Advertisement

ಬೀದಿಗೆ ಬಿದ್ದ ಕಾರ್ಮಿಕರ ಬದುಕು: ಪ್ರತಿಭಟನೆ

01:04 PM Apr 17, 2022 | Team Udayavani |

ಹಾರೋಹಳ್ಳಿ: ಕೈಗಾರಿಕಾ ಪ್ರದೇಶದ 2ನೇ ಹಂತದಲ್ಲಿರುವ ಟೊಕೈ ರಬ್ಬರ್‌ ಆಟೋ ಪಾರ್ಟ್ಸ್ ಇಂಡಿಯಾ ಕಾರ್ಖಾನೆಯ ವಿರುದ್ಧ ಏಕಾಏಕಿ ಲಾಕ್‌ ಔಟ್‌ ಪ್ರಶ್ನಿಸಿ ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟಿದ್ದು ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ.

Advertisement

ತಾಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 2ನೇ ಹಂತದಲ್ಲಿರುವ ಟೊಕೈ ರಬ್ಬರ್‌ ಆಟೋ ಪಾರ್ಟ್ಸ್ ಇಂಡಿಯಾ ಎಂಬ ಕಾರ್ಖಾ ನೆಯು ನಷ್ಟದ ನೆಪವೊಡ್ಡಿ ಏಕಾಏಕೀಮುಚ್ಚಿತ್ತು. ಇದರಿಂದ ಆಕ್ರೋಷಗೊಂಡ ಕಾರ್ಮಿಕರು ಅನಿರ್ದಿಷ್ಟಾವಧಿ ಪ್ರತಿಭಟನೆಗಿಳಿದಿದ್ದರು. ಇದೀಗ ಪ್ರತಿಭಟನೆ 6ನೇ ದಿನಕ್ಕೆ ತಲುಪಿದ್ದು ಆಡಳಿತ ಮಂಡಳಿ ಮಾತ್ರ ಕಾರ್ಮಿಕರ ಮೇಲೆ ಕಿಂಚಿತ್ತೂ ಕರುಣೆ ತೋರುವ ಕೆಲಸ ಮಾಡಿಲ್ಲ. ಕಾರ್ಮಿಕರ ಸಮಸ್ಯಗೆ ಪರಿಹಾರ ಸೂಚಿಸದೆ ಇರುವುದರಿಂದ ಕಾರ್ಮಿಕರ ಬದುಕು ಮೂರಾ ಬಟ್ಟೆಯಾಗಿದೆ.

ನಮಗೆ ಕೆಲಸ ಬೇಕು: ಇನ್ನು ಕಾರ್ಖಾನೆಯಲ್ಲಿ ಒಟ್ಟು 350ಕ್ಕೂ ಹೆಚ್ಚು ಜನ ಕೆಲಸ ನಿರ್ವಹಿಸುತ್ತಿದ್ದು, ಅಷ್ಟೂ ಜನರ ಕುಟುಂಬಗಳು ಬೀದಿಗೆ ಬಿದ್ದಿವೆ. ಇಷ್ಟು ದಿನ ಕಾರ್ಖಾನೆಯನ್ನು ನಂಬಿದ್ದ ಕಾರ್ಮಿಕರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದ ಆಡಳಿತ ಮಂಡಳಿಯವರ ವಿರುದ್ಧ ಕಾರ್ಮಿಕರು ಸಿಟ್ಟಾಗಿದ್ದಾರೆ. ಕಾರ್ಖಾನೆ ಆರಂಭ ವಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಕಾರ್ಮಿಕರ ಮುಖಂಡರು ಹೇಳಿದ್ದಾರೆ.

ಕಾರ್ಖಾನೆ ನಷ್ಟದಲ್ಲಿದ್ದರೆ ಅದರ ಬಗ್ಗೆ ಮೊದಲೇ ಕಾರ್ಮಿಕರಿಗೆ ಸೂಚನೆಯನ್ನು ನೀಡಬೇಕಿತ್ತು. ಆದರೆ ಯಾರಿಗೂ ಹೇಳದೇ ಕೇಳದೇ ರಾತ್ರೋರಾತ್ರಿ ಲಾಕ್‌ ಔಟ್‌ ಘೋಷಿಸುವ ಅಗತ್ಯ ಏನಿತ್ತು ಎಂಬುದು ಕಾರ್ಮಿಕರ ಪ್ರಶ್ನೆ. ಅಲ್ಲದೇ ಕಾರ್ಖಾನೆಗೆ ನಷ್ಟವಾಗುತ್ತಿದ್ದರೆ ಎಲ್ಲಿ ತಪ್ಪಾಗುತ್ತಿದೆ ಎಂಬುದನ್ನು ಕೂಲಂಕುಷವಾಗಿ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬಹುದಿತ್ತು.

19 ರವರೆಗೆ ಕಾದು ನೋಡುವ ತಂತ್ರ: ಜಿಲ್ಲಾ ಕಾರ್ಮಿಕಾಧಿಕಾರಿ, ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಸಂಧಾನ ಸಭೆ ಏ.19ರಂದು ನಡೆಯಲಿದೆ. ಸಂಧಾನ ಸಭೆ ಯಶಸ್ವಿಯಾದರೆ ಎಲ್ಲವನ್ನೂ ಮರೆತು ಕಾರ್ಖಾನೆಯ ಏಳಿಗೆಗಾಗಿ ದುಡಿಯಲಾಗುವುದು. ಇಲ್ಲವಾದರೆ ಸಂಬಂಧಪ ಟ್ಟವರೊಂದಿಗೆ ಚರ್ಚಿಸಿ ಉಗ್ರವಾದ ಹೋರಾಟವನ್ನು ಕೈಗೊಳ್ಳುವುದಾಗಿ ಕಾರ್ಮಿಕ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

Advertisement

ಅಲ್ಲದೆ ಆಡಳಿತ ಮಂಡಳಿಯೂ ಸಹ ಕಾರ್ಮಿಕರ ಬಗ್ಗೆ ಗಮನಹರಿಸಿ ಕೆಲಸ ಮಾಡಬೇಕೆಂಬುದು ಸಾರ್ವಜನಿಕರ ಅಭಿಪ್ರಾಯ ಆಗಿದೆ.

ಕಾರ್ಖಾನೆಗೆ ನಷ್ಟವಾಗಿದ್ದರೆ ಮೊದಲೇ ಹೇಳಬಹುದಿತ್ತು. ನಷ್ಟವಾಗುತ್ತಿದೆ, ಸಂಬಳ ಕೊಡಲಾಗುತ್ತಿಲ್ಲ ಮುಂದಿನ ದಿನಗಳಲ್ಲಿ ಕೊಡುತ್ತೇನೆ ಎಂದು ಕಾರ್ಮಿಕರ ಬಳಿ ಆಡಳಿತ ಮಂಡಳಿ ಚರ್ಚಿಸಬಹುದಿತ್ತು. ಆದರೆ ಅದ್ಯಾವುದೇ ಕೆಲಸವನ್ನು ಮಾಡದ ಆಡಳಿತ ಮಂಡಳಿ ಏಕಾಏಕೀ ಲಾಕ್‌ ಔಟ್‌ ಘೋಷಿಸಿದೆ. ಕಾರ್ಖಾನೆ ನಂಬಿಕೊಂಡು ಜೀವನ ನಡೆಸುತ್ತಿದ್ದ ಅಷ್ಟೂ ಕುಟುಂಬಗಳು ಬೀದಿಗೆ ಬಿದ್ದಿವೆ. ಕಾರ್ಖಾನೆ ಮರು ಆರಂಭವಾಗುವವರೆಗೂ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ. – ಕೃಷ್ಣ ಕಾಂತ್‌, ಅಧ್ಯಕ್ಷ ಟೊಕೈ ರಬ್ಬರ್‌ ಇಂಡಿಯಾ ಕಾರ್ಮಿಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next