ವಾಡಿ: ಪ್ರತಿನಿತ್ಯ ಕೆಲಸ ನೀಡುವಂತೆ ಆಗ್ರಹಿಸಿ ಎಸಿಸಿ ಸಿಮೆಂಟ್ ಕಂಪನಿಯ ಪವರ್ ಪ್ಲಾಂಟ್ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಆಡಳಿತದ ವಿರುದ್ಧ ದಿಢೀರ್ ಧರಣಿ ಆರಂಭಿಸಿದ ಪ್ರಸಂಗ ಮಂಗಳವಾರ ನಡೆಯಿತು.
ಬೆಳಗ್ಗೆ ಕೆಲಸಕ್ಕೆಂದು ಊಟದ ಬುತ್ತಿಯೊಂದಿಗೆ ಆಗಮಿಸಿದ್ದ ಕಾರ್ಮಿಕರು, ಕೆಲಸವಿಲ್ಲದೆ ಹೊರಗೆ ಬಂದು ದಿಢೀರ್ ಪ್ರತಿಭಟನೆ ಕೈಗೊಂಡು, ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ಮತ್ತು ಲಾಕ್‌ಡೌನ್ ನೆಪದಲ್ಲಿ ಕೆಲಸ ಕಸಿದುಕೊಂಡ ಎಸಿಸಿ ಕಂಪನಿ ಈಗ ಉತ್ಪಾದನೆ ಕುಸಿತ ಹಾಗೂ ವ್ಯಾಪಾರ ನಷ್ಟದ ನೆಪವೊಡ್ಡಿ ನಮ್ಮನ್ನು ಸಂಪೂರ್ಣ ಮನೆಗೆ ಕಳಿಸುವ ಹುನ್ನಾರ ನಡೆಸುತ್ತಿದೆ. ಒಟ್ಟು 300 ಗುತ್ತಿಗೆ ಕಾರ್ಮಿಕರು ಪವರ್ ಹೌಸ್ ಘಟಕದಲ್ಲಿ ಕಳೆದ 15 ವರ್ಷಗಳಿಂದ ದುಡಿಯುತ್ತಿದ್ದೇವೆ. ಆದರೆ ತಿಂಗಳಲ್ಲಿ 26 ಹಾಜರಿ ನೀಡುತ್ತಿದ್ದ ಕಂಪನಿ, ಕೋವಿಡ್ ಆತಂಕದಲ್ಲಿ 10ರಿಂದ 12 ಹಾಜರಿ ಕೊಡಲು ತೀರ್ಮಾನಿಸಿತ್ತು. ಈಗ ಲಾಕ್‌ಡೌನ್ ಕಳೆದು ಕೋವಿಡ್ ನಿಯಮಗಳು ಸಡಿಲಿಕೆಯಾಗಿವೆ. ಆದರೂ ಕಂಪನಿ ತಿಂಗಳಲ್ಲಿ 10 ಹಾಜರಿ ಮಾತ್ರ ನೀಡುತ್ತಿದೆ ಎಂದು ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ಕಲಬುರಗಿ ವಿಮಾನನಿಲ್ದಾಣದಲ್ಲಿ ತರಬೇತಿ ತಂಡ
ತಿಂಗಳಲ್ಲಿ 26 ದಿನ ಕೆಲಸ ಕಡ್ಡಾಯಗೊಳಿಸಬೇಕು. ಕಂಪನಿ ಅಧಿಕಾರಿಗಳು ಭರವಸೆ ನೀಡುವವರೆಗೂ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದರು. ನೂರಾರು ಕಾರ್ಮಿಕರು ಪವರ್ ಪ್ಲಾಂಟ್ ದ್ವಾರದ ಎದುರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರೆ, ಕಂಪನಿಯೊಳಗಿನ ಕಾರ್ಮಿಕರೂ ಕೆಲಸ ಕೈಬಿಟ್ಟು ಧರಣಿ ಆರಂಭಿಸಿದರು. ಕಾರ್ಮಿಕರ ಈ ದಿಢೀರ್ ನಿರ್ಧಾರದಿಂದ ಎಸಿಸಿ ಆಡಳಿತ ಮಂಡಳಿ ಪೊಲೀಸ್ ರಕ್ಷಣೆ ಕೋರಿತೇ ವಿನಃ ಕಾರ್ಮಿಕರ ಸಮಸ್ಯೆ ಕೇಳಲು ಮುಂದಾಗಲಿಲ್ಲ