Advertisement

ಮೂಲಸೌಲಭ್ಯಕ್ಕೆ ಶ್ರಮಿಕರ ಹಕ್ಕೊತ್ತಾಯ

03:17 PM May 02, 2017 | |

ಹುಬ್ಬಳ್ಳಿ: ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಎಐಟಿಯುಸಿ ನೇತೃತ್ವದಲ್ಲಿ ಬೀಡಿ, ಆಟೋರಿಕ್ಷಾ, ಕಟ್ಟಡ ಕಾರ್ಮಿಕರು, ಸಿನೆಮಾ ನೌಕರರು, ಅಂಗನವಾಡಿ, ಸಾರಿಗೆ ನೌಕರರು ಮೆರವಣಿಗೆ ನಡೆಸಿದರು. ಇಲ್ಲಿನ ಪ್ರಧಾನ ಅಂಚೆ ಕಚೇರಿ ಎದುರಿನ ಡಾ|ಬಾಬಾಸಾಹೇಬ ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಕಾರ್ಮಿಕರು, ಅಲ್ಲಿಂದ ಸರ್‌ ಸಿದ್ದಪ್ಪ ಕಂಬಳಿ ಮಾರ್ಗ, ಕಿತ್ತೂರ ಚನ್ನಮ್ಮ ವೃತ್ತ ಮಾರ್ಗವಾಗಿ ಮಹಾನಗರ ಪಾಲಿಕೆಯ ಪಕ್ಕದ ಚಿಟಗುಪ್ಪಿ ಆಸ್ಪತ್ರೆ ಎದುರಿನ ಉದ್ಯಾನವನದಲ್ಲಿ ಸಮಾರೋಪಗೊಂಡಿತು.

Advertisement

ಮೆರವಣಿಗೆಯುದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ಅಸಂಘಟಿತ ಕಾರ್ಮಿಕರಾದ ಬೀಡಿ, ಆಟೋರಿಕ್ಷಾ, ಕಟ್ಟಡ ಕಾರ್ಮಿಕರು, ಅಂಗನವಾಡಿ ಕಾರ್ಮಿಕರಿಗೆ ವಸತಿ ಯೋಜನೆ ಜಾರಿಗಾಗಿ ಒತ್ತಾಯಿಸಿದರು. 

ಉದ್ಯಾನವನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಜಿಲ್ಲಾ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ದೇವಾನಂದ ಜಗಾಪುರ ಪ್ರಾಸ್ತಾವಿಕ ಮಾತನಾಡಿ, ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿ ಸಿಲುಕಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾರ್ಮಿಕರ ವಿರೋಧಿ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕರ ಬದುಕು ನಾಶ ಮಾಡುತ್ತಿವೆ. 

ಅಸಂಘಟಿತ ಕಾರ್ಮಿಕರಾದ ಬಿಸಿಯೂಟ ನೌಕರರನ್ನು ಗೌರವಧನದ ಹೆಸರಿನಲ್ಲಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಕಡಿಮೆ ಸಂಬಳದಲ್ಲಿ ದುಡಿಸಿಕೊಳ್ಳುತ್ತಿವೆ. ಸರಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗೀಕರಣದತ್ತ ಕೊಂಡೊಯ್ಯುತ್ತಿರುವ ಸರಕಾರಗಳು ಎಲ್ಲಾ ಕೆಲಸಗಳನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದಲ್ಲಿ ನೀಡುತ್ತಿವೆ.

