ದಾವಣಗೆರೆ: ಜಗಳೂರು ತಾಲೂಕು ಗುರುಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ
ಉದ್ಯೋಗ ಖಾತರಿ ಯೋಜನೆಯಡಿ ಮಾಡಿರುವ ಕೆಲಸದ ಎರಡು ತಿಂಗಳ ಕೂಲಿ ಹಣ ಬಿಡುಗಡೆಗೆ ಒತ್ತಾಯಿಸಿ ಕೂಲಿ
ಕಾರ್ಮಿಕರು ಶುಕ್ರವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದ್ದಾರೆ.
ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿ ಎರಡು ತಿಂಗಳು ಕಳೆದರೂ 400ಕ್ಕೂ ಹೆಚ್ಚು ಕೂಲಿ ಕಾರ್ಮಿಕರ ಖಾತೆಗೆ ಈ ಕ್ಷಣದವರೆಗೆ ಹಣ ಜಮಾ ಮಾಡಿಲ್ಲ. ಅಧಿಕಾರಿಗಳನ್ನ ಕೇಳಿದರೆ ಇಲ್ಲ ಸಲ್ಲದ ಸಬೂಬು ಹೇಳುತ್ತಾರೆಯೇ ಹೊರತು ಹಣ ಜಮಾ ಮಾಡುವ ಗೋಜಿಗೆ ಹೋಗುತ್ತಿಲ್ಲ. ಕೂಲಿ ಹಣವನ್ನೇ ನಂಬಿಕೊಂಡು ಜೀವನ ನಡೆಸುವ ಕೂಲಿ ಕಾರ್ಮಿಕರು ಜೀವನ ನಡೆಸುವುದೇ ಕಷ್ಟ ಆಗಿದೆ. ಅಧಿಕಾರಿಗಳು ಈ ಕೂಡಲೇ ಹಣ ಬಿಡುಗಡೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕೆಲಸ ಪ್ರಾರಂಭಿಸುವ ದಿನ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ 15 ದಿನದಲ್ಲಿ ಕೂಲಿ ಹಣ ನೀಡುವ ಭರವಸೆ ನೀಡಿದ್ದರು. ಆದರೆ, ಎರಡು ತಿಂಗಳು ಕಳೆದರೂ ಹಣ ಜಮೆ ಮಾಡಿಲ್ಲ. ಶೌಚಾಲಯ ಕಟ್ಟಲು ಇನ್ನಿಲ್ಲದ ಆಸಕ್ತಿ ತೋರಿಸಲಾಗುತ್ತಿದೆ. ಖಾತರಿ ಹಣವನ್ನೇ ನಂಬಿಕೊಂಡಿರುವ ಕೂಲಿ ಕಾರ್ಮಿಕರತ್ತ ಗಮನವನ್ನೇ ನೀಡುತ್ತಿಲ್ಲ. ಆದಷ್ಟು ಬೇಗ ಹಣ ಬಿಡುಗಡೆ ಮಾಡುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಬಂದ ಮುಖ್ಯ ಲೆಕ್ಕಾಧಿಕಾರಿ ಆಂಜನೇಯ ಇತರರು, ಒಂದು ವಾರದಲ್ಲಿ ಖಾತೆಗೆ ಹಣ ಜಮೆ ಮಾಡಲಾಗುವುದು ಎಂಬ ಭರವಸೆ ನೀಡಿದ ಬಳಿಕವೇ ಪ್ರತಿಭಟನೆ ಹಿಂಪಡೆಯಲಾಯಿತು.
ಸಂಘದ ರಾಜ್ಯ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಗುಮ್ಮನೂರು ಕೃಷ್ಣ,ಮೂರ್ತಿ, ರುದ್ರೇಶ್, ಗುರುಸಿದ್ದಾಪುರ ಮಲ್ಲೇಶ್, ರಮೇಶ್, ಮಲ್ಲೇಶಪ್ಪ, ಯರಲಕುಂಟೆ ಕೆಂಚಪ್ಪ, ಆಲೂರುಹಟ್ಟಿ ತಿಪ್ಪೇಸ್ವಾಮಿ ನಾಯ್ಕ, ಓಂಕಾರನಾಯ್ಕ, ಪರಶುರಾಮ್ ಇತರರು ಇದ್ದರು.