ವಾಡಿ: ಕೊರೊನಾ ಮತ್ತು ವ್ಯಾಪಾರ ನಷ್ಟದ ನೆಪದಲ್ಲಿ ಕಾರ್ಮಿಕರನ್ನು ಕಡಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಎಸಿಸಿ ನ್ಯೂ ಪ್ಲ್ಯಾಂಟ್‌ನ ಸುಮಾರು ಮೂರು ಸಾವಿರ ಗುತ್ತಿಗೆ ಕಾರ್ಮಿಕರು ಕಂಪನಿ ಬಾಗಿಲು ಬಂದ್ ಮಾಡಿ ಬುಧವಾರ ಪ್ರತಿಭಟನೆ ನಡೆಸಿದರು.
ಆಕ್ರೋಶಗೊಂಡಿದ್ದ ಕಾರ್ಮಿಕರು ಸಿಮೆಂಟ್ ಸಾಗಣಿಕೆ ಲಾರಿಗಳನ್ನು ಕಂಪನಿ ಒಳಗೆ ಹಾಗೂ ಹೊರಗೆ ಬಿಡದೆ ತಡೆದು ಎಸಿಸಿ ಆಡಳಿತಕ್ಕೆ ಬಿಸಿ ಮುಟ್ಟಿಸಿ, ಬೇಡಿಕೆ ಈಡೇರುವ ವರೆಗೂ ಹೋರಾಟ ಮುನ್ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ತಿಂಗಳಿಗೆ 26 ದಿನ ಕೆಲಸ ಕೊಡಲಾಗುತ್ತಿತ್ತು. ಆದರೀಗ ನಷ್ಟದ ನೆಪವೊಡ್ಡಿ ಕಾರ್ಮಿಕರನ್ನು ಕಡಿತಗೊಳಿಸಲಾಗುತ್ತಿದೆ . ತಿಂಗಳಿಗೆ ಮಹಿಳೆಯರಿಗೆ ನಾಲ್ಕು ದಿನ, ಪುರುಷರಿಗೆ ಹತ್ತು ದಿನ ಮಾತ್ರ ಕೆಲಸ ನೀಡಲಾಗುತ್ತಿದೆ. ಇದರಿಂದ ಕುಟುಂಬ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಕೆಲಸ ನೀಡಲು ಸಾಧ್ಯವಾಗದಿದ್ದರೆ 10 ಲಕ್ಷ ರೂ. ಪರಿಹಾರ ಕೊಡಿ. ಇಲ್ಲದಿದ್ದರೆ ವಿಷವನ್ನಾದರೂ ಕೊಡಿ ಎಂದು ಕಾರ್ಮಿಕರು ತರಾಟೆ ತೆಗೆದುಕೊಂಡರು.
ಗರಿಷ್ಠ ಪರಿಹಾರಕ್ಕೆ ಒತ್ತಾಯ: ಎಸಿಸಿ ನ್ಯೂ ಪ್ಲ್ಯಾಂಟ್ ಗುತ್ತಿಗೆ ಕಾರ್ಮಿಕರು ಕೆಲಸವಿಲ್ಲದೆ ಕಷ್ಟದ ಬದುಕು ನಡೆಸುತ್ತಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ಸಿಮೆಂಟ್ ವ್ಯಾಪಾರ ಕುಸಿದಿದೆ ಎಂದು ಕಂಪನಿ ಕಾರಣ ಹೇಳುತ್ತಿದೆ. ಈ ಕುರಿತು ಯೂನಿಯನ್ ಪದಾ ಧಿಕಾರಿಗಳೆಲ್ಲ ಕಂಪನಿಯೊಂದಿಗೆ ಚರ್ಚೆ ನಡೆಸುತ್ತೇವೆ. ಕಾರ್ಮಿಕರಿಗೆ ಕೆಲಸ ಕೊಡಿಸಲು ಕಂಪನಿಗೆ ಒತ್ತಡ ಹೇರುತ್ತೇವೆ ಎಂದು ಎಸಿಸಿ ಕಾರ್ಮಿಕ ಸಂಘದ ಜಂಟಿ ಕಾರ್ಯದರ್ಶಿ ವಿಶಾಲ ನಂದೂರಕರ ತಿಳಿಸಿದರು.
ಮಹಿಳಾ ಗುತ್ತಿಗೆ ಕಾರ್ಮಿಕರಿಗೆ ಸ್ವಯಂ ನಿವೃತ್ತಿ ನೀಡಲು ಎಸಿಸಿ ಮುಂದಾಗಿದೆ. ಆದರೆ ವಿಆರ್‌ಎಸ್ ಪಡೆಯುವ ಕಾರ್ಮಿಕರಿಗೆ ಎಷ್ಟು ಪರಿಹಾರ ಧನ ನೀಡಬೇಕು ಎನ್ನುವುದು ತೀರ್ಮಾನವಾಗಿಲ್ಲ. ಗರಿಷ್ಠ ಪರಿಹಾರ ನೀಡುವಂತೆ ಒತ್ತಾಯಿಸಲಾಗುವುದು. ವಿಶಾಲ ನಂದೂರಕರ, ಎಸಿಸಿ ಕಾರ್ಮಿಕ ಸಂಘದ ಜಂಟಿ ಕಾರ್ಯದರ್ಶಿ