Advertisement

ಸಮಾಜವಾದದಿಂದ ಕಾರ್ಮಿಕರಿಗೆ ನೆಮ್ಮದಿ

03:03 PM May 02, 2022 | Team Udayavani |

ರಾಯಚೂರು: ನಗರದ ಸೇರಿ ಜಿಲ್ಲಾದ್ಯಂತ ಕಾರ್ಮಿಕ ಸಂಘಟನೆಗಳಿಂದ 136ನೇ ಕಾರ್ಮಿಕ ದಿನ ಆಚರಿಸಲಾಯಿತು.

Advertisement

ಕಾರ್ಮಿಕರ ದಿನದ ಅಂಗವಾಗಿ ದಿನಕ್ಕೆ ಎಂಟು ಗಂಟೆಗಳ ದುಡಿಮೆ ಮತ್ತು ಇತರೆ ಕಾರ್ಮಿಕರ ಹಕ್ಕುಗಳ ಮೇಲಿನ ದಾಳಿಗಳನ್ನು ವಿರೋಧಿಸಿ ನಗರದ ಅಂಬೇಡ್ಕರ್‌ ವೃತ್ತದಿಂದ ರಂಗಮಂದಿರದವರೆಗೂ ಎಐಯುಟಿಯುಸಿ ಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಕಾರ್ಮಿಕರ ರ್ಯಾಲಿ ನಡೆಸಲಾಯಿತು. ಬಳಿಕ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಿತು.

ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಡಿ.ನಾಗಲಕ್ಷ್ಮೀ ಮಾತನಾಡಿ, ಬಹುಸಂಖ್ಯಾತ ದುಡಿಯುವ ಜನರ ಪರಿಸ್ಥಿತಿ ಇಂದು ಬಹಳ ಶೋಚನೀಯವಾಗಿದೆ. ಮಾಲೀಕರು 10ರಿಂದ 12 ಗಂಟೆಗಳ ಕಾಲ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದಾರೆ. ಆದರೆ, ದುಡಿಮೆಗೆ ತಕ್ಕಂತೆ ಅವರಿಗೆ ವೇತನ ನೀಡುತ್ತಿಲ್ಲ. ಸರ್ಕಾರಗಳು ಮಾಲೀಕರ ಪರ ಕಾರ್ಮಿಕರ ಕಾಯ್ದೆಗಳನ್ನು ತಿದ್ದುಪಡಿ ಮಾಡುತ್ತಿವೆ ಎಂದು ದೂರಿದರು.

1886ರಲ್ಲಿ ಅಮೆರಿಕಾದಲ್ಲಿ ನಡೆದ ಕಾರ್ಮಿಕರ ಹೋರಾಟದಂತೆ ಇಂದು ಕೂಡ ಮತ್ತೆ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. 136 ವರ್ಷಗಳ ಹಿಂದೆ ಅಮೆರಿಕದ ಕಾರ್ಮಿಕರು ಎಂಟು ಗಂಟೆ ದುಡಿಮೆಗಾಗಿ ದೊಡ್ಡ ಪ್ರಮಾಣದ ಹೋರಾಟ ಕೈಗೊಂಡಿದ್ದರು. ಅವರ ಹೋರಾಟದ ಫಲವಾಗಿ ನಾವು ಎಂಟು ಗಂಟೆಗಳ ದುಡಿಮೆಯ ಸೌಲಭ್ಯ ಪಡೆದಿದ್ದೇವೆ. ಆದರೆ, ಇಂದು ಮತ್ತೆ ಹಳೆಯ ಪರಿಸ್ಥಿತಿಗೆ ಕಾರ್ಮಿಕರನ್ನು ತಳ್ಳುವ ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ ಎಂದರು.

ಈ ಎಲ್ಲ ಸಮಸ್ಯೆಗಳಿಗೆ ಬಂಡವಾಳಶಾಹಿ ವ್ಯವಸ್ಥೆಯೇ ಮೂಲ ಕಾರಣವಾಗಿದೆ. ಆದ್ದರಿಂದ ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತೂಗೆದು ಕಾರ್ಮಿಕರ ವರ್ಗದ ಸಮಾಜವಾದಿ ವ್ಯವಸ್ಥೆ ನಿರ್ಮಿಸಿದಾಗ ಮಾತ್ರ ಕಾರ್ಮಿಕರು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.

Advertisement

ಸಂಘಟನೆ ಜಿಲ್ಲಾಧ್ಯಕ್ಷ ಎನ್‌.ಎಸ್‌. ವೀರೇಶ ಮಾತನಾಡಿ, ಇಂದು ಭಾರತದಲ್ಲಿ ಬಡತನ ನಿರುದ್ಯೋಗ ಸಮಸ್ಯೆ ಜಾಸ್ತಿಯಾಗುತ್ತಿದೆ. ರೈತರು ಬೆಳೆಗೆ ಬೆಲೆ ಇಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಾರ್ಮಿಕರಂತೂ ದುಡಿಯುವುದರಲ್ಲೇ ಜೀವನ ಸವೆಸುತ್ತಿದ್ದಾರೆ. ಕಾಂಗ್ರೆಸ್‌ಗಿಂತ ಭಿನ್ನ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಕೂಡ 40% ಕಮಿಶನ್‌ ಪಡೆದು ಸರ್ಕಾರ ನಡೆಸುತ್ತಿದೆ. ಭ್ರಷ್ಟಾಚಾರ ಎಲ್ಲೆಡೆ ತಾಂಡವವಾಡುತ್ತಿದೆ. ಈ ಎಲ್ಲ ನೈಜ ಸಮಸ್ಯೆಗಳಿಂದ ಜನರನ್ನು ದಿಕ್ಕು ತಪ್ಪಿಸಲು ಇಂದು ಜಾತಿ ಧರ್ಮಗಳ ಹೆಸರಿನಲ್ಲಿ ವಿಷಬೀಜಗಳನ್ನು ಬಿತ್ತಿ ಒಡೆದಾಳುವ ನೀತಿ ತರುತ್ತಿದ್ದಾರೆ. ಕಾರ್ಮಿಕರು ಐಕ್ಯತೆಯಿಂದ ಹೋರಾಡಿ ದೇಶ ಕಾಪಾಡಬೇಕಿದೆ ಎಂದರು.

ಜಿಲ್ಲಾ ಉಪಾಧ್ಯಕ್ಷ ಅಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ತಿರುಮಲ ರಾವ್‌ ಮಾತನಾಡಿದರು. ಜಿಲ್ಲಾ ಉಪಾಧ್ಯಕ್ಷ ಮಹೇಶ್‌ ಚಿಕಲಪರ್ವಿ ಕಾರ್ಯಕ್ರಮ ನಡೆಸಿಕೊಟ್ಟರು. ಈರಮ್ಮ, ಪ್ರಭಾವತಿ, ಲಕ್ಷ್ಮೀ, ರಾಧಾ, ರಾಘವೇಂದ್ರ ಪಾಟೀಲ್‌, ರಾಮಾಂಜನೇಯ, ನಾಗರಾಜ್‌, ಯಲ್ಲಪ್ಪ ನಾಮಾಲಿ, ನರಸಪ್ಪ, ಸಲೀಂ ಸೇರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next