ಪ್ರಸ್ತುತ ಸನ್ನಿವೇಶದಲ್ಲಿ ಕಾರ್ಮಿಕರು ಏಕತೆಯಿಂದ ಹೋರಾಟ ಮಾಡಿದರೆ ಮಾತ್ರ ಯಶಸ್ಸು ಪಡೆಯಲು ಸಾಧ್ಯವೆಂದರು. ಅಸಂಘಟಿತ ಕಾರ್ಮಿಕರಿಗೆ ತಿಂಗಳಿಗೆ 15ಸಾವಿರ ರೂ. ವೇತನ ನಿಗದಿಗೊಳಿಸಬೇಕು. ಗುತ್ತಿಗೆ ಆಧಾರಿತ ನೇಮಕಾತಿ ಕಾರ್ಮಿಕ ಪದ್ಧತಿ ಕೈಬಿಡಬೇಕು. ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು.

Advertisement

ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳ ಶೇರು ಬಂಡವಾಳ ಹಿಂತೆಗೆಯುವುದನ್ನು ನಿಲ್ಲಿಸಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ನೀಡಬೇಕು. ನೂತನ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಸೂದೆ ವಾಪಸು ಪಡೆಯಬೇಕು. ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಕೈ ಬಿಡಬೇಕು. ಬೀಡಿ, ಆಟೋರಿಕ್ಷಾ, ಅಂಗನವಾಡಿ, ಕಟ್ಟಡ ಕಾರ್ಮಿಕರು, ಸಿನೆಮಾ ನೌಕರರಿಗೆ ರಾಜ್ಯ ಸರಕಾರದ ವಸತಿ ಯೋಜನೆಯಡಿ ಸತಿ ಒದಗಿಸಬೇಕು.

ಹು-ಧಾ ಅವಳಿ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂಗೊಳಿಸಬೇಕು, ರಾಷ್ಟ್ರಕ್ಕೆ ಮಾರಕವಾಗಿರುವ ಎಲ್ಲಾ ಬಗೆಯ ಮೂಲಭೂತವಾದ ಮತ್ತು ಭಯೋತ್ಪಾದನೆಯನ್ನು ಸಭೆಯು ಬಲವಾಗಿ ಖಂಡಿಸುತ್ತದೆ ಎಂದು ಕಾರ್ಮಿಕ ನಾಯಕರಾದ ಎ.ಎಸ್‌. ಪೀರಜಾದೆ, ರಮೇಶ ಭೋಸ್ಲೆ, ಆರ್‌.ಎಫ್‌. ಕವಳಿಕಾಯಿ ಹಕ್ಕೊತ್ತಾಯ ಮಂಡಿಸಿದರು. ಜಿಲ್ಲಾಧ್ಯಕ್ಷ ಎನ್‌.ಎ. ಖಾಜಿ ಅಧ್ಯಕ್ಷತೆ ವಹಿಸಿದ್ದರು. 

ಕಾರ್ಮಿಕ ನಾಯಕರಾದ ಬಿ.ಎ. ಮುಧೋಳ, ಜಿ.ಎಚ್‌. ಕರೆಣ್ಣವರ, ಕಾಸೀಮಸಾಬ ಗೂಡೇನವರ, ಬೀಬಿಜಾನ ಬಂಕಾಪೂರ, ಬಾಬಾಜಾನ ಮುಧೋಳ, ಬಾನು ಮುಜಾವರ, ಗೀತಾ ಕಟಗಿ, ಭುವನೇಶ್ವರಿ ಬೇವಿನಕಟ್ಟಿ, ನೂರಜಹಾ ಸಮುದ್ರಿ, ಸುವರ್ಣಾ ಬಡಿಗೇರ, ಎನ್‌.ಐ. ನದಾಫ, ಎಂ.ಎಂ. ಶೇಖ, ಎನ್‌.ಬಿ. ಪಮ್ಮಾರ, ಎಸ್‌.ಎಂ. ಜೋಶಿ, ಬಾಬಾಜಾನ ಲಾಲಮಿಯಾ, ರಾಜು ಕಾಲವಾಡ ಮೊದಲಾದವರಿದ್ದರು. ರಮೇಶ ಭೋಸ್ಲೆ ಸ್ವಾಗತಿಸಿದರು. ಸುಲೇಮಾನ ಶೇಖ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next