Advertisement

ಮುಖಂಡರ ಸಮ್ಮುಖದಲ್ಲೇ ಕಾರ್ಯಕರ್ತರ ಕಿತ್ತಾಟ

01:21 PM Oct 19, 2017 | |

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣಾ ರಾಜಕೀಯ ಗರಿಗೆದರುತ್ತಿದ್ದು, ಮುಖಂಡರ ಸಮ್ಮುಖದಲ್ಲೇ ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರು ಪರಸ್ಪರ ಕಿತ್ತಾಡಿದ ಘಟನೆ ನಗರದ ಗಿರಿದರ್ಶಿನಿ ಬಡಾವಣೆಯಲ್ಲಿ ನಡೆದಿದೆ.

Advertisement

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದವತಿಯಿಂದ ನಗರದ ಗಿರಿದರ್ಶಿನಿ ಬಡಾವಣೆ ಮತ್ತು ಆಲನಹಳ್ಳಿಗಳಲ್ಲಿ 1.66 ಕೋಟಿ ವೆಚ್ಚದ ಕಾಂಕ್ರೀಟ್‌ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ವರುಣಾ ಕ್ಷೇತ್ರದ ವಸತಿ ಜಾಗೃತಿ ಸಮಿತಿ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ, ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್‌, ಮಾಜಿ ಶಾಸಕ ಸತ್ಯನಾರಾಯಣ ಮೊದಲಾದವರು ಆಗಮಿಸಿದ್ದರು, ಶಿಷ್ಟಾಚಾರದ ಪ್ರಕಾರ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಆ ಭಾಗದ ಜಿಪಂ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಮಾದೇಗೌಡ ಮೊದಲಾದವರು ಆಗಮಿಸಿದ್ದರು.

ಜೈಕಾರದ ಅವಾಂತರ: ಈ ವೇಳೆ ಜೆಡಿಎಸ್‌ ಕಾರ್ಯಕರ್ತರು ಜೆಡಿಎಸ್‌ ಪಕ್ಷಕ್ಕೆ, ಶಾಸಕ ಜಿ.ಟಿ.ದೇವೇಗೌಡರಿಗೆ ಜೈಕಾರ ಕೂಗಿದರು. ಇದನ್ನು ಕಂಡ ಕಾಂಗ್ರೆಸ್‌ ಕಾರ್ಯಕರ್ತರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಾ.ಯತೀಂದ್ರ ಅವರಿಗೆ ಜೈಕಾರ ಕೂಗಿದರು. ಎರಡೂ ಪಕ್ಷದ ಕಾರ್ಯಕರ್ತರ ಘೋಷಣೆಗಳು ತಾರಕಕ್ಕೇರಿ ಪರಸ್ಪರ ತಳ್ಳಾಡಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಡೆಗೇ ಮುಖಂಡರುಗಳೇ ತಮ್ಮ ಪಕ್ಷದ ಕಾರ್ಯಕರ್ತರುಗಳನ್ನು ಸಮಾಧಾನಪಡಿಸಿದರು.

ನಂತರ ಅಲ್ಲಿಂದ ಆಲನಹಳ್ಳಿಗೆ ತೆರಳಿದ ಶಾಸಕ ಜಿ.ಟಿ.ದೇವೇಗೌಡ ಹಾಗೂ ಜೆಡಿಎಸ್‌ ಮುಖಂಡರು, ಇನ್ನೊಂದು ಕಾರ್ಯಕ್ರಮ ಮುಗಿಸಿ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್‌ ಬರುವವರೆಗೆ ಕಾದಿದ್ದು, ಭೂಮಿಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Advertisement

ರಾಜಕೀಯ ಸಲ್ಲದು: ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಡಾ ಅಧ್ಯಕ್ಷ ಡಿ.ಧ್ರುವಕುಮಾರ್‌, ಮುಡಾ ವತಿಯಿಂದ ಸಾವಿರಾರು ಕೋಟಿ ರೂ. ಖರ್ಚು ಮಾಡಿ ಚಾಮುಂಡೇಶ್ವರಿ ಕ್ಷೇತ್ರದ 58 ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ, ಶಾಸಕ ಜಿ.ಟಿ.ದೇವೇಗೌಡ ಕೆಲವು ಗ್ರಾಮಗಳಿಗೆ ನಾನು ಇಲ್ಲದಿರುವಾಗ ಗುದ್ದಲಿಪೂಜೆ ಮಾಡುತ್ತಾರೆ. ಆದರೆ ಯಾರು ಅಭಿವೃದ್ಧಿ ಮಾಡಿದ್ದಾರೆಂದು ಜನರಿಗೆ ಗೊತ್ತಿದೆ.

ಆದರೂ ಗೊಂದಲ ಸೃಷ್ಟಿಸುತ್ತಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಯಾರೂ ಕೂಡ ರಾಜಕೀಯ ಮಾಡಬಾರದು. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಿದ್ದರಾಮಯ್ಯನವರ ಕೊಡುಗೆ ಏನು? ಜಿ.ಟಿ. ದೇವೇಗೌಡರ ಕೊಡುಗೆ ಏನು? ಎಂಬುದು ಜನರಿಗೆ ಗೊತ್ತಿದೆ. ಸಿದ್ದರಾಮಯ್ಯನವರನ್ನು 2018ರ ಚುನಾವಣೆಯಲ್ಲಿ ಸೋಲಿಸುವುದು ಕನಸಿನ ಮಾತು ಎಂದು ತಿಳಿಸಿದರು.

ಗೊಂದಲ ಸೃಷ್ಟಿ ಸರಿಯಲ್ಲ: ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ನಾವು ರಾಜಕೀಯ ಮಾಡಲು ಬಂದಿಲ್ಲ. ಅಭಿವೃದ್ಧಿ ಕೆಲಸ ಮಾಡಲು ಬಂದಿದ್ದೇವೆ. ಗಿರಿದರ್ಶಿನಿ ಬಡಾವಣೆಯ ರಸ್ತೆಗಳು ತುಂಬಾ ಹದಗೆಟ್ಟಿದೆ ಎಂದು ಮುಖಂಡರು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದರಿಂದ ಮುಖ್ಯಮಂತ್ರಿಯವರ ಆದೇಶದ ಮೇರೆಗೆ ಮುಡಾ ಅಧ್ಯಕ್ಷರು ಹಣ ಮಂಜೂರು ಮಾಡಿದ್ದಾರೆ. ಹೀಗಾಗಿ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆಗೆ ಬಂದಿದ್ದೇವೆ. ವಿನಾಕಾರಣ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದರು.

ಶಾಸಕ ಎಂ.ಕೆ. ಸೋಮಶೇಖರ್‌, ಮಾಜಿ ಶಾಸಕ ಎಂ. ಸತ್ಯನಾರಾಯಣ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಸಿ.ಎನ್‌. ಮಂಜೇಗೌಡ, ಜಿಪಂ ಸದಸ್ಯರಾದ ರಾಕೇಶ್‌ ಪಾಪಣ್ಣ, ಮಾದೇಗೌಡ, ಬೀರಿಹುಂಡಿ ಬಸವಣ್ಣ, ಮೈಸೂರು ಮಿನರಲ್ಸ್‌ ನಿರ್ದೇಶಕ ನಾಡನಹಳ್ಳಿ ರವಿ, ಮುಡಾ ಸದಸ್ಯ ಶಿವಮಲ್ಲು, ಭಾಸ್ಕರ್‌, ಜಿಪಂ ಮಾಜಿ ಅಧ್ಯಕ್ಷ ಕೆ.ಸಿ. ಬಲರಾಂ, ಜಿಪಂ ಮಾಜಿ ಸದಸ್ಯರಾದ ರತ್ನಮ್ಮ ಗೋಪಾಲರಾಜ್‌ ಮುಂತಾದವರಿದ್ದರು.

ಸೋಲಿನ ಭೀತಿಯಿಂದ ಹತಾಶರಾಗಿರುವ ಶಾಸಕ ಜಿ.ಟಿ.ದೇವೇಗೌಡ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ  ಈ ರೀತಿ ರಾಜಕೀಯ ಮಾಡಬಾರದು.
-ಡಿ. ಧ್ರುವಕುಮಾರ್‌, ಮುಡಾ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next