ಗಂಗಾವತಿ: ಕೆಲಸ ಕಾಯಂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಕಳೆದ 8 ತಿಂಗಳಿಂದ ನಗರಸಭೆ ಎದುರು ನಿರಂತರ ಪ್ರತಿಭಟನೆ ನಡೆಸುತ್ತಿದ್ದ 162 ಹೊರಗುತ್ತಿಗೆ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಲು ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದರಿಂದ ಧರಣಿ ಅಂತ್ಯಗೊಂಡಿದೆ.
ಕಳೆದ 8 ತಿಂಗಳಿಂದ ಹೊರಗುತ್ತಿಗೆ ಪೌರಕಾರ್ಮಿಕರು ನಗರಸಭೆ ಎದುರು ಅನಿರ್ದಿಷ್ಟ ಧರಣಿ ನಡೆಸುತ್ತಿದ್ದರು. ಹಲವು ಬಾರಿ ಜನಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿ ಸಹಾಯಕ ಆಯುಕ್ತರು, ನಗರಸಭೆ ಕೋಶಾಧಿಕಾರಿ ಸೇರಿ ಹಲವು ಅಧಿಕಾರಿಗಳು ಕಾರ್ಮಿಕರ ಹೋರಾಟ ಅಂತ್ಯಗೊಳಿಸಲು ಯತ್ನ ನಡೆಸಿದರೂ ಸಫಲವಾಗಿರಲಿಲ್ಲ. ಜಿಲ್ಲೆಗೆ ಆಗಮಿಸಿದ ನೂತನ ಜಿಲ್ಲಾಧಿಕಾರಿ ಸುನೀಲಕುಮಾರ ಕಾರ್ಮಿಕ ಕಡತ ಹಾಗೂ ಹಲವು ದಾಖಲೆ ಪರಿಶೀಲನೆ ನಡೆಸಿ ಎಲ್ಲ 162 ಹೊರಗುತ್ತಿಗೆ ಪೌರಕಾರ್ಮಿಕರನ್ನು ಕಾಯಂ ಮಾಡಿ ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಕಾರ್ಮಿಕರ ಹುದ್ದೆಗಳಿಗೆ ನಿಯೋಜನೆ ಮಾಡುವ ಆದೇಶ ಹೊರಡಿಸಿದ್ದು, ಇದಕ್ಕೆ ಸೂಕ್ತ ದಾಖಲೆ ಸಲ್ಲಿಸಲು ಅನುಕೂಲ ಮಾಡಿಕೊಡಲು ತೀರ್ಮಾನ ಕೈಗೊಂಡಿರುವುದು ಕಾರ್ಮಿಕ ಹಿತ ಕಾಪಾಡಿದಂತಾಗಿದೆ.
ಸಮಸ್ಯೆ ಪರಿಹಾರಕ್ಕೆ ಯತ್ನ: ಸತತ ಮೂರು ವರ್ಷಗಳಿಂದ ಕಾರ್ಮಿಕರು ಪ್ರಗತಿಪರ ಪೌರಕಾರ್ಮಿಕ ಸಂಘಟನೆ ನೇತೃತ್ವದಲ್ಲಿ ಹೋರಾಟ ನಡೆಸಿ ಬೇಡಿಕೆ ಈಡೇರಿಸುಂತೆ ಒತ್ತಾಯ ಹೇರಿದ್ದರು. ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ಹಲವು ಬಾರಿ ಮಾತುಕತೆ ನಡೆದರೂ ಸಮಸ್ಯೆಗೆ ಪರಿಹಾರ ದೊರಕಿರಲಿಲ್ಲ. ಇತ್ತೀಚೆಗೆ ಪ್ರಭಾರಿ ಪೌರಾಯುಕ್ತರಾಗಿ ಆಗಿಮಿಸಿದ್ದ ಪ್ರೊಬೇಷನರಿ ಜಿಲ್ಲಾಧಿಕಾರಿ ಅಕ್ಷಯ್ ಶ್ರೀಧರ್ ಕಾರ್ಮಿಕರ ಸಮಸ್ಯೆ ಬಗೆಹರಿಸಲು ತೀವ್ರ ಯತ್ನ ನಡೆಸಿ ಜಿಲ್ಲಾಧಿಕಾರಿಗಳ ಜತೆ ಸತತ ಸಂಪರ್ಕ ನಡೆಸಿ ದಾಖಲಾತಿಗಳೊಂದಿಗೆ ಕಾರ್ಮಿಕ ಸಂಘಟನೆ ಜತೆ ಮಾತನಾಡಿ ಕೊನೆಗೂ 162 ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಜಿಲ್ಲಾಡಳಿತ ನಿರ್ಧಾರ ಮಾಡಿ ಆದೇಶ ಹೊರಡಿಸಿದೆ.
ನಗರಸಭೆ 162 ಹೊರಗುತ್ತಿಗೆ ಪೌರ ಕಾರ್ಮಿಕರನ್ನು ಪುನಃ ನೇಮಕ ಮಾಡಿಕೊಳ್ಳುವ ನಿರ್ಧಾರದಿಂದ ಸಂತೋಷವಾಗಿದೆ. 2016ರಲ್ಲಿ ಆಡಳಿತ ಮಂಡಳಿ 162 ಜನ ಗುತ್ತಿಗೆ ಪೌರಕಾರ್ಮಿಕರನ್ನು ಕೆಲಸದಿಂದ ಬಿಡಿಸಿ, ಬೀದಿಪಾಲು ಮಾಡಿ ಹೊಸಬರನ್ನು ಕೆಲಸಕ್ಕೆ ತೆಗೆದುಕೊಳ್ಳಲು ಹುನ್ನಾರ ನಡೆಸಿತ್ತು. ಆಗ ಮಾಜಿ ಸಚಿವ ಶಿವರಾಜ ತಂಗಡಗಿ ಕಾರ್ಮಿಕರ ಸಮಸ್ಯೆಗಳನ್ನು ಅಂದಿನ ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದು ರಾಜ್ಯದ 32 ಸಾವಿರ ಹೊರಗುತ್ತಿಗೆ ಪೌರಕಾರ್ಮಿಕರಿಗೆ ನೇರವಾಗಿ ಸರಕಾರದಿಂದ ವೇತನ ಪಾವತಿಯಾಗುವಂತೆ ಐತಿಹಾಸಿಕ ಆದೇಶ ಮಾಡಿಸಿದ್ದರು. ಈ ಸಂದರ್ಭದಲ್ಲಿ ಕೆಲ ರಾಜಕೀಯ ಧುರೀಣರು ಗಂಗಾವತಿಯಲ್ಲಿ 162 ಕಾರ್ಮಿಕರ ವಿಷಯದಲ್ಲಿ ಮಲತಾಯಿ ಧೋರಣೆ ನಡೆಸಿ ಅನ್ಯಾಯ ಮಾಡಿದ್ದರು. ಈಗ ಸಮಸ್ಯೆ ಬಗೆಹರಿದಿದೆ.
ಪರಶುರಾಮ, ಅಧ್ಯಕ್ಷರು
ಪ್ರಗತಿಪರ ಕಾರ್ಮಿಕರ ಸಂಘ.