Advertisement

ಉಡುಪಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾರ್ಯಪಡೆ ರಚನೆ: ಸಚಿವ ಬಸವರಾಜ ಬೊಮ್ಮಾಯಿ

08:15 AM Sep 28, 2019 | Team Udayavani |

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದಕ್ಕಾಗಿ “ಜಿಲ್ಲಾ ಪ್ರವಾಸೋದ್ಯಮ ಕಾರ್ಯಪಡೆ'(ಟೂರಿಸಂ ಟಾಸ್ಕ್ಫೋರ್ಸ್‌) ರಚಿಸಲು ತೀರ್ಮಾನಿಸಲಾಗಿದೆ ಎಂದು ಗೃಹ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಮಲ್ಪೆ ಅಭಿವೃದ್ದಿ ಸಮಿತಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಂಘಟನೆ(ಆ್ಯಕ್ಟ್) ಸಹಯೋಗದಲ್ಲಿ ಸೆ.27ರಂದು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜರಗಿದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಕಾರ್ಯಪಡೆಯನ್ನು ಸಮಗ್ರ ಪ್ರವಾಸೋದ್ಯಮ ಯೋಜನೆ ರೂಪಿಸುವ ಉದ್ದೇಶದಿಂದ ರಚಿಸಲಾಗುತ್ತದೆ. ಇದರಲ್ಲಿ ಅಧಿಕಾರಿಗಳು, ಉದ್ಯಮಿಗಳು ಮತ್ತು ಪ್ರವಾಸೋದ್ಯಮ ಕ್ಷೇತ್ರದ ತಜ್ಞರಿರುತ್ತಾರೆ ಎಂದು ಬೊಮ್ಮಾಯಿ ತಿಳಿಸಿದರು.

ಇನ್‌ಕ್ರೆಡಿಬಲ್‌ ಉಡುಪಿ
ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲು ಸರಕಾರ ನಿರ್ಧರಿಸಿದೆ. ಇನ್‌ಕ್ರೆಡಿಬಲ್‌ ಇಂಡಿಯಾ ಇರುವಂತೆ ಇನ್‌ಕ್ರೆಡಿಬಲ್‌ ಉಡುಪಿ ಆಗಬೇಕು. ಉಡುಪಿ ಹೊಟೇಲ್‌ನಂತೆ ಉಡುಪಿ ಪ್ರವಾಸೋದ್ಯಮ ಕೂಡ ಪ್ರಸಿದ್ಧವಾಗಬೇಕು. ಉಡುಪಿಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಅಪಾರ ಅವಕಾಶವಿದೆ ಎಂದು ಸಚಿವರು ಹೇಳಿದರು.

ಜಿಎಸ್‌ಟಿ ಇಳಿಕೆ
ಹೊಟೇಲ್‌ ಮಾಲಕರ ಬೇಡಿಕೆಯಂತೆ ಜಿಎಸ್‌ಟಿ ಪ್ರಮಾಣವನ್ನು ಇಳಿಸಲಾಗಿದೆ. ಇದು ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ. ಸಿಆರ್‌ಝೆಡ್‌ ಮಿತಿಯನ್ನು ಕೂಡ ಸಡಿಲಿಕೆ ಮಾಡಲಾಗಿದೆ ಎಂದು ಸಚಿವ ಬೊಮ್ಮಾಯಿ ತಿಳಿಸಿದರು.

Advertisement

ಹಿನ್ನೀರು ಡ್ರೆಜ್ಜಿಂಗ್‌
ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಕೆ.ರಘುಪತಿ ಭಟ್‌ ಅವರು ಮಾತನಾಡಿ “ಕರಾವಳಿಯ ಹಿನ್ನೀರಿನ ಹೂಳೆತ್ತಿ ಅಲ್ಲಿ ಹೌಸಿಂಗ್‌ ಬೋಟ್‌ಗಳು ಸಂಚರಿಸಲು ಅನುವು ಮಾಡಿಕೊಡುವ ಕುರಿತು ಬಂದರು ಸಚಿವರ ಜತೆಗೆ ಈಗಾಗಲೇ ಚರ್ಚೆ ನಡೆಸಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿರುವಷ್ಟೆ ಸಿಆರ್‌ಝೆಡ್‌ ರಿಯಾಯಿತಿ ಗ್ರಾಮಾಂತರಕ್ಕೂ ದೊರೆಯಬೇಕಾಗಿದೆ’ ಎಂದು ಹೇಳಿದರು.

ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಆರ್‌.ಮೆಂಡನ್‌, ಸುನಿಲ್‌ ಕುಮಾರ್‌, ಸುಕುಮಾರ ಶೆಟ್ಟಿ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಜಿ.ಪಂ. ಸದಸ್ಯರಾದ ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ, ಬಟವಾಡೆ ಸುರೇಶ್‌, ಜಿಲ್ಲಾಧಿಕಾರಿ ಜಗದೀಶ್‌, ಸಿಇಒ ಪ್ರೀತಿ ಗೆಹೊಟ್‌, ಎಸ್‌ಪಿ ನಿಶಾ ಜೇಮ್ಸ್‌, ಆ್ಯಕ್ಟ್ ಅಧ್ಯಕ್ಷ ಮನೋಹರ್‌ ಶೆಟ್ಟಿ, ಬೆಂಗಳೂರು ಎಂಆರ್‌ಜಿ ಗ್ರೂಪ್‌ ಚೇರ್‌ವೆುನ್‌ ಕೆ.ಪ್ರಕಾಶ್‌ ಶೆಟ್ಟಿ ಉಪಸ್ಥಿತರಿದ್ದರು. ಡಾ| ವಿಜಯೀಂದ್ರ ವಸಂತ್‌ ಮತ್ತು ನಾಗರಾಜ್‌ ಹೆಬ್ಟಾರ್‌ ಕಾರ್ಯಕ್ರಮ ನಿರ್ವಹಿಸಿದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ ನಾಯ್ಕ ಸ್ವಾಗತಿಸಿದರು. ಪೌರಾಯುಕ್ತ ಆನಂದ್‌ ಸಿ.ಕಲ್ಲೋಳಿಕರ್‌ ವಂದಿಸಿದರು. ಪ್ರವಾಸೋದ್ಯಮ ಕುರಿತು ವಿಶೇಷ ಉಪನ್ಯಾಸ, ಚರ್ಚಾಗೋಷ್ಠಿ ಜರಗಿತು.

Advertisement

Udayavani is now on Telegram. Click here to join our channel and stay updated with the latest news.

Next