ಬೆಂಗಳೂರು: ಎರಡು ದಿನಗಳ ಮಟ್ಟಿಗೆ ಸ್ಥಗಿತಗೊಂಡಿದ್ದ ನಗರದಲ್ಲಿರುವ ಹೊರ ರಾಜ್ಯಗಳ ಕಾರ್ಮಿಕರ ವಲಸೆ ಶುಕ್ರವಾರ ಮತ್ತೆ ಶುರುವಾಗಿದ್ದು, ಒಂದೇ ದಿನದಲ್ಲಿ ಬಿಹಾರಕ್ಕೆ 1,200 ಹಾಗೂ ಉತ್ತರ ಪ್ರದೇಶಕ್ಕೆ 2,398 ಕಾರ್ಮಿಕರು ವಿಶೇಷ ರೈಲಿನ ಮೂಲಕ ಪ್ರಯಾಣ ಬೆಳೆಸಿದರು. ಬೆಂಗಳೂರಿನಿಂದ ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಕಾರ್ಮಿಕರನ್ನು ಕರೆದೊಯ್ಯಲು ವಿಶೇಷ ರೈಲು ಮಧ್ಯಾಹ್ನದ ವೇಳೆಗೆ ಮಾಲೂರು ಮತ್ತು ಚಿಕ್ಕಬಾಣಾವರ ತಲುಪಿತು. ಸಂಜೆ 4ಗಂಟೆಗೆ ಚಿಕ್ಕಬಾಣಾವರದಿಂದ ಮೊದಲ ರೈಲು ಉತ್ತರ ಪ್ರದೇಶದ ಲಖನೌಗೆ 1,200 ಪ್ರಯಾಣಿಕರೊಂದಿಗೆ ಹೊರಟಿತು. ನಂತರ ಸಂಜೆ 4.25ಕ್ಕೆ ಮಾಲೂರಿನಿಂದ 1,200 ಕಾರ್ಮಿಕರನ್ನು ಹೊಂದಿರುವ ವಿಶೇಷ ರೈಲು ಬಿಹಾರದ ಧನಪುರಕ್ಕೆ ತೆರಳಿತು.
ಸಂಜೆ 6 ಗಂಟೆಗೆ ಚಿಕ್ಕಬಾಣಾವರದಿಂದ 1,198 ಕಾರ್ಮಿಕರೊಂದಿಗೆ ವಿಶೇಷ ರೈಲು ಲಖನೌಗೆ ಹೊರಟಿತು. ಒಂದೇ ದಿನ ಶ್ರಮಿಕ್ ವಿಶೇಷ ರೈಲಿನಲ್ಲಿ ಲಖನೌಗೆ 2,398 ಹಾಗೂ ಬಿಹಾರದ ಧನಪುರಕ್ಕೆ 1,200 ಕಾರ್ಮಿಕರು ಪ್ರಯಾಣ ಬೆಳೆಸಿದ್ದಾರೆ. ಲಾಕ್‌ಡೌನ್‌ನಿಂದಾಗಿ ಬೆಂಗಳೂರಿನಲ್ಲಿ ಸಿಲುಕಿದ್ದ ಹೊರರಾಜ್ಯಗಳ ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಲು ವಿಶೇಷ ರೈಲು ಸೇವೆ ಕಲ್ಪಿಸಿದ್ದು, ಈವರೆಗೆ ಬೆಂಗಳೂರಿನಿಂದ 12 ಶ್ರಮಿಕ್ ವಿಶೇಷ ರೈಲುಗಳಲ್ಲಿ ಹೊರರಾಜ್ಯಗಳ 14,181 ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ವಿಶೇಷ ತಪಾಸಣೆ: ಮಾಲೂರು ಮತ್ತು ಚಿಕ್ಕಬಾಣವರದ ರೈಲು ನಿಲ್ದಾಣದಲ್ಲಿ ಪ್ರತಿಯೊಬ್ಬ ಕಾರ್ಮಿಕರ ಆರೋಗ್ಯ ಪರಿಶೀಲಿಸಿ ನಂತರ ರೈಲಿಗೆ ಹತ್ತಿಸಲಾಗಿದೆ. ಈ ರೈಲು ನಿಗದಿತ ಸ್ಥಳ ಹೊರತುಪಡಿಸಿ ಬೇರೆಲ್ಲೂ ನಿಲ್ಲುವುದಿಲ್ಲ. ಊಟ ಮತ್ತು ಉಪಹಾರಕ್ಕೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಹೊರರಾಜ್ಯದ ಕಾರ್ಮಿಕರನ್ನು ಕರೆದೊಯ್ಯುವ ವಿಶೇಷ ರೈಲಿನ ಪ್ರತಿ ಬೋಗಿಗೂ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ. ಜತೆಗೆ ಸಮಾಜಿಕ ಅಂತರ ಪಾಲನೆ ಬಗ್ಗೆ ಎಚ್ಚರ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಕಾರ್ಮಿಕರಿಗೆ ಕೆ.ಆರ್. ಮಾರುಕಟ್ಟೆಯಿಂದ ಚಿಕ್ಕ ಬಾಣಾವರ ಹಾಗೂ ಮಾಲೂರಿಗೆ ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಕಾರ್ಮಿಕರು ಹತ್ತುವ ಸಂದರ್ಭದಲ್ಲಿ ನೂಕು ನುಗ್ಗಲು ಆಗಿದ್ದರಿಂದ ಸಾಮಾಜಿಕ ಅಂತರ ಇರಲಿಲ್ಲ.
ಮೆಜೆಸ್ಟಿಕ್‌ನಲ್ಲೂ ಕಾರ್ಮಿಕರು: ರಾಜ್ಯ ಸರ್ಕಾರ ನಮ್ಮನ್ನು ಊರಿಗೆ ಕಳುಹಿಸುತ್ತದೆ ಎಂಬ ಮಹದಾಸೆಯಿಂದ ನೂರಾರು ಸಂಖ್ಯೆಯಲ್ಲಿ ಉತ್ತರ ಕರ್ನಾಟಕದ ಕಾರ್ಮಿಕರು ಬೆಳಗ್ಗೆಯೇ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದಿದ್ದರು. ರಾಜ್ಯ ಸರ್ಕಾರ ಉಚಿತ ಬಸ್ ಸೇವೆ ಗುರುವಾರವೇ ಸ್ಥಗಿತಗೊಂಡಿದೆ. ಇದರ ಮಾಹಿತಿಯಿಲ್ಲದೆ ರಾಯಚೂರು ಮೂಲದ ನೂರಾರು ಕಾರ್ಮಿಕರು ಮೆಜೆಸ್ಟಿಕ್‌ಗೆ ಬಂದಿದ್ದರು. ಇದರಲ್ಲಿ ಮಕ್ಕಳು, ಗರ್ಭಿಣಿಯರೂ ಇದ್ದರು. ನಂತರ ಪೊಲೀಸರು ವಾಹನದ ವ್ಯವಸ್ಥೆ ಮಾಡಿ, ತಿಂಗಳಿಗೆ ಬೇಕಾಗುವಷ್ಟು ದಿನಸಿ ನೀಡಿ, ವಾಪಸ್ ಕಳುಹಿಸಿದರು.