಯೋಗಿ ಇಲಾಖೆಯಿಂದ ಕೈಗೊಂಡಿರುವ 15 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಈ ವೇಳೆ ಕೊಟ್ಟೂರು ಕೆರೆಯಲ್ಲಿ ಹೂಳೆತ್ತುವ ಕೆಲಸ ಬಿಡಿಸಿ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಕೃಷಿ ಕಾರ್ಮಿಕರು ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಅವರು, ರಾಂಪುರ ಗ್ರಾಪಂನಿಂದ ಕೊಟ್ಟೂರು ಕೆರೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಕಾರ್ಮಿಕರು ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ. ಯಥಾಸ್ಥಿತಿಯಲ್ಲಿ ಅವರನ್ನು ಮುಂದುವರಿಸಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಕೃಷಿ ಕಾರ್ಮಿಕರಿಗೆ ಸ್ವಂತ ಹೊಲಗಳಲ್ಲಿ ಖಾತ್ರಿ ಯೋಜನೆಯ ಕೆಲಸ ಮಾಡುವಂತೆ ಹೇಳಿದ್ದೇವೆ. ಆದರೆ ಹೊಲದಲ್ಲಿನ ಮಣ್ಣು ಗಟ್ಟಿಯಾಗಿರುವುದರಿಂದ ರೈತರಿಗೆ ಕಷ್ಟವಾಗಿದೆ. ಈ ಕಾರಣಕ್ಕಾಗಿ ಇವರು ಕೊಟ್ಟೂರು ಕೆರೆಯಲ್ಲಿ ಕೆಲಸ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ತಾಪಂ ಇಒ ಜಿ.ಎಂ.ಬಸಣ್ಣ ಪ್ರತಿಕ್ರಿಯಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೃಷಿ ಕಾರ್ಮಿಕರು, ಕೃಷಿ ಕಾರ್ಮಿಕರ ಪೈಕಿ ಕೆಲವರಿಗೆ ಮಾತ್ರ ಹೊಲಗಳಿದ್ದು, ಬಹುತೇಕರಿಗೆ ಹೊಲಗಳು ಇಲ್ಲವಾಗಿದೆ. ಇದಕ್ಕಾಗಿ ಕೆರೆ ಹೂಳೆತ್ತುವ ಕಾಮಗಾರಿ ನೀಡುವಂತೆ ಕೇಳುತ್ತಿದ್ದೇವೆ ಎಂದು ಕೃಷಿ ಕಾರ್ಮಿಕರು ಸ್ಪಷ್ಟಪಡಿಸಿದರು.

Advertisement

ಕೃಷಿ ಹೊಂಡ, ಇಂಗುಗುಂಡಿ, ಬದು ನಿರ್ಮಾಣ ಮತ್ತಿತರ ಕಾಮಗಾರಿಗಳನ್ನು ಕೃಷಿ ಕಾರ್ಮಿಕರು ಸಾಮೂಹಿಕವಾಗಿ ಕೈಗೊಳ್ಳಿ ಎಂದು ಶಾಸಕರು ಕೂಲಿ ಕಾರ್ಮಿಕ‌ರಿಗೆ ಸೂಚಿಸಿದರು. ಕೆರೆಯ ಕಾಮಗಾರಿಯನ್ನೇ ಮುಂದುವರಿಸುವಂತೆ ಜಿಪಂ ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿ ಶಾಸಕರು ಕೃಷಿ ಕಾರ್ಮಿಕರನ್ನು ಸಮಾಧಾನ ಮಾಡಿದರು.

ಈ ವೇಳೆ ಜಿಪಂ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ, ತಾಪಂ ಅಧ್ಯಕ್ಷ ಬಿ.ವೆಂಕಟೇಶ್‌ ನಾಯ್ಕ, ಸದಸ್ಯ ಗುರುಮೂರ್ತಿ ಶಾನುಬೋಗರ್‌, ಎಪಿಎಂಸಿ ಅಧ್ಯಕ್ಷ ಬೂದಿ ಶಿವಕುಮಾರ್‌, ತಾಪಂ ಇಒ ಜಿ.ಎಂ.ಬಸಣ್ಣ, ಜಿಪಂ ಎಇಇ ಜಿ.ಎನ್‌.ಚಂದ್ರಶೇಖರಸ್ವಾಮಿ, ಗ್ರಾಮೀಣ ಕುಡಿಯುವ ನೀರು ಯೋಜನೆಯ ಎಇಇ ವಾಸಣ್ಣ, ಪಿಡಬ್ಲ್ಯೂಡಿ ಜೆಇ ಸೋಮಣ್ಣ, ಮುಖಂಡರಾದ ಪಿ.ಎಚ್.ದೊಡ್ಡರಾಮಣ್ಣ, ಭರಮಪ್ಪ, ಪಿಡಿಒ ಶಶಿಧರ, ಗ್ರಾಪಂ ಅಧ್ಯಕ್ಷೆ ಸರಸ್ವತಿ, ರಾಂಪುರ ವಿವೇಕ, ಐ.ಎಂ.ದ್ವಾರಕೇಶ್‌, ಗೂಳಿ ಮಲ್ಲಿಕಾರ್ಜುನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next