ವಿಜಯಪುರ: ಹೋಬಳಿಯ ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಕಾಮಗಾರಿಗಳ ಅವ್ಯವಹಾರದ ವಿರುದ್ಧ ಅಧ್ಯಕ್ಷೆ, ಉಪಾಧ್ಯಕ್ಷ, ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದ ಘಟನೆ ಸಂಭವಿಸಿತು.
10 ಮಂದಿ ಗ್ರಾಮ ಪಂಚಾಯಿತಿ ಸದಸ್ಯರು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ್ದು, ಅವ್ಯವಹಾರಗಳು ನಡೆದಿರುವ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ನಾರಾಯಣಪುರ ಗ್ರಾಮದ ಪಂಚಾಯಿತಿ ಸದಸ್ಯ ಮುರಳೀಧರ ಮಾತನಾಡಿ, ನಾನು, ಪಂಚಾಯಿತಿಯಲ್ಲಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷನಾಗಿದ್ದರೂ ಪ್ರಯೋಜನವಿಲ್ಲ. ನಮ್ಮ ಮಾತಿಗೆ ಮಣೆಹಾಕುವುದಿಲ್ಲ, ನನ್ನನ್ನು ನಾಮಕಾವಸ್ತೆಗೆ ನೇಮಕ ಮಾಡಿದ್ದಾರೆ. ಅಧ್ಯಕ್ಷೆ, ಉಪಾಧ್ಯಕ್ಷರದ್ದೇ ಕಾರುಬಾರು, ಅಭಿವೃದ್ಧಿಯಾಗಬೇಕು ಎನ್ನುವ ದೃಷ್ಟಿಯಿಂದ ಹಳ್ಳಿಗಳಲ್ಲಿ ಸದಸ್ಯರು ಸ್ವಂತ ಹಣ ಖರ್ಚು ಮಾಡಿ ಕಾಮಗಾರಿಗಳು ಮಾಡಿಸಿ, ಪಂಚಾಯಿತಿಗೆ ಬಿಲ್ಲುಗಳು ಕೊಟ್ಟರೆ, 10 ತಿಂಗಳಾದರೂ ಬಿಲ್ಲುಗಳು ಮಾಡಿಕೊಟ್ಟಿಲ್ಲ. ಸಭೆಗಳಲ್ಲಿ ಮಾತನಾಡಲಿಕ್ಕೂ ಅವಕಾಶ ನೀಡಲ್ಲ, ಕೆಲ ಸದಸ್ಯರು ನಮ್ಮ ಬಗ್ಗೆ ಗೌರವವಿಲ್ಲದೆ ಮಾತನಾಡುತ್ತಾರೆ.ಹಳ್ಳಿಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸಲಿಕ್ಕೆ ಗಮನಹರಿಸುತ್ತಿಲ್ಲ, ಪೈಪ್ ಲೈನ್ ಮಾಡಿಕೊಟ್ಟಿಲ್ಲ, ಸದಸ್ಯರು ಕೆಲಸ ಮಾಡಿದರೂ ಅದಕ್ಕೆ ಬಿಲ್ಲು ಮಾಡಿಕೊಡಲ್ಲ ಎಂದು ಆರೋಪಿಸಿದರು.
ಶೆಟ್ಟಿಹಳ್ಳಿ ಗ್ರಾಮದ ಪಂಚಾಯಿತಿ ಸದಸ್ಯೆ ಮಂಜುಳಾ ಮಾತನಾಡಿ, ನಮ್ಮೂರಿನಲ್ಲಿ ನೀರಿನ ಸಮಸ್ಯೆ ಬಗೆಹರಿಸಿಕೊಡುವಂತೆ ಅರ್ಜಿ ಕೊಟ್ಟು 4 ತಿಂಗಳಾಗಿದೆ. ನೀರಿನ ಸಮಸ್ಯೆ ಬಗೆಹರಿಸಲಿಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ಕೊಳವೆಬಾವಿ ಒಂದು ಕೀ.ಮೀ.ದೂರದಲ್ಲಿದೆ. ಅಲ್ಲಿಂದ ನೀರು ಹೊತ್ತುಕೊಂಡು ಬರಲಿಕ್ಕೆ ಸಾಧ್ಯವಿದೆಯೇ? ಇದುವರೆಗೂ ಪೈಪ್ ಲೈನ್ ಮಾಡಿಕೊಟ್ಟಿಲ್ಲ. ಪೈಪ್ ಲೈನ್ ಮಾಡಬೇಕಾಗಿರುವ ಜಾಗದಲ್ಲಿ ಖಾಸಗಿಯವರು ಅವರ ಸ್ವಂತ ಖರ್ಚಿನಲ್ಲಿ ರಸ್ತೆಗೆ ಕಾಂಕ್ರೀಟ್ ಹಾಕಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗ ಅವರು ರಸ್ತೆ ಮಾಡಿದರೆ ಪುನಃ ಪೈಪ್ ಲೈನ್ ಮಾಡಲಿಕ್ಕೆ ಸಾಧ್ಯವಾಗಲ್ಲ, ನಾವು ಅವರ ಬಳಿ ಮನವಿ ಮಾಡಿಕೊಂಡಿದ್ದೇವೆ. ಆದರೆ, ಪಂಚಾಯಿತಿಯವರು ಬೇಜಾವಾಬ್ದಾರಿಯಿಂದ ವರ್ತನೆ ಮಾಡ್ತಾರೆ, ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಓ ಯಾರೂ ನಮ್ಮ ಸಮಸ್ಯೆಯ ಬಗ್ಗೆ ಗಮನಹರಿಸುತ್ತಿಲ್ಲ. ಪಂಚಾಯಿತಿಯಲ್ಲಿ ನಮ್ಮ ಧ್ವನಿಯನ್ನೇ ಕೇಳುತ್ತಿಲ್ಲ ಎಂದು ಆರೋಪಿಸಿದರು.
ಪಂಚಾಯಿತಿ ಆವರಣದಲ್ಲಿ ಸಿಮೆಂಟ್ ಕಾಂಕ್ರೀಟ್ ಅಳವಡಿಸಲಿಕ್ಕಾಗಿ 3 ಲಕ್ಷ ಹಣ ಮಂಜೂರು ಮಾಡಿಕೊಂಡಿದ್ದಾರೆ. ಇದನ್ನು ಮಾಡಬೇಕಾದರೆ ಸಭೆ ಕರೆದಿಲ್ಲ, ಕ್ರೀಯಾಯೋಜನೆ ತಯಾರು ಮಾಡಿಲ್ಲ, ಟೆಂಡರ್ ಕರೆದಿಲ್ಲ, ಹಳ್ಳಿಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದರ ಬದಲಾಗಿ, ಪಂಚಾಯಿತಿ ಬಳಿ ಕೆಲಸ ಮಾಡಿಸಿದ್ದಾರೆ. ಈ ಮೂಲಕ ಹಣ ಮಾಡಲಿಕ್ಕೆ ಹೊರಟಿದ್ದಾರೆಯೇ ಹೊರತು, ಹಳ್ಳಿಗಳ ಅಭಿವೃದ್ಧಿಗಾಗಿ ಅಲ್ಲ ಎಂದು ಕೆಲ ಸದಸ್ಯರು ಆರೋಪಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆನಂದಮ್ಮ ಪ್ರತಿಕ್ರಿಯೆ ನೀಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಉಪಾದ್ಯಕ್ಷರ ಚುನಾವಣೆ ನಡೆದಾಗ ನಾನು, ಕಾಂಗ್ರೆಸ್ ಬೆಂಬಲಿತ ಉಪಾಧ್ಯಕ್ಷರಿಗೆ ಮತ ನೀಡಿದ್ದು, ಜೆಡಿಎಸ್ ಗೆ ಮತ ನೀಡಲಿಲ್ಲ ಎನ್ನುವ ಕಾರಣಕ್ಕಾಗಿ ಕೆಲ ಮುಖಂಡರು, ಪ್ರತಿಯೊಂದು ಸಭೆಯಲ್ಲೂ ಜೆಡಿಎಸ್ ಸದಸ್ಯರ ಮೂಲಕ ಗಲಾಟೆ ಮಾಡಿಸುವುದು, ಚುನಾವಣೆಯಲ್ಲಿ ನಮಗೆ ಅಪಮಾನ ಮಾಡಿದ್ದಾರೆ. ಅದೇ ರೀತಿ ಅವರ ಮರ್ಯಾದೆ ತೆಗೆಯಬೇಕು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಈ ರೀತಿಯಾಗಿ ಮಾಡುತ್ತಿದ್ದಾರೆ.
ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪ್ರತಿಯೊಂದು ಹಳ್ಳಿಗೂ ಸಮಾನವಾಗಿ ಅನುದಾನ ಕೊಡುತ್ತಿದ್ದೇವೆ. ಕಾಂಗ್ರೆಸ್ ಗಿಂತ ಜೆಡಿಎಸ್ ನವರಿಗೆ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಹಿಂದೆ ಇದ್ದ ಪಿಡಿಓ ಸೇರಿದಂತೆ ಈಗಿನ ಪಿಡಿಓ ಗೂ ಶಾಸಕ ನಿಸರ್ಗ ನಾರಾಯಣಸ್ವಾಮಿ ಆಪ್ತ ಸಹಾಯಕರ ಕಡೆಯಿಂದ ಕರೆ ಮಾಡಿಸಿ, ನಾವು ಹೇಳಿದಂತೆ ಕೇಳಬೇಕು, ನಾವು ಹೇಳಿದ ಕೆಲಸಗಳನ್ನಷ್ಟೇ ಮಾಡಬೇಕು ಎಂದು ಎಚ್ಚರಿಕೆ ನೀಡುವ ಮೂಲಕ ನಮ್ಮ ಪಂಚಾಯಿತಿಗೆ ಮೂಗು ತೂರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುರಳಿಮೋಹನ್ ಮಾತನಾಡಿ, ನಮ್ಮ ವಿರುದ್ಧವಾಗಿ ಜೆಡಿಎಸ್ ನವರು ಮಾಡುತ್ತಿರುವ ಯಾವ ಆರೋಪವೂ ನಿಜವಲ್ಲ, ಪಂಚಾಯಿತಿಯಲ್ಲಿ ಮಾಡಿಕೊಟ್ಟಿರುವ ಬಿಲ್ಲುಗಳು ಯಾವಾಗ ಯಾರಿಗೆ ಎಷ್ಟಾಗಿವೆ ಎನ್ನುವ ಬಗ್ಗೆ ಪರಿಶೀಲನೆಯಾಗಲಿ, ಅವರ ಬಂಡವಾಳ ತಿಳಿಯಲಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಲಾವಣ್ಯ, ಜಯಮ್ಮ, ಭಾಗ್ಯಲಕ್ಷ್ಮೀ, ಗೀತಾ, ಮಂಜುಳಾ, ಮುನಿಆಂಜಿನಪ್ಪ, ಮಹೇಂದ್ರ.ಎನ್, ಎಂ.ಮುರಳೀಧರ, ಎ.ಮುನಿಯಪ್ಪ, ರಾಜಣ್ಣ, ಇದ್ದರು.