ಮೈಸೂರು: ಲಾಕ್‌ಡೌನ್‌ನಿಂದ ಅತಂತ್ರರಾಗಿದ್ದ ವಲಸೆ ಕಾರ್ಮಿಕರು ಹಾಗೂ ವಿವಿಧ ವೃತ್ತಿಯಲ್ಲಿ ತೊಡಗಿದ್ದ 1,391 ಮಂದಿ ಭಾನುವಾರ ಮೈಸೂರಿಂದ ಶ್ರಮಿಕ್ ರೈಲಿನಲ್ಲಿ ಉತ್ತರ ಪ್ರದೇಶದ ಗೋರಖ್‌ಪುರ್‌ಗೆ ತೆರಳಿದರು. ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಕಟ್ಟಡ ಕಾರ್ಮಿಕರಾಗಿ, ಐಸ್ ಕ್ರೀಮ್, ಸೋಡ, ಟೀ ಅಂಗಡಿ ಸೇರಿದಂತೆ ವಿವಿಧ ಚಾಟ್ಸ್ ಮಾರಾಟ ಮಾಡಿ ಜೀವನ ರೂಪಿಸಿಕೊಂಡಿದ್ದ ಉತ್ತರ ಭಾರತೀಯರು 2 ತಿಂಗಳಿಂದ ಸಂಕಷ್ಟಕ್ಕೆ ಸಿಲುಕಿದ್ದರು.
ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಕಾರ್ಮಿಕರು ಲಾಕ್‌ಡೌನ್‌ನಿಂದ ಉದ್ಯೋಗವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದರು. ಲಾಕ್‌ಡೌನ್ ಮುಂದುವರಿಯುವ ಸಾಧ್ಯತೆಯಿಂದ ತವರಿಗೆ ಮರಳಲು ಬಯಸಿದ್ದರು. ಈ ಹಿನ್ನೆಲೆಯಲ್ಲಿ ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಹೆಸರು ನೋಂದಾ ಯಿಸಿದ್ದವರನ್ನು ಉತ್ತರ ಪ್ರದೇಶದ ಸರ್ಕಾರದ ಒಪ್ಪಿಗೆ ಮೇರೆಗೆ ಶ್ರಮಿಕ್ ರೈಲಿನ ಮೂಲಕ ಉತ್ತರ ಪ್ರದೇಶ ವಲಸೆ ಕಾರ್ಮಿಕರನ್ನು ಕಳುಹಿಸಲು ಕ್ರಮ ಕೈಗೊಳ್ಳಲಾಗಿತ್ತು.
ಶನಿವಾರ ಮೈಸೂರಿನ ಅಶೋಕಪುರಂ ರೈಲು ನಿಲ್ದಾಣದಿಂದ ಉತ್ತರ ಪ್ರದೇಶದ ಗೊರಖ್ ಪುರ್‌ಗೆ 1,520 ಮಂದಿ ಪ್ರಯಾಣ ಬೆಳೆಸಿದ್ದರು. 2ನೇ ದಿನ ಭಾನುವಾರ 1391 ಮಂದಿ ಕಾರ್ಮಿಕರು ತಮ್ಮ ಲಗ್ಗೇಜ್‌ನೊಂದಿಗೆ ಶ್ರಮಿಕ್ ವಿಶೇಷ ರೈಲಿನ ಮೂಲಕ ಪ್ರಯಾಣ ಬೆಳೆಸಿದರು. ಬೆಳಗ್ಗೆ 8 ಗಂಟೆಯಿಂದಲೇ ಲಗ್ಗೇಜ್ ಹೊತ್ತು ಬಂದ ಕಾರ್ಮಿಕರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ಯಾನ್ ಮಾಡಿ ತಪಾಸಣೆಗೊಳಪಡಿಸಿ, ಆರೋಗ್ಯ ಪ್ರಮಾಣ ಪತ್ರ ನೀಡಿದರು. ರೈಲ್ವೆ ಇಲಾಖೆ ದಾಖಲೆ ಪರಿಶೀಲಿಸುವ ಕೌಂಟರ್ ಬಳಿ ಬಂದು ತಮ್ಮ ಆಧಾರ್ ಕಾರ್ಡ್, ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ನೋಂದಾಯಿಸಿದ್ದ ಸಂಖ್ಯೆ ಹಾಗೂ ವಿಳಾಸದ ದಾಖಲೆ ಹಾಜರುಪಡಿಸಿದ ನಂತರ ಟಿಕೆಟ್ ಕೌಂಟರ್ ಬಳಿ ಹೋಗಲು ಅವಕಾಶ ನೀಡಲಾಯಿತು.
1,391 ಮಂದಿ ತಪಾಸಣೆ ಗೊಳಪಟ್ಟು ಟಿಕೆಟ್ ಪಡೆದು ನಿಗದಿ ಮಾಡಿದ ಬೋಗಿಯಲ್ಲಿ ಆಸೀನರಾದ ಬಳಿಕವಷ್ಟೇ ಮಧ್ಯಾಹ್ನ 2.15ಕ್ಕೆ ಅಶೋಕಪುರಂ ನಿಲ್ದಾಣದಿಂದ ವಿಶೇಷ ರೈಲು ಪ್ರಯಾಣ ಬೆಳೆಸಿತು. ಮಂಗಳವಾರ(ಮೇ 19) ಬೆಳಗ್ಗೆ 7ಕ್ಕೆ ಗೊರಖ್‌ಪುರ ತಲುಪಲಿದೆ. ಕಾರ್ಮಿಕರಿಗೆ ರೋಟರಿ ಕ್ಲಬ್ ಮತ್ತು ಜಿಲ್ಲಾ ಡಳಿತದಿಂದ ತಿಂಡಿ, ನೀರಿನ ಬಾಟಲ್ ನೀಡಿ ಸತ್ಕರಿಸಿ ಬೀಳ್ಕೊಟ್ಟರು. ರೈಲ್ವೆ ಇಲಾಖೆ ಎಡಿಆರ್ ಎಂ ಶ್ರೀನಿವಾಸಲು, ವಾಣಿಜ್ಯ ಉಪನಿಬಂಧಕ ಡಾ.ಯತೀಶ್ ಉಪಸ್ಥಿತರಿದ್ದರು.
ಆತ್ಮಸ್ಥೈರ್ಯ ತುಂಬಿದ ಡೀಸಿ: ಅಶೋಕಪುರಂ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಡೀಸಿ ಅಭಿರಾಮ್ ಜಿ.ಶಂಕರ್, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಕಾರ್ಮಿಕರಿಗೆ ಆತ್ಮಸ್ಥೈರ್ಯ ತುಂಬಿದರು. ಎಲ್ಲರ ಆರೋಗ್ಯವನ್ನು ವಿಚಾರಿಸಿದರು. ಸುರಕ್ಷಿತವಾಗಿ ಗೋರಖ್‌ಪುರ್‌ಗೆ ಸೇರುತ್ತೀರಿ. ಆತಂಕಕ್ಕೆ ಒಳಗಾದದೆ ಪ್ರಯಾಣಿಸಿ ಎಂದು ಸಲಹೆ ನೀಡಿದರು.