ಎನ್.ಆರ್. ಪುರ: ಅಸಂಘಟಿತ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸಿ ಕೊಳ್ಳುವುದರಿಂದ ಹಲವು ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.
ಇಲ್ಲಿನ ಶಾಸಕರ ಕಚೇರಿ ಆವರಣದಲ್ಲಿ ರಾಜ್ಯ ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿಯಿಂದ ಅಸಂಘಟಿತ ಕಾರ್ಮಿಕರಾದ ಕ್ಷೌರಿಕರು, ಟೈಲರ್ ಹಾಗೂ ಅಕ್ಕಸಾಲಿಗರಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸಿ ಅವರು ಮಾತನಾಡಿದರು.
ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ತಡೆವಾಗಿಯಾದರೂ ಆಹಾರ ಸಾಮಗ್ರಿ ಕಿಟ್ ವಿತರಿಸಲು ಕ್ರಮ ಕೈಗೊಂಡಿದೆ. ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತ ಸುಮಾರು 140ಕ್ಕೂ ಹೆಚ್ಚು ಅಸಂಘಟಿತ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಲಾಗುತ್ತಿದೆ. ಮಲ್ಲಿಕಾರ್ಜುನ ಖರ್ಗೆಯವರು ಕಾರ್ಮಿಕ ಸಚಿವರಾಗಿದ್ದಾಗ ಕಾರ್ಮಿಕ ಕಲ್ಯಾಣ ನಿಧಿ ಸ್ಥಾಪಿಸಿ ಅಸಂಘಟಿತ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ರೂ.50 ಸಾವಿರ , ಅಪಘಾತವಾದರೆ ರೂ.5ಲಕ್ಷ, ಅನಾರೋಗ್ಯಕ್ಕೆ ತುತ್ತಾದರೆ ಆಸ್ಪತ್ರೆ ವೆಚ್ಚಕ್ಕೆ ರೂ.3 ಲಕ್ಷ ನೆರವು ನೀಡುವ ಸೌಲಭ್ಯ ಕಲ್ಪಿಸಿದ್ದರು. ಹಾಗಾಗಿ ಪ್ರತಿಯೊಬ್ಬ ಕಾರ್ಮಿಕರು ಸಹ ಹೆಸರನ್ನು ಇಲಾಖೆಯಲ್ಲಿ ನೋಂದಾಯಿಸ ಬೇಕು ಎಂದರು.
ಕೋವಿಡ್ 2ನೇ ಅಲೆ ಬಂದಾಗ ಶೇ. 75ರಷ್ಟು ಜನ ಆಮ್ಲಜನಕ ಕೊರತೆಯಿಂದ ಮೃತಪಟ್ಟರು. ಕ್ಷೇತ್ರದ ಮೂರು ತಾಲೂಕಿನ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಗೆ ಚಾಲನೆ ನೀಡಲಾಗಿದೆ. ಶೃಂಗೇರಿಯಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ನೆರವೇರಿಸಲಾಗಿದೆ. ಶೀಘ್ರದಲ್ಲೇ ಕೊಪ್ಪ ಮತ್ತು ಎನ್.ಆರ್. ಪುರದಲ್ಲೂ ಆಮ್ಲಜನಕ ಉತ್ಪಾದನಾ ಘಟಕ ಉದ್ಘಾಟಿಸಲಾಗುವುದು. ಕ್ಷೇತ್ರದಲ್ಲಿ 100 ಜಂಬೋ ಸಿಲಿಂಡರ್ ಆಮ್ಲಜನಕ ದಾಸ್ತಾನು ಇಡುವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಪಪಂ ಉಪಾಧ್ಯಕ್ಷ ಮುಕುಂದ, ಸದಸ್ಯರಾದ ಪ್ರಶಾಂತ್ ಶೆಟ್ಟಿ, ಸೈಯದ್ ವಸೀಂ, ಶೋಜಾ, ಜುಬೇದ, ಗ್ರಾಪಂ ಸದಸ್ಯ ಬಿನು, ಸುನಿಲ್ ಕುಮಾರ್ , ಮುಖಂಡರಾದ ಸದಾಶಿವ, ಸುಂದರೇಶ್, ಉಪೇಂದ್ರ, ಸಾಜು, ಸೈಯದ್ ಸಿಗ್ಬತುಲ್ಲಾ, ಏಲಿಯಾಸ್ , ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಗಿರಿಧರ್, ವೆಂಕಟೇಶ್, ವಿಜು ಅಹ್ಮದ್ ಬಾಷ ಮತ್ತಿತರರಿದ್ದರು